ತುಮಕೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯಾಗಿದ್ದು ಅ.27ರಂದು ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಜಿಲ್ಲೆಯಲ್ಲಿ 55650 ಯುವ ಮತದಾರರು ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಕರಡು ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 1123062 ಪುರುಷರು, 1132016 ಮಹಿಳೆಯರು ಹಾಗೂ 104 ಇತರೆ ಮತದಾರರು ಸೇರಿ ಒಟ್ಟು 2255182 ಮತದಾರರಿದ್ದಾರೆ. ಇದರಲ್ಲಿ 30572 ವಿಕಲಚೇತನ ಮತದಾರರು ಹಾಗೂ 100 ವರ್ಷ ಮೇಲ್ಪಟ್ಟ 707 ಶತಾಯುಷಿ ಮತದಾರರು ಒಳಗೊಂಡಿದ್ದಾರೆ.
2023ರ ಜನವರಿ 5 ರಿಂದ ಅಕ್ಟೋಬರ್ 27ರ ವರೆಗೆ 15511 ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಹೊನ್ನವಳ್ಳಿ ಹೋಬಳಿ ಹೊಸಪಟ್ಟಣ ಹಾಗೂ ನೊಣವಿನಕೆರೆ ಹೋಬಳಿ ಹೊನ್ನೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 2 ಹೊಸ ಮತಗಟ್ಟೆ ಸ್ಥಾಪಿಸಲಾಗಿದೆ.