ತುಮಕೂರು: ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯಿಂದ ಕಂಗೆಟ್ಟಿರುವ ಸರ್ಕಾರ ಬೆಂಗಳೂರಿನ ಹೃಯದ ಭಾಗದಲ್ಲಿರುವ "ರೇಸ್ ಕೋರ್ಸ್" ನ್ನು ತುಮಕೂರಿನ ಕುಣಿಗಲ್ ಗೆ ಸ್ಥಳಾಂತರಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ.
ಕುಣಿಗಲ್ ಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಆರಂಭಿಸಿದ್ದ ಸ್ಟಡ್ ಫಾರಂ ಈಗ ಪಶುಪಾಲನಾ ಇಲಾಖೆ ವಶದಲ್ಲಿದ್ದು ಇಲ್ಲಿನ 400 ಎಕರೆ ಫಲವತ್ತಾದ ಭೂಮಿಯ ಮೇಲೆ ಖಾಸಗಿಯವರ ಕಣ್ಣು ಬಿದ್ದಿದೆ.
ಈ ಜಮೀನಿನಲ್ಲಿ 100 ಎಕರೆ ಪ್ರದೇಶವನ್ನು ರೇಸ್ ಕೋರ್ಸ್ ಗೆ ಬಳಸಿಕೊಳ್ಳಬಹುದು, ಸ್ಥಳೀಯ ಜನಕ್ಕೆ ಉದೋಗ ಸೃಷ್ಠಿ ಮಾಡುವ ಯೋಜನೆಗಳನ್ನು ಇಲ್ಲಿಗೆ ತರುವ ಚಿಂತನೆಯಿದ್ದು ಈ ಬಗ್ಗೆ ಸಿಎಂ ಜತೆ ಕೂಡ ಚರ್ಚಿಸಲಾಗಿದೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಬೆಂಗಳೂರಿನಲ್ಲಿರುವ ರೇಸ್‌ಕೋರ್ಸ್ ಕುಣಿಗಲ್ ಕುದುರೆ ಫಾರಂನ್ನ 100 ಎಕರೆ ಪ್ರದೇಶಕ್ಕೆ ಸ್ಥಳಾಂತರ ಮಾಡಬೇಕು ಎನ್ನುವ ಚಿಂತನೆ ಸರ್ಕಾರದಲ್ಲಿದೆ, ಕುಣಿಗಲ್ ಪಟ್ಟಣ ಆರ್ಥಿಕವಾಗಿ ಸದೃಢವಾಗಲಿದೆ. ವ್ಯಾಪಾರ ವಹಿವಾಟು ಹೆಚ್ಚಾಗಲಿದೆ ಎಂದು ಹೇಳಿದ ಸಂಸದರು ಇನ್ನುಳಿಯುವ 300 ಎಕರೆ ಬಗ್ಗೆ ಚಕಾರ ಎತ್ತದಿರುವುದು ಜನರಲ್ಲಿ ಕುತೂಹಲದ ಜತೆಗೆ ಆತಂಕವನ್ನು ಮೂಡಿಸಿದೆ.
400 ಎಕರೆಗೂ ಹೆಚ್ಚು ಇರುವ ಕುದುರೆ ಫಾರಂನಲ್ಲಿ ರೇಸ್ ಕೋರ್ಸ್ ನಿರ್ಮಾಣ ಮಾಡಲು 100 ಎಕರೆ ಜಾಗ ಸಾಕು. ಉಳಿಕೆ ಜಾಗದಲ್ಲಿ ಕುದರೆ ಸಾಕಾಣಿಕೆ ಮಾಡಬಹುದು. ಜತೆಗೆ ಐಟಿಬಿಟಿ ಪಾರ್ಕ್ ನಿರ್ಮಾಣ ಮಾಡಬಹುದು ಎಂಬ ಸುಳಿವು ಕೂಡ ಸಂಸದರು ಸ್ಟಡ್ ಫಾರಂಗೆ ಭೇಟಿ ಸಂದರ್ಭದಲ್ಲಿ ನೀಡಿದ್ದಾರೆ.