ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿದ್ದು ಜಾಗೃತ ಮತದಾರರೇ ಉತ್ತಮ ಆಡಳಿತ ಹಾಗೂ ಬಲಿಷ್ಠ ಪ್ರಜಾಪ್ರಭುತ್ವದ ನಿಮಾರ್ಣಕ್ಕೆ ಭದ್ರ ಬುನಾದಿ ಎಂದು ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎಚ್.ಎಸ್.ಮೋಹನ್ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಮೇರಾ ಯುವ ಭಾರತ್ ಮೈ ಭಾರತ್ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಯುವ ಸಂವಾದ -2026ರ ಅಂಗವಾಗಿ ನಡೆದ ನಿಮ್ಮ ಮತವನ್ನು ತಿಳಿಯಿರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾತಿ, ಧರ್ಮ ಹಾಗೂ ಹಣದ ಆಮಿಷಕ್ಕೆ ಒಳಗಾಗದೆ ಅಭ್ಯರ್ಥಿಗಳ ಅರ್ಹತೆ, ಜನಸೇವೆ ಮತ್ತು ಕಾರ್ಯಕ್ಷಮತೆಯನ್ನು ಪರಿಗಣಿಸಿ ಮತ ಚಲಾಯಿಸಬೇಕು ಎಂದರು.
ಮತದಾನ ಕೇವಲ ಹಕ್ಕು ಮಾತ್ರವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ. 18 ವರ್ಷ ಪೂರ್ಣಗೊಳಿಸಿದ ಪ್ರತಿಯೊಬ್ಬ ಅರ್ಹ ನಾಗರಿಕನಿಗು ಮತದಾನದ ಹಕ್ಕಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಿ ಬೆಳೆಸುವಲ್ಲಿ ಯುವಜನತೆಯ ಪಾತ್ರ ಮಹತ್ವದ್ದಾಗಿದ್ದು ಯುವಕರು ಮತದಾನದ ಪ್ರಕ್ರಿಯೆ, ಅದರ ಮಹತ್ವ ಹಾಗೂ ತಮ್ಮ ಪ್ರಜಾಸತ್ತಾತ್ಮಕ ಜವಾಬ್ದಾರಿಗಳ ಕುರಿತು ಅರಿವು ಹೊಂದಬೇಕು. ದೇಶದ ಆಸ್ತಿಯಾಗಿರುವ ಜಾಗೃತ ಮತದಾರರು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕು ಎಂದು ತಿಳಿಸಿದರು.
ಯುವಶಕ್ತಿಯೇ ವಿಕಸಿತ ಭಾರತದ ಭವಿಷ್ಯ: ಯುವಜನರಿಗೆ ಗುಣಮಟ್ಟದ ಶಿಕ್ಷಣ, ಉದ್ಯೋಗಾವಕಾಶ, ಕೌಶಲ ತರಬೇತಿ ಹಾಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಅತ್ಯಗತ್ಯ. ಯುವಶಕ್ತಿಯನ್ನು ಸಕಾರಾತ್ಮಕವಾಗಿ ಬಳಸಿಕೊಂಡಾಗ ಮಾತ್ರ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ. ಯುವಕರ ಕನಸು, ಪರಿಶ್ರಮ ಮತ್ತು ಸಾಧನೆಯೇ ವಿಕಸಿತ ಭಾರತದ ಭವಿಷ್ಯ ಹಾಗೂ ದೇಶದ ನಿಜವಾದ ಶಕ್ತಿ ಎಂದು ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ವಿಭಾಗದ ನಿರ್ದೇಶಕ ಪ್ರೊ. ಬಿ. ಶೇಖರ್ ಹೇಳಿದರು.
ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಪ್ರಜಾಪ್ರಭುತ್ವದ ಯಶಸ್ಸು ಕೇವಲ ಚುನಾವಣೆ ನಡೆಸುವುದರಲ್ಲಿ ಅಡಗಿಲ್ಲ. ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕು, ಸ್ವತಂತ್ರ ಅಭಿವ್ಯಕ್ತಿ, ನ್ಯಾಯ ಹಾಗೂ ಆಡಳಿತದಲ್ಲಿ ಭಾಗವಹಿಸುವ ಅವಕಾಶ ದೊರೆಯುವುದರಲ್ಲಿದೆ. ಮತದಾನವು ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಮಾತ್ರವಲ್ಲ, ಜನರ ಸಾರ್ವಭೌಮ ಅಧಿಕಾರದ ಅಭಿವ್ಯಕ್ತಿಯಾಗಿದೆ ಎಂಬ ಅರಿವು ಪ್ರತಿಯೊಬ್ಬರಲ್ಲೂ ಮೂಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಮಹಾಂತೇಶ್ ಬಂಡಿ ಮಾತನಾಡಿ, ಮೃತಪಟ್ಟವರ ಹೆಸರಿನಲ್ಲಿ ಮತದಾರರ ಗುರುತಿನ ಚೀಟಿಗಳು ಉಳಿಯುವುದು ಸೇರಿದಂತೆ ಮತದಾರರ ಪಟ್ಟಿಯ ದುರುಪಯೋಗ ತಡೆಯುವಲ್ಲಿ ಎಸ್ಐಆರ್ ಪ್ರಕ್ರಿಯೆಯ ಮಹತ್ವ ಹೊಂದಿದೆ ಎಂದು ತಿಳಿಸಿದರು.
ಕೆ. ಶ್ರೀವಾಣಿ ಸ್ವಾಗತಿಸಿದರು. ವರ್ಷಿತ ನಿರೂಪಿಸಿದರು.
ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಜನರು ತಮ್ಮ ಜ್ಞಾನ, ಕೌಶಲ್ಯ ಹಾಗೂ ಸಾಮರ್ಥ್ಯ ನಿರಂತರವಾಗಿ ವೃದ್ಧಿಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸುವುದರ ಜತೆಗೆ ಜೀವನದಲ್ಲಿ ಉನ್ನತ ಗುರಿ ಹೊಂದಿ ಸಾಧನೆಯತ್ತ ಸಾಗಬೇಕು. ವೈಯಕ್ತಿಕ ಬೆಳವಣಿಗೆಯೊಂದಿಗೆ ದೇಶದ ಅಭಿವೃದ್ಧಿಗು ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಂಡಾಗ ವಿಕಸಿತ ಭಾರತದ ಕನಸು ನನಸಾಗಲು ಸಾಧ್ಯ.
ಪ್ರೊ.ಎಚ್.ಎಸ್.ಮೋಹನ್
ಕುಲಸಚಿವ, ತುಮಕೂರು ವಿವಿ