ತುಮಕೂರು: ಖಾಸಗಿ ಶಿಕ್ಷಣಸಂಸ್ಥೆ ಹಾಗೂ ಕಾಪೋರ್ರೇಟ್ ಕಂಪನಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಅಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಪ್ರತಿಭಟಿಸಲಾಯಿತು.
ನಗರದ ಟೌನ್ಹಾಲ್ ವೃತ್ತದಲ್ಲಿ ಶನಿವಾರ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸರ್ಕಾರದ ಹುನ್ನಾರ, ಬಡಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿಸುವ ಪ್ಲೇಕಾರ್ಡ್ಗಳನ್ನು ಹಿಡಿದ ಪ್ರತಿಭಟನಾನಿರತರು ಸಾರ್ವಜನಿಕ ಶಿಕ್ಷಣ ಉಳಿಯಲಿ, ಕನ್ನಡ ಶಾಲೆಗಳು ಮುಚ್ಚಲು ಬಿಡುವುದಿಲ್ಲ ಎಂಬ ಘೋಷಣೆಗಳನ್ನು ಕೂಗಿ ರಾಜ್ಯ ಸರ್ಕಾರದ ಹುನ್ನಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಎಐಡಿಎಸ್ಒ ಜಿಲ್ಲಾ ಕಾರ್ಯದರ್ಶಿ ಲಕ್ಕಪ್ಪ ಮಾತನಾಡಿ, ಜನತೆಯ ತೀವ್ರ ವಿರೋಧದ ನಡುವೆಯು ರಾಜ್ಯ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ನೀತಿಯನ್ನು ಜಾರಿಗೆ ತರುತ್ತಿದೆ. ಏಷ್ಯನ್ ಡೆವೆಲಪ್ಮೆಂಟ್ ಬ್ಯಾಂಕ್ (ಎಡಿಬಿ) ಸಾಲ ಒಪ್ಪಂದದ ಮೂಲಕ ರಾಜ್ಯ ಸರ್ಕಾರ 45,000 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸರ್ಕಾರಿ ಶಾಲೆಗಳನ್ನು ಕಾಪೋರ್ರೇಟ್ ಕಂಪನಿಗಳಿಗೆ ಹಾಗೂ ಖಾಸಗಿ ಶಾಲೆಗಳಿಗೆ ಹಸ್ತಾಂತರಿಸಲು ನ.4 ರಂದು ವಿಧಾನಸೌಧದಲ್ಲಿ ಸಭೆ ನಡೆಸಲಾಗಿದೆ. ಮೊದಲ ಹಂತದಲ್ಲಿ 2000 ಶಾಲೆಗಳನ್ನು ಖಾಸಗಿಯರಿಗೆ ದತ್ತು ನೀಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ರಾಜ್ಯ ಸರ್ಕಾರದ ಕಡು ಜನವಿರೋಧಿ ನಡೆಯಾಗಿದ್ದು ಖಂಡನೀಯ ಎಂದರು.
ರಾಜ್ಯದಲ್ಲಿ ಒಂದೆ ಒಂದು ಸರ್ಕಾರಿ ಶಾಲೆ ಮುಚ್ಚುವುದಿಲ್ಲು ಎನ್ನುವ ಶಿಕ್ಷಣಸಚಿವರು ಈ ನಾಡಿನ ಜತೆಗೆ ದ್ರೋಹ ಎಸಗಿದ್ದಾರೆ. ಸರ್ಕಾರದ ಈ ಕರಾಳ ಕೆಪಿಎಸ ಮ್ಯಾಗ್ನೆಟ್ ಯೋಜನೆ ವಿರುದ್ಧ ಹಳ್ಳಿ ಹಳ್ಳಿಗಳಲ್ಲಿ ಜನ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಾರ್ವಜನಿಕ ಶಿಕ್ಷಣಉಳಿಸಿ ಸಮಿತಿಯ ಉಪಾಧ್ಯೆ ರತ್ನಮ್ಮ ಮಾತನಾಡಿ, ಎಲ್ಲಾ ಹಳ್ಳಿಗಳಲ್ಲು ಸಹ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ವಿದ್ಯಾರ್ಥಿಗಳು, ಪೋಷಕರು ಹಾಗೂ ಗ್ರಾಮಸ್ಥರು ಹೋರಾಟ ಮತ್ತು ಪ್ರತಿಭಟನೆಗಳನ್ನು ಮಾಡುತ್ತಾ ಸರ್ಕಾರದ ಈ ಯೋಜನೆಗೆ ವಿರೋಧವನ್ನು ವ್ಯಕ್ತಪಡಿಸುತ್ತಿದ್ದರು ಸಹ ಸರ್ಕಾರವು ಸರ್ಕಾರಿ ಶಾಲೆಗಳನ್ನು ಮುಚ್ಚುವ ಮೂಲಕ ಬಡಮಕ್ಕಳ ಭವಿಷ್ಯವನ್ನು ಬೀದಿಗೆ ತಳ್ಳುತ್ತಿದೆ. ಈ ಯೋಜನೆ ಜಾರಿಗೆ ಬಂದರೆ ಲಾಂತರ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಕುಂಠಿತವಾಗುತ್ತದೆ. ಇಂದಿನ ಸಮಾಜಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಹತ್ತಾರು ಮೈಲಿಗಳ ದೂರದ ಶಾಲೆಗಳಿಗೆ ಹೆಣ್ಣುಮ್ಕಳನ್ನು ಕಳಿಸುವುದು ಅಸಾಧ್ಯವಾಗಿದೆ. ಸರ್ಕಾರ ತನ್ನ ನಡೆಯನ್ನು ಬದಲಾಯಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಎಐಡಿಎಸ್ಒ ಪದಾಧಿಕಾರಿಗಳಾದ ಭರತ್, ಸೈಯದ್, ಮಹಾಂತೇಶ್, ಅಪ್ಪಾಜಿ, ಬಸವರಾಜು ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.