ಜಿಲ್ಲೆ

ವಿದ್ಯಾರ್ಥಿಗಳ ಬೆಂಬಲದಿಂದ ತೀವ್ರಗೊಂಡ ಅತಿಥಿ ಉಪನ್ಯಾಸಕರ ಹೋರಾಟ

ಡಾ.ಶ್ರೀಹರ್ಷ ಸೋರಲಮಾವು

ತುಮಕೂರು: ಸೇವೆ ಕಾಯಂಮಾತಿಗಾಗಿ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿಗೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೆಂಬಲ ಸೂಚಿಸಿದರು.

ಬೇಡಿಕೆ ಈಡೇರಿಸುವ ಮೂಲಕ ಶೀಘ್ರವಾಗಿ ಅತಿಥಿ ಉಪನ್ಯಾಸಕರನ್ನು ಮತ್ತೆ ಕಾಲೇಜು ಕೊಠಡಿಗೆ ಕಳುಹಿಸಿಕೊಡುವಂತೆ ಸರ್ಕಾರವನ್ನು ವಿದ್ಯಾರ್ಥಿಗಳು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ 23ನೇ ದಿನವಾದ ಶುಕ್ರವಾರ ಅತಿಥಿ ಉಪನ್ಯಾಸಕರ ಪ್ರತಿಭಟನಾ ಧರಣಿ ಮುಂದುವರೆದಿದ್ದು, ನೂರಾರು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ಜಿ.ಎನ್.ಸಹನ, ಕಳೆದ 20 ದಿನಗಳಿಂದ ನಮಗೆ ತರಗತಿಗಳೇ ನಡೆಯುತ್ತಿಲ್ಲ. ಸರ್ಕಾರ ರಾಜ್ಯಾದ್ಯಂತ ವಿವಿಧ ಭಾಗ್ಯಗಳನ್ನು ನೀಡುತ್ತಿದೆ. ಆದರೆ, ವಿದ್ಯಾರ್ಥಿಗಳಿಗೆ ತರಗತಿ ಭಾಗ್ಯ ನೀಡಲು ಮೀನಾಮೇಷ ಎಣಿಸುತ್ತಿದೆ. ಅತಿಥಿ ಉಪನ್ಯಾಸಕರೇ ಜೀವಾಳವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ಶೀಘ್ರವಾಗಿ ನಮ್ಮ ತರಗತಿಗಳಿಗೆ ಅವರನ್ನು ಕಳುಹಿಸಿ ಕೊಡುವ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಾ. ಧರ್ಮವೀರ, ಡಾ.ಎಂ.ಟಿ.ಮಲ್ಲಿಕಾರ್ಜುನ್, ಡಾ. ಕುಮಾರ್ , ಕೆ.ಎಚ್. ಶಂಕರ ಹಾರೋಗೆರೆ, ಟಿ.ಆರ್.ಗಿರಿಜಮ್ಮ, ಕಾಂತರಾಜು, ಟಿ.ಸುರೇಶ್, ಶಂಕರ್, ಗಿರೀಶ್, ಹರ್ಷಿತ, ಶಶಿಕುಮಾರ್, ಹನುಮಂತರಾಯಪ್ಪ ಮತ್ತಿತರರು ಇದ್ದರು.