ತುಮಕೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ನಂದಿನಿ ಹಾಲು, ಮೊಸರು ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಲಾಯಿತು. 
ತುಮಕೂರು

ಹಾಲಿನ ದರ ಏರಿಕೆ ಬಿಜೆಪಿ ಪ್ರತಿಭಟನೆ

ಬಡವರ ಬದುಕು ದುಸ್ತರ, ಪ್ರತಿಭಟನಾಕಾರರ ಆಕ್ರೋಶ

ತುಮಕೂರು: ನಂದಿನಿ ಹಾಲಿನ ದರ ಹೆಚ್ಚಳ ಮಾಡಿರುವ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಹಾಲಿನ ಖಾಲಿ ಕ್ಯಾನ್​ ಹೊತ್ತು ನಗರದಲ್ಲಿ ಪ್ರತಿಭಟಿಸಲಾಯಿತು.

ನಗರದ ಬಿಜಿಎಸ್​ ವೃತ್ತದಲ್ಲಿ ಮಂಗಳವಾರ ಹಾಲಿನ ಖಾಲಿ ಕ್ಯಾನ್​ ತಲೆಮೇಲೆ ಹೊತ್ತು ಪ್ರತಿಭಟಿಸಿದ ಬಿಜೆಪಿ ಕಾರ್ಯಕರ್ತೆಯರು ಹಾಲು, ಮೊಸರು ದರ ಹೆಚ್ಚಳ ಆದೇಶವನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಾಲಿನ ದರ ಏರಿಕೆಯಿಂದ ಸಾಮಾನ್ಯ ಕುಟುಂಬಗಳು, ಅದರಲ್ಲೂ ಮನೆ ನಿರ್ವಹಣೆ ಮಾಡುವ ಗೃಹಿಣಿಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೈತ್ರ ಮಂಜುನಾಥ್​, ರಾಜ್ಯದ ಕಾಂಗ್ರೆಸ್​ ಸರ್ಕಾರ 2023ರಿಂದ ನಾಲ್ಕು ಬಾರಿ ಹಾಲಿನ ದರ ಹೆಚ್ಚಳ ಮಾಡಿದೆ. ಇದರಿಂದ ಜನಸಾಮಾನ್ಯರ ಕುಟುಂಬದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಮಕ್ಕಳಿಗೆ ನಿತ್ಯ ನೀಡುವ ಹಾಲಿನ ದರವು ಹೆಚ್ಚಳವಾಗಿರುವುದರಿಂದ ತಾಯಂದಿರಾಗಿ ನಾವು ಬೀದಿಗಿಳಿದು ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಹಾಲು ಉತ್ಪಾದಕರಿಗೆ ನೀಡಬೇಕಾಗಿರುವ ಬಾಕಿ ಪ್ರೋತ್ಸಾಹಧನ ನೀಡದ ಸರ್ಕಾರವು ಹಾಲಿನ ಬೆಲೆ ಹೆಚ್ಚಳ ಮಾಡಿ ರೈತರ ಕಣ್ಣೊರೆಸುವ ತಂತ್ರ ಮಾಡಿದೆ. ಅಲ್ಲದೆ, ಬೆಲೆ ಏರಿಕೆಯಿಂದ ಸಾಮಾನ್ಯಜನರನ್ನು ಕಷ್ಟಕ್ಕಿ ಸಿಲುಕಿಸಿದೆ. ಸರ್ಕಾರ ತನ್ನ ಬೊಕ್ಕಸದಿಂದಲೇ ಪ್ರೋತ್ಸಾಹಧನ ನೀಡಬೇಕು ಗ್ರಾಹಕರಿಗೆ ಹೇರಬಾರದು. ಉಚಿತ ಯೋಜನೆಗಳನ್ನು ಜಾರಿಗೊಳಿಸುವ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕುವುದು ಎಷ್ಟು ಸಮಂಜಸ, ಸರ್ಕಾರ ಕೂಡಲೇ ಹಾಲಿನ ದರ ಏರಿಕೆ ನಿರ್ಧಾರವನ್ನು ಹಿಂಪಡೆದು, ಹೆಚ್ಚಿಸಿರುವ ದರವನ್ನು ತಕ್ಷಣ ಇಳಿಸಬೇಕು. ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮಹಿಳಾ ಮೋರ್ಚಾ ವತಿಯಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ನಡೆಸಲಾಗುವುದು ಎಂದು ಚೈತ್ರ ಮಂಜುನಾಥ್​ ಎಚ್ಚರಿಸಿದರು.

