ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳ ಆಶೀರ್ವಾದವನ್ನು ಡಿಸಿಎಂ ಡಾ.ಜಿ.ಪರಮೇಶ್ವರ್ ಪಡೆದರು‌ 
ತುಮಕೂರು

ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ 22 ಸಾವಿರ ಕೋಟಿ ರೂ., ನೀಡಲು ಮನವಿ

ಕೇಂದ್ರದೊಂದಿಗೆ ಚರ್ಚಿಸಲು ಸರ್ವಪಕ್ಷ ನಿಯೋಗ, ಸಿಎಂ ಆಶಯ-ಡಿಸಿಎಂ ಡಾ.ಜಿ.ಪರಮೇಶ್ವರ

ತುಮಕೂರು: ರಾಜ್ಯದ ಬರ ಪರಿಸ್ಥಿತಿ ಹಾಗೂ ಪರಿಹಾರಕ್ಕಾಗಿ ಕೇಂದ್ರ ಸರ್ಕಾರದೊಂದಿಗೆ ನಡೆಸಬೇಕಿರುವ ಚರ್ಚೆ ಕುರಿತು ಮಾತನಾಡಿದ ಅವರು, ಈಗಾಗಲೇ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮೂರು ಬಾರಿ ಮನವಿ ಸಲ್ಲಿಸಿದೆ. ರಾಜ್ಯದಲ್ಲಿ ಬರದಿಂದ ಅಂದಾಜು 62,000 ಕೋಟಿ ರೂ., ನಷ್ಟವಾಗಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ 22,000 ಕೋಟಿ ರೂ., ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.

ಸಿದ್ದಗಂಗಾ ಮಠಕ್ಕೆ ಶುಕ್ರವಾರ ಸಂಜೆ ಭೇಟಿ ಮಠಾಧ್ಯಕ್ಣ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತು ಚರ್ಚಿಸಲು ಸಮಯಾವಕಾಶ ನೀಡುವಂತೆ ನಾನು ಪತ್ರ ಬರೆದಿದ್ದೇನೆ. ಮುಖ್ಯಮಂತ್ರಿಗಳೂ ಪತ್ರ ಬರೆದಿದ್ದಾರೆ ಎಂದರು.

ಕೇಂದ್ರದೊಂದಿಗೆ ಚರ್ಚಿಸಲು ಸರ್ವಪಕ್ಷ ನಿಯೋಗ ತೆರಳಬೇಕು ಎಂಬುದು ಸಿಎಂ ಆಶಯವಾಗಿದೆ. ಆದರೆ ವಿರೋಧ ಪಕ್ಷದವರು ನಾವು ಬರುವುದಿಲ್ಲ ಎಂಬುದೂ ಸೇರಿದಂತೆ ವಿವಿಧ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ಅವರು ಬಂದರೆ ಸಂತೋಷ. ಬರದಿದ್ದರೂ ರಾಜ್ಯ ಸರ್ಕಾರವಾಗಿ, ಆಡಳಿತ ಪಕ್ಷವಾಗಿ ಕೇಂದ್ರ ಸರ್ಕಾರದ ಮುಂದೆ ರಾಜ್ಯದ ಪರವಾಗಿ ಮನವಿ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಸಿಎಂ, ನಾನು ಹಾಗೂ ಇತರ ಸಚಿವರು ಒಟ್ಟಾಗಿ ದೆಹಲಿಗೆ ತೆರಳಿ ಪ್ರಧಾನಮಂತ್ರಿಗಳು, ಕೇಂದ್ರ ಗೃಹ ಸಚಿವರು ಮತ್ತು ಕೃಷಿ ಸಚಿವರನ್ನು ಭೇಟಿಯಾಗಲಿದ್ದೇವೆ. ಇದಕ್ಕಾಗಿ ಸಮಯಾವಕಾಶ ಕೇಳಿದ್ದೇವೆ. ಕೇಂದ್ರ ಸರ್ಕಾರ ಸಮಯ ನೀಡಿದ ತಕ್ಷಣ ನಿಯೋಗ ತೆರಳಿ ರಾಜ್ಯದ ಬರ ಪರಿಸ್ಥಿತಿ ಹಾಗೂ ಪರಿಹಾರದ ಕುರಿತು ಚರ್ಚೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರದ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಟೀಕೆಗಳು ಬರುತ್ತಲೇ ಇರುತ್ತವೆ. ಆದರೆ ನಮ್ಮ ಮುಖ್ಯಮಂತ್ರಿಗಳು ಹೇಳುವಂತೆ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಹೀಗಾಗಿ ಇಂತಹ ಟೀಕೆಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.