ತುಮಕೂರು ವಿಶ್ವವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಹಾಲಪ್ಪಫೌಂಡೇಶನ್ ವತಿಯಿಂದ ಹಮ್ಮಿಕೊಂಡಿರುವ ಯುವಜನರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ದಿಕ್ಸೂಚಿ ಕಾರ್ಯಾಗಾರ ಪೋಸ್ಟರ್​ ಅನ್ನು ಮುರಳೀಧರ ಹಾಲಪ್ಪ ಬಿಡುಗಡೆಗೊಳಿಸಿದರು. ಕೆಂಚಮಾರಯ್ಯ, ಡಾ.ಟಿ.ಆರ್​.ಲೀಲಾವತಿ, ಕೆಂಚಣ್ಣ, ಮಂಜುನಾಥ್​ ಮತ್ತಿತರರು ಇದ್ದರು.  
ತುಮಕೂರು

ಯುವಜನರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ದಿಕ್ಸೂಚಿ ಕಾರ್ಯಾಗಾರ

ಇಂದು ಮತ್ತು ನಾಳೆ ತುಮಕೂರು ವಿವಿಯಲ್ಲಿ

ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಐಕ್ಯೂಎಸಿ ಘಟಕ ಹಾಗೂ ಹಾಲಪ್ಪ ಫೌಂಡೇಶನ್​ ವತಿಯಿಂದ "ಯುವಜನರಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ದಿಕ್ಸೂಚಿ ಕಾರ್ಯಾಗಾರ'ವನ್ನು ನ.20 ಹಾಗೂ 21 ರಂದು ಹಮ್ಮಿಕೊಳ್ಳಲಾಗಿದೆ.

ವಿವಿಯ ಸರ್​ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿರುವ 2 ದಿನಗಳ ಕಾರ್ಯಾಗಾರಕ್ಕೆ 20 ರಂದು ಬೆಳಗ್ಗೆ 9.30ಕ್ಕೆ ಚಾಲನೆ ದೊರೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4.30ರವರೆಗೆ ನಡೆಯಲಿರುವ ಈ ಕಾರ್ಯಾಗಾರದಲ್ಲಿ ಜಿಲ್ಲೆಯ ಡಿಪ್ಲಮೊ, ಪದವಿ ಸೇರಿದಂತೆ ಎಲ್ಲಾ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿರುವ ನಿರುದ್ಯೋಗಿ ಯುವಜನರು ಭಾಗವಹಿಸಿ ತಜ್ಞ ಅಧ್ಯಾಪಕರು, ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳೀಧರ ಹಾಲಪ್ಪ ತಿಳಿಸಿದ್ದಾರೆ.

ಈಗಾಗಲೇ ತುಮಕೂರು ವಿವಿಯ ವ್ಯಾಪ್ತಿಗೆ ಒಳಪಡುವ ಎಲ್ಲಾ ಪದವಿ ಕಾಲೇಜುಗಳಿಗೆ, ಹಾಗೆಯೇ ಹಳೆಯ ವಿದ್ಯಾರ್ಥಿಗಳ ಸಂಘಟನೆಗಳಿಗೆ ಮಾಹಿತಿ ನೀಡಲಾಗಿದೆ. ಅರ್ಹ 700 ಮಂದಿಗೆ ಮಾತ್ರ ಈ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದ್ದು, ಐಪಿಎಸ್​ ಅಧಿಕಾರಿ ರವಿ.ಡಿ.ಚನ್ನಣ್ಣನವರ್​, ಪ್ರೇರಕ ಜಿ.ಬಿ.ವಿನಯಕುಮಾರ್​, ಸಲಹೆಗಾರರಾದ ಶರಣ್ಯ ಬಂಡಾರಿ ಮಠ್​, ಮಾರ್ಗದರ್ಶಕರಾದ ಡಾ.ಗರಣಿ ಕೃಷ್ಣಮೂರ್ತಿ, ದಿಲೀಪ್​ ಅಪ್ಪೇನಹಳ್ಳಿ, ಕೆಎಎಸ್​ ಅಧಿಕಾರಿಗಳಾದ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಕ್ಷೇತ್ರದ ತಜ್ಞರು ಕಾರ್ಯಾಗಾರ ವೇಳೆ ಭಾಗವಹಿಸಿ ಪ್ರೇರಣನುಡಿಗಳನ್ನಾಡುವರು ಎಂದರು.

ಯುಪಿಎಸ್ಸಿ, ಕೆಪಿಎಸ್ಸಿ, ಎಫ್​ ಡಿಎ, ಎಸ್​ಡಿಎ, ಆರ್​ ಆರ್​ ಬಿಕ, ಕೆಇಎಎಸ್​, ಎಸ್​ಎಸ್​ಸಿ, ಪರೀೆಗಳ ಅರ್ಜಿ ಸಲ್ಲಿಸುವುದರಿಂದ ಆರಂಭಗೊಂಡು, ಪಠ್ಯಕ್ರಮ, ಅಭ್ಯಾಸದ ಕ್ರಮಗಳ ಕುರಿತು ಮಾಹಿತಿ,ಸಲಹೆ, ಮಾರ್ಗದರ್ಶನವನ್ನು ಈ ಕಾರ್ಯಾಗಾರದಲ್ಲಿ ನೀಡಲಾಗುವುದು. ಇದನ್ನು ಜಿಲ್ಲೆಯ ಗ್ರಾಮೀಣ ಯುವಜನರು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಜಿಪಂ ಮಾಜಿ ಸದಸ್ಯ ಕೆಂಚಮಾರಯ್ಯ, ನಿವೃತ್ತ ಪ್ರಾಚಾರ್ಯೆ ಡಾ.ಟಿ.ಆರ್​.ಲೀಲಾವತಿ ಮತ್ತಿತರರು ಉಪಸ್ಥಿತರಿದ್ದರು.