ತುಮಕೂರು: ಬೆಂಗಳೂರು ವಿಭಾಗ ಮತ್ತು ರಾಜ್ಯ ಮಟ್ಟದ 14 ಮತ್ತು 17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ಖೋ ಖೋ ಪಂದ್ಯಾವಳಿ ಅ.10ರಂದು ನಡೆಯಲಿದ್ದು ಸರ್ವೋದಯ ಮೈದಾನ ಸಜ್ಜಾಗಿದೆ.
ಜಿಲ್ಲಾಡಳಿತ, ಜಿಪಂ, ಶಾಲಾ ಶಿಕ್ಷಣ ಇಲಾಖೆ ಹಾಗೂ ಸರ್ವೋದಯ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಪಂದ್ಯಾವಳಿ ನಡೆಯಲಿದ್ದು ತುಮಕೂರು ಬಿಇಒ, ಖೋಖೋ ರಾಷ್ಟ್ರೀಯ ಆಟಗಾರ್ತಿ ಡಾ.ಸೂರ್ಯಕಲಾ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ಮಂಗಳವಾರ ಬೆಳಿಗ್ಗೆ ಪಂದ್ಯಾವಳಿಗೆ ಚಾಲನೆ ಸಿಗಲಿದ್ದು, ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಕ್ಕೆ ಪ್ರತ್ಯೇಕವಾದ ನಾಲ್ಕು ಅಂಕಣ ತಯಾರಿಸಲಾಗಿದೆ. ಆಟಗಾರರಿಗೆ ಅಭ್ಯಾಸ ಪಂದ್ಯಕ್ಕಾಗಿ ಎರಡು ಅಂಕಣಗಳನ್ನು ಮಿಸಲಿರಿಸಲಾಗಿದೆ. ಒಟ್ಟು ಆರು ಅಂಕಣಗಳು ಕ್ರೀಡಾಪಟುಗಳಿಗೆ ಲಭ್ಯವಿದೆ.
ಬೆಂಗಳೂರು ವಿಭಾಗದಲ್ಲಿ 11 ಜಿಲ್ಲೆಗಳಿಂದ ಪ್ರೌಢ ಶಾಲಾ ವಿಭಾಗದಿಂದ ಬಾಲಕ ಬಾಲಕಿಯರ 22 ತಂಡಗಳು, ಪ್ರಾಥಮಿಕ ಶಾಲೆಯಿಂದ 22 ಒಟ್ಟು 44 ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿವೆ.
ವಿಭಾಗ ಮಟ್ಟದ ಪಂದ್ಯಾವಳಿಯು ನಾಕ್‌ಔಟ್ ಮಾದರಿಯಲ್ಲಿ ನಡೆಯಲಿದೆ. ಗೆದ್ದ ತಂಡಗಳು ಮುಂದಿನ ಹಂತಕ್ಕೆ ನಡೆದರೆ, ಸೋತ ತಂಡಗಳು ಮನೆಯ ಹಾದಿ ತುಳಿಯಲಿವೆ.
ಅತಿಥೇಯ ಸರ್ವೋದಯ ಶಾಲೆಯ ಬಾಲಕರು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಕಣಕ್ಕೆ ಇಳಿಯುತ್ತಿದ್ದು ಪ್ರಶಸ್ತಿ ಗೆಲ್ಲಲು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ , ಉತ್ತರ ಮತ್ತು ದಾವಣಗೆರೆ ತಂಡಗಳು ಹಾಟ್ ಫೇವರೀಟ್ ಎನ್ನಿಸಿವೆ.
ಬಾಲಕಿಯರ ವಿಭಾಗದಲ್ಲಿ ರಾಮನಗರ , ಚಿತ್ರದುರ್ಗ ಹಾಗೂ ಪ್ರಾಥಮಿಕ ಶಾಲಾ ಹಂತದಲ್ಲಿ ಅತಿಥೇಯ ತುಮಕೂರು ತಂಡಗಳು ನೆಚ್ಚಿನ ತಂಡಗಳಾಗಿವೆ.
ವಿಭಾಗ ಮಟ್ಟದಲ್ಲಿ ಗೆದ್ದ ತಂಡಗಳು ರಾಜ್ಯಮಟ್ಟಕ್ಕೆ ಅರ್ಹತೆ ಪಡೆಯಲಿವೆ. ಈ ಕ್ರೀಡಾಕೂಟದಲ್ಲಿ 600 ಕ್ಕೂ ಹೆಚ್ಚು ಮಕ್ಕಳು, 100 ಕ್ಕೂ ಹೆಚ್ಚು ಕ್ರೀಡಾಧಿಕಾರಿಗಳು ಭಾಗವಹಿಸುವರು.