ವಿಶೇಷ ವರದಿ
ತುಮಕೂರು: ಸುಮಾರು 8 ಎಕರೆ ವಿಸ್ತೀರ್ಣದ ಅಮಾನಿಕೆರೆಯನ್ನು ಸ್ವಚ್ಛಗೊಳಿಸಿ ಕಯಾಕಿಂಗ್& ಕನೋಯಿಂಗ್ ತರಬೇತಿ ಅಕಾಡೆಮಿಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಂಕಲ್ಪ ಕೈಗೊಂಡಿದೆ. ಪ್ರಸ್ತುತ ಅಮಾನಿಕೆರೆ ಅಂಗಳದಲ್ಲಿ ತರಬೇತಿ ಪಡೆಯುತ್ತಿರುವ ಮಕ್ಕಳು ನವೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಮಿನಿ ಒಲಿಂಪಿಕ್ಸ್ನಲ್ಲಿ ಭಾಗವಹಿಸಲಿರುವುದು ವಿಶೇಷವೆನಿಸಿದೆ.
ನಗರದ ಅಮಾನಿಕೆರೆಯಲ್ಲಿ ಜಲಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾಡಳಿತವು ಆರಂಭಿಸಿರುವ ಕಯಾಕಿಂಗ್& ಕನೋಯಿಂಗ್ ತರಬೇತಿ ಅಕಾಡೆಮಿಯು ಕರ್ನಾಟಕ ಒಲಿಂಪಿಕ್ಸ್ ಅಸೋಸಿಯೇಷನ್ (ಕೆಎಒ) ಕಾರ್ಯದರ್ಶಿ ಒತ್ತಾಸೆಯಂತೆ ನಡೆಯುತ್ತಿದ್ದು ತುಮಕೂರು ಜಿಲ್ಲೆಯಿಂದ ಕಯಾಕಿಂಗ್& ಕನೋಯಿಂಗ್ ಕ್ರೀಡೆಯಲ್ಲಿ ಉತ್ತಮಸಾಧನೆ ಮಾಡುವ ಸ್ಪರ್ಧಿಗಳ ತಂಡವನ್ನು ರೂಪಿಸುವ ಗುರಿ ಹೊಂದಲಾಗಿದೆ.
ಕ್ರೀಡಾ ಇಲಾಖೆಯ ಜವಾಬ್ದಾರಿಯನ್ನೂ ಹೊತ್ತಿರುವ ಡಿಸಿಎಂ ಡಾ. ಜಿ. ಪರಮೇಶ್ವರ್ ಅಮಾನಿಕೆರೆಯನ್ನು ಇತ್ತೀಚೆಗೆ "ಸೆಂಟರ್ ಆಫ್ ಎಕ್ಸಲೆನ್ಸ್' ಎಂದು ಘೋಷಿಸಿರುವುದು ಜಿಲ್ಲೆಯ ಕ್ರೀಡಾ ಅಭಿವೃದ್ಧಿ ಮತ್ತಷ್ಟು ಉತ್ತೇಜನ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳನ್ನು ಈ ವಿಶಿಷ್ಟ ಜಲಕ್ರೀಡೆಗಳತ್ತ ಸೆಳೆಯಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಇದರ ಫಲವಾಗಿ ಕಳೆದ 15 ದಿನಗಳಿಂದ 10 ರಿಂದ 14 ವರ್ಷದ ಮಕ್ಕಳಿಗೆ ಕಯಾಕಿಂಗ್-ಕನೋಯಿಂಗ್ ಕ್ರೀಡೆಯ ತರಬೇತಿ ನೀಡಲಾಗುತ್ತಿದ್ದು ಬೆಂಗಳೂರಿನಿಂದಲೇ ವಿಶೇಷ ತರಬೇತುದಾರರನ್ನು ಕರೆಸಲಾಗಿದೆ.
ಜಿಲ್ಲೆಯಲ್ಲಿ ಕ್ರೀಡಾ ಸಂಸತಿಯನ್ನು ಬೆಳೆಸುವುದು ಮತ್ತು ಯುವ ಜನತೆಯನ್ನು ಕ್ರೀಡೆಗಳತ್ತ ಆಕರ್ಷಿಸುವುದು ಜಿಲ್ಲಾಡಳಿತದ ಉದ್ದೇಶವಾಗಿದೆ. ತುಮಕೂರು ಕೇವಲ ಶೈಕ್ಷಣಿಕ ಜಿಲ್ಲೆಯಾಗಿ ಉಳಿಯದೆ, ಕ್ರೀಡಾ ಕ್ಷೇತ್ರದಲ್ಲಿಯು ರಾಜ್ಯಕ್ಕೆ ಮಾದರಿಯಾಗಬೇಕೆಂಬುದು ಡಿಸಿಎಂ ಜಿ.ಪರಮೇಶ್ವರ್ ಆಶಯವಾಗಿದೆ.