ತುