ತುಮಕೂರಿನ ವಿದ್ಯೋದಯಕಾನೂನು ಕಾಲೇಜಿನ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ನ್ಯಾ.ಎಚ್​.ಪಿ.ಸಂದೇಶ್​ ಉದ್ಘಾಟಿಸಿದರು. ಎಚ್​.ಎಸ್​.ಕೆಂಪಣ್ಣ, ಎಂ.ಎನ್​.ಮಧುಸೂದನ್​, ಎಚ್​.ಎಸ್​.ರಾಜು, ಪ್ರೊ.ಕೆ.ಚಂದ್ರಣ್ಣ, ಡಾ.ಜಿ.ವೈ.ನಟರಾಜ್​ ಮತ್ತಿತರರು ಇದ್ದರು.  
ತುಮಕೂರು

ಮೌಲ್ಯಾಧಾರಿತ ಶಿಕ್ಷಣ ಜೀವನ ಶೈಲಿ ಅಳವಡಿಸಿಕೊಳ್ಳಿ

ಹೈಕೋರ್ಟ್​ ನ್ಯಾಯಮೂರ್ತಿ ಎಚ್​.ಪಿ.ಸಂದೇಶ್​

ತುಮಕೂರು: ಸ್ವಾಮಿ ವಿವೇಕಾನಂದರಂತೆ ಮೌಲ್ಯಾಧಾರಿತ ಶಿಕ್ಷಣ ಜೀವನ ಶೈಲಿ, ಶಿಸ್ತು, ಅಳವಡಿಸಿಕೊಂಡು ಕಾನೂನು ವಿದ್ಯಾಭ್ಯಾಸವನ್ನು ಮತ್ತು ವಕೀಲಿವೃತ್ತಿಯನ್ನು ಸಮಾಜ ಒಳಿತಿಗೆ ವಿದ್ಯಾರ್ಥಿಗಳು ಬಳಸುವಂತೆ ಹೈಕೋರ್ಟ್​ ನ್ಯಾಯಮೂರ್ತಿ ಎಚ್​.ಪಿ.ಸಂದೇಶ್​ ಹೇಳಿದರು.

ನಗರದ ವಿದ್ಯೋದಯಕಾನೂನು ಕಾಲೇಜಿನ 2026-27ನೇ ಸಾಲಿನ ವಾರ್ಷಿಕ ಚಟುವಟಿಕೆಗಳ ಹಾಗೂ ನೂತನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸ ತಿಳಿಯದವರು ಇತಿಹಾಸ ರಚಿಸಲು ಸಾಧ್ಯವಿಲ್ಲ. ಲೋಪ ದೋಷಗಳನ್ನು ಪರಿಗಣಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಶಿಕ್ಷಕರು ವಿಶೇಷ ಪಾತ್ರವನ್ನು ವಹಿಸಬೇಕು ಎಂದು ತಿಳಿಸಿದರು.

ವಕೀಲಿ ವೃತ್ತಿಯನ್ನು ಚಾಕಚಕ್ಯತೆಯಿಂದ ನಿರ್ವಹಿಸಿದರೆ ನ್ಯಾಯಾಂಗ ಉದ್ದೇಶ ಈಡೇರುತ್ತದೆ. ಹಾಗಾಗಿ,ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಾನೂನು ಅಭ್ಯಾಸವನ್ನು ಮಾಡಬೇಕು. ವಿದ್ಯೋದಯ ಕಾನೂನು ಕಾಲೇಜು ಹಲವಾರು ವರ್ಷಗಳಿಂದ ಗ್ರಾಮೀಣಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮವನ್ನು ಕೈಗೊಂಡಿದೆ ಎಂದು ಹೈಕೋರ್ಟ್​ ನಿವೃತ್ತ ನ್ಯಾಯಮೂರ್ತಿಗಳ ಆದ ವಿದ್ಯೋದಯ ಫೌಂಡೇಶನ್​ ಟ್ರಸ್ಟ್​ನ ಅಧ್ಯಕ್ಷ ಎಚ್​.ಎಸ್​.ಕೆಂಪಣ್ಣ ಹೇಳಿದರು.

ಇದೇ ವೇಳೆ ಉತ್ತಮ ಎನ್​ಎಸ್​ಎಸ್​ ಸ್ವಯಂ ಸೇವಕ ರಾಜ್ಯ ಪ್ರಶಸ್ತಿ ಪಡೆದ ವಿದ್ಯಾರ್ಥಿ ಸಿದ್ದೇಶ್​ರನ್ನು ಸನ್ಮಾನಿಸಲಾಯಿತು.

ರಾಜ್ಯ ವಕೀಲ ಪರಿಷತ್ತಿನ ಸದಸ್ಯ ಎಂ.ಎನ್​.ಮಧುಸೂದನ್​, ಸಂಸ್ಥೆಯ ಆಡಳಿತ ಮತ್ತು ಶೈಕ್ಷಣಿಕ ನಿರ್ದೇಶಕ ಎಚ್​.ಎಸ್​.ರಾಜು, ಸಂಸ್ಥೆಯ ಸಿಇಒ ಪ್ರೊ. ಕೆ.ಚಂದ್ರಣ್ಣ, ಕಾಲೇಜಿನ ಪ್ರಾಂಶುಪಾಲ ಡಾ.ಜಿ.ವೈ.ನಟರಾಜ್​, ಐಕ್ಯುಎಸಿ ಸಂಯೋಜಕಿ ಶಮಾ ಸೈಯದಿ ಉಪಸ್ಥಿತರಿದ್ದರು.

ಡಾ.ರಮೇಶ್​ ವಂದಿಸಿದರು. ಎ.ಎಚ್​.ರಶ್ಮಿ ಕಾರ್ಯಕ್ರಮ ನಿರೂಪಿಸಿದರು.