ತುಮಕೂರಿನಲ್ಲಿ ವಕೀಲರ ಸುರಕ್ಷತೆ ಮತ್ತು ರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು.  
ತುಮಕೂರು

ವಕೀಲರ ರಕ್ಷಣಾ ಕಾಯ್ದೆ ಜಾರಿಗೆ ಆಗ್ರಹ

ಜಿಲ್ಲಾ ವಕೀಲರ ಸಂಘದ ಪ್ರತಿಭಟನೆ

ತುಮಕೂರು: ವಕೀಲರ ಮೇಲೆ ಹೆಚ್ಚುತ್ತಿರುವ ಹಲ್ಲೆ ಪ್ರಕರಣಗಳನ್ನು ತಡೆಯಬೇಕು. ರಾಜ್ಯದಲ್ಲಿ ವಕೀಲರ ಸುರಕ್ಷತೆ ಮತ್ತು ರಕ್ಷಣಾ ಕಾಯ್ದೆಯನ್ನು ಕಟ್ಟುನಿಟಾಗಿ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ವತಿಯಿಂದ ಪ್ರತಿಭಟಿಸಲಾಯಿತು.

ನಗರದ ನ್ಯಾಯಾಲಯ ಆವರಣದ ವಕೀಲರ ಸಂಘದ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದ ವಕೀಲರು ನಂತರ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿ, ವಕೀಲರ ಸುರಕ್ಷತೆ ಹಾಗೂ ವಕೀಲರ ರಕ್ಷಣಾ ಕಾಯ್ದೆ ಜಾರಿಗೊಳಿಸುವಂತೆ ಆಗ್ರಹಿಸಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಚ್​.ಕೆಂಪರಾಜಯ್ಯ ಮಾತನಾಡಿ, ರಾಜ್ಯದಲ್ಲಿ ಇತ್ತೀಚೆಗೆ ವಕೀಲರ ಮೇಲೆ ನಡೆಯುತ್ತಿರುವ ಭೀಕರ ಹತ್ಯೆ ಮತ್ತು ಮಾರಣಾಂತಿಕ ಹಲ್ಲೆ ಯತ್ನದ ಘಟನೆಗಳು ವಕೀಲರ ಸಮುದಾಯದಲ್ಲಿ ತೀವ್ರ ಆತಂಕ ಹಾಗೂ ಅಭದ್ರತೆಯನ್ನು ಸೃಷ್ಟಿಸಿವೆ. ನ್ಯಾಯವಾದಿಗಳಾದ ವಕೀಲರ ಮೇಲಿನ ಹಲ್ಲೆ ಖಂಡನೀಯ ಸರ್ಕಾರ ಈ ಬಗ್ಗೆ ಗಂಭೀರ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು.

ಇತ್ತಿಚೆಗೆ ಬೆಂಗಳೂರಿನ ವೈಟ್​ಫೀಲ್ಡ್​ನ ವಕೀಲರಾದ ಮಂಜುನಾಥ್​ ಹಾಗೂ ಅನ್ನಪೂಣೇಶ್ವರಿನಗರದ ರಾಮ್​ ಕೊಲೆ ಹಾಗೂ ಗೌರಿಬಿದನೂರಿನ ವಕೀಲ ವೆಂಕಟರಣ ಸಣ್ಣಕ್ಕಿ ಅವರ ಕೊಲೆಯತ್ನದ ಘಟನೆಗಳು ನಡೆದಿವೆ. ಮುಖ್ಯಮಂತ್ರಿಗಳು ಹಾಗೂ ಕಾನೂನು ಸಚಿವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಕೀಲರ ರಕ್ಷಣೆಗೆ ಅಗತ್ಯ ಕಾನೂನು ಕ್ರಮಗಳನ್ನು ತಕ್ಷಣವೇ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಚ್​.ಎಸ್​. ಮಹೇಶ್​ ಮಾತನಾಡಿ, ವಕೀಲರು ನಿರಾತಂಕವಾಗಿ ಕೆಲಸ ಮಾಡುವ ವಾತಾವರಣ ನಿಮಾರ್ಣ ಮಾಡಬೇಕು. ಭದ್ರತೆಯನ್ನು ಖಚಿತಪಡಿಸಲು ವಕೀಲರ ರಕ್ಷಣಾ ಕಾಯ್ದೆ ಬಲಪಡಿಸಬೇಕು. ವಕೀಲರ ಮೇಲಿನ ದೌರ್ಜನ್ಯ ಮತ್ತು ದಾಳಿಗಳನ್ನು ತಡೆಯಲು ವಕೀಲರ ರಕ್ಷಣಾ ಕಾಯ್ದೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಹಾಗೂ ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಒತ್ತಾಯಿಸಿದರು.

ಕರ್ತವ್ಯ ನಿರತ ವಕೀಲರಿಗೆ ಸೂಕ್ತ ಪೊಲೀಸ್​ ರಕ್ಷಣೆ ಮತ್ತು ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆಯನ್ನು ಒದಗಿಸಬೇಕು. ತ್ವರಿತ ನ್ಯಾಯ ಮತ್ತು ಪರಿಹಾರ ಸಂತ್ರಸ್ತ ವಕೀಲರ ಕುಟುಂಬಗಳಿಗೆ ತಕ್ಷಣವೇ ಸೂಕ್ತ ಪರಿಹಾರವನ್ನು ಘೋಷಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ತನಿಖೆಯನ್ನು ತ್ವರಿತಗೊಳಿಸಬೇಕು. ನ್ಯಾಯದ ಪರವಾಗಿ ಧ್ವನಿ ಎತ್ತುವ ವಕೀಲರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಎಂ.ಎಲ್​. ರವಿಗೌಡ, ಜಂಟಿ ಕಾರ್ಯದರ್ಶಿ ಟಿ.ಎಂ. ಧನಂಜಯ್​, ಖಜಾಂಚಿ ಬಿ.ಎಂ. ಸಿಂಧೂ, ಕಾರ್ಯಕಾರಿ ಮಂಡಳಿ ನಿರ್ದೇಶಕರಾದ ಡಿ.ಎ. ಜಗದೀಶ್​, ಕೆ.ವಿ. ಶ್ರೀನಿವಾಸಮೂರ್ತಿ, ಎಸ್​. ಸುರೇಶ್​, ಪಿ. ಗೋವಿಂದರಾಜು, ವಿ.ಕೆ. ಶ್ರೀನಿವಾಸಮೂರ್ತಿ, ಸಿ.ಆರ್​. ಪದ್ಮಶ್ರೀ, ಜೆ.ಎಸ್​. ಸೇವಾಪ್ರಿಯಾ ಮತ್ತಿತರರು ಭಾಗವಹಿಸಿದ್ದರು.