ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸಿರುವ ಪದವಿ ಹಂತದ ಕನ್ನಡ ಭಾಷೆ ಮತ್ತು ಐಚ್ಚಿಕ ಪಠ್ಯಪುಸ್ತಕಗಳು ಪ್ರಕಟಗೊಂಡಿದ್ದು,ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇವೆ. ತರಗತಿಗಳು ಆರಂಭವಾಗುವುದಕ್ಕಿಂತ ಮೊದಲೇ ಪಠ್ಯಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಾಗಿದೆ.
ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸೋಮವಾರ ಪದವಿ ಹಂತದ ಕನ್ನಡ ಭಾಷಾ ಮತ್ತು ಐಚ್ಚಿಕ ಪಠ್ಯಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಕರ್ನಾಟಕ ಸರ್ಕಾರದ ನೂತನ ರಾಜ್ಯಶಿಕ್ಷಣ ನೀತಿಯಂತೆ ಈ ಪಠ್ಯಗಳನ್ನು ಸಿದ್ಧಪಡಿಸಲಾಗಿದ್ದು ರಾಜ್ಯದಲ್ಲೇ ಮೊತ್ತಮೊದಲ ಬಾರಿಗೆ ಪಠ್ಯಪುಸ್ತಕಗಳಿಗೆ ಡಿಜಿಟಲ್ ಸ್ಪರ್ಶ ನೀಡಲಾಗಿದೆ ಎಂದರು.
ಆಧುನಿಕ ಕನ್ನಡ ಸಾಹಿತ್ಯದ ಬಗ್ಗೆ ಹೆಸರಾಂತ ವಿಮರ್ಶಕ ಎಚ್.ಎಸ್.ರಾಘವೇಂದ್ರರಾವ್ ಅವರ ಕಥನ ಸ್ಟುಡಿಯೋದಲ್ಲಿ ನೀಡಿದ ಸರಣಿ ಉಪನ್ಯಾಸಗಳ ಕ್ಯೂಆರ್ ಕೋಡ್ ಪಠ್ಯಗಳಲ್ಲಿ ನೀಡಲಾಗಿದ್ದು, ಇದನ್ನು ವಿದ್ಯಾರ್ಥಿಗಳು, ಅಧ್ಯಾಪಕರು ತಮ್ಮ ಮೊಬೈಲ್ ನಲ್ಲಿ ಸ್ಕ್ಯಾನ್ ಮಾಡಿದರೆ ಉಪನ್ಯಾಸವನ್ನು ಕೇಳಬಹುದಾಗಿದೆ ಮತ್ತು ನೋಡಬಹುದಾಗಿದೆ. ಹಾಗೆಯೇ ಚಂದ್ರಶೇಖರ ಕಂಬಾರ ಅವರ ಮಹಾಮಾಯಿ ನಾಟಕವನ್ನೂ ನೋಡಬಹುದಾಗಿದೆ.
ಕೆಲವು ನಾಟಕಗಳನ್ನು ಬಾನುಲಿ ಕೇಂದ್ರಗಳು ಪ್ರಸಾರ ಮಾಡಿದ್ದು , ಆ ನಾಟಕಗಳನ್ನು ಕೇಳಬಹುದಾಗಿದೆ. ಹಾಗೆಯೇ ಕನ್ನಡದ ಖ್ಯಾತ ಕವಿಗಳು ತಮ್ಮ ಕವನವನ್ನು ತಾವೇ ವಾಚನ ಮಾಡಿದ್ದು ಅವನ್ನೂ ಇಲ್ಲಿ ನೋಡಬಹುದಾಗಿದೆ. ಕನ್ನಡದ ಕೆಲವು ಮುಖ್ಯ ಕಥೆಗಳನ್ನು ಹೆಸರಾಂತ ನಿರ್ದೇಶಕರು ಚಲನಚಿತ್ರಗಳಾಗಿ ನಿರ್ದೇಶಿಸಿದ್ದು ಅವುಗಳನ್ನು ಬೆಂಗಳೂರು ದೂರದರ್ಶನ ಕೇಂದ್ರ ಪ್ರಸಾರ ಮಾಡಿತ್ತು. ಆ ಸಿನಿಮಾಗಳ ಕ್ಯೂ ಆರ್ ಕೋಡ್ ಕೂಡ ಪಠ್ಯದಲ್ಲಿದ್ದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಮೊಬೈಲ್ ಫೋನ್ ಗಳಲ್ಲಿ ಆ ಸಿನಿಮಾಗಳನ್ನು ವೀಕ್ಷಿಸಬಹುದಾಗಿದೆ.