ಬಿಜೆಪಿ ಹಿರಿಯ ಮುಖಂಡ, ಜಿಪಂ ಮಾಜಿ ಅಧ್ಯಕ್ಷ ವೈ.ಎಚ್​.ಹುಚ್ಚಯ್ಯ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಬದಲಾಗಿ ದಿನಬಳಕೆಯ ವಸ್ತುಗಳು, ಹಾಲು ಸೇರಿದಂತೆ ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಬಡವರ ಬದುಕು ದುಸ್ತರವಾಗಿದ್ದು ಜನರಿಗೆ ಸರ್ಕಾರ ವಿಷಪ್ರಾಶನ ಮಾಡಿದೆ ಎಂದು ಹರಿಹಾಯ್ದರು.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಭೈರಣ್ಣ, ಕಾರ್ಯದರ್ಶಿ ಕೆ.ವೇದಮೂರ್ತಿ, ಖಜಾಂಚಿ ಗಣೇಶ್​ಪ್ರಸಾದ್​, ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಬಿ.ಎಚ್​.ವಸಂತ, ನಗರ ಅಧ್ಯಕ್ಷ ಧನುಷ್​, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸತ್ಯಮಂಗಲ ಜಗದೀಶ್​, ಮುಖಂಡರಾದ ಬನಶಂಕರಿ ಬಾಬು, ಹನುಮಂತರಾಜು, ಬಂಬೂ ಮೋಹನ್​, ರೇಖಾ ಶಿವಕುಮಾರ್​, ತಾರಾದೇವಿ, ಡಾ.ಫರ್ಜಾನ ರಹೀಂ, ವೆಂಕಟೇಶಾಚಾರ್​, ಕಲ್ಪನಾ ಪ್ರಸಾದ್​, ಅಂಬುಜಾ, ಕವಿತಾ ರವಿಚಂದ್ರ, ಚೆನ್ನಮ್ಮ, ಗಾಯತ್ರಿ ಮಂಜುನಾಥ್​, ವಿಜಯಲಕ್ಷ್ಮಿ, ನೇತ್ರಾವತಿ, ಪುಷ್ಪ ಪಾಲಾಕ್ಷಯ್ಯ ಮತ್ತಿತರರು ಭಾಗವಹಿಸಿದ್ದರು.

ಪರಿಶಿಷ್ಟ ಪಂಗಡದ ಕಲ್ಯಾಣಕ್ಕೆ ಮೀಸಲಿರಿಸಿದ್ದ 187 ಕೋಟಿ ರೂ., ಗಳನ್ನು ಚುನಾವಣೆಗೆ ಬಳಸಿಕೊಂಡು ಆ ಸಮುದಾಯಕ್ಕೆ ಕಾಂಗ್ರೆಸ್​ ಸರ್ಕಾರ ಅನ್ಯಾಯ ಮಾಡಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಾಗುತ್ತಿಲ್ಲ, ಬರದ ಬೇಗೆಯಲ್ಲಿ ತತ್ತರಿಸಿರುವ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿಲ್ಲ. ಈ ಸರ್ಕಾರದ ಆಡಳಿತ ವೈಖರಿಗೆ ರಾಜ್ಯದ ಜನ ಬೇಸತ್ತಿದ್ದು ಮಂತ್ರಿಮಂಡಲವನ್ನು ಕೂಡಲೇ ವಿಸರ್ಜಿಸಿ ಚುನಾವಣೆಗೆ ಹೋಗಲಿ.

ವೈ.ಎಚ್​.ಹುಚ್ಚಯ್ಯ

ಬಿಜೆಪಿ ಮುಖಂಡ