ಪಠ್ಯವನ್ನು ಓದುವ, ಅರ್ಥ ಮಾಡಿಕೊಳ್ಳುವ ಹಲವು ಸಾಧ್ಯತೆಗಳನ್ನು ಈ ಪುಸ್ತಕಗಳು ತೆರೆದಿರುವುದು ಪಠ್ಯಪುಸ್ತಕದ ವಿಶೇಷವಾಗಿದ್ದು ವಿದ್ಯಾರ್ಥಿಗಳಿಗೆ ಹೊಸ ಅನುಭವ ಎನ್ನಿಸಲಿದೆ.
ಇದುವರೆಗೆ ಓದುವುದಕ್ಕಫಿ್ಟೇ ಸೀಮಿತವಾಗಿದ್ದ ಪಠ್ಯಪುಸ್ತಕಗಳನ್ನು ಈಗ ಕೇಳುವ ಪಠ್ಯಗಳಾಗಿ, ನೋಡುವ ಪಠ್ಯಗಳಾಗಿ ವಿಸ್ತರಿಸಲಾಗಿದೆ. ಕನ್ನಡದ ಪಠ್ಯಪುಸ್ತಕಗಳಿಗೆ ಈ ವಿನೂತನವಾದ ಡಿಜಿಟಲ್ ಆಯಾಮ ಕೊಟ್ಟ ಅಧ್ಯಯನ ಮಂಡಳಿ ಅಧ್ಯಕ್ಷರೂ ಮತ್ತು ಪಠ್ಯಗಳ ಪ್ರಧಾನ ಸಂಪಾದಕ ಪ್ರೊ.ನಿತ್ಯಾನಂದ ಬಿ ಶೆಟ್ಟಿಯವರನ್ನು ಮತ್ತು ಇತರ ಸಂಪಾದಕರನ್ನು ಕುಲಪತಿ ಅಭಿನಂದಿಸಿದರು.
ಈ ಪಠ್ಯಗಳ ಸಂಪಾದಕರಾಗಿ ಡಾ.ಶಿವಲಿಂಗಮೂರ್ತಿ, ಡಾ.ಪಿ.ಗಂಗಾಧರಯ್ಯ, ಡಾ.ಬಿ.ಆರ್.ರೇಣುಕಾಪ್ರಸಾದ್, ಡಾ.ಶಿವಣ್ಣ ಎಸ್ ಬೆಳವಾಡಿ, ಡಾ. ಗೋವಿಂದರಾಯ ಎಂ. ಡಾ.ಚೈತಾಲಿ ಕೆ.ಎಸ್, ಡಾ.ಮಂಜುಳ ಎಂ.ಕೆ ಮತ್ತು ಸಿ.ಎಚ್.ಮಮತ ಕಾರ್ಯನಿರ್ವಹಿಸಿದ್ದು ಪುಸ್ತಕಗಳನ್ನು ಬಿಡುಗಡೆಗೊಳಿಸುವಾಗ ಸಂಪಾದಕರ ಜತೆಗೆ ಕನ್ನಡ ಅಧ್ಯಯನ ಮಂಡಳಿಯ ಉಪಾಧ್ಯಕ್ಷ ಜೆ.ಗಂಗಾಧರ್ ಇದ್ದರು.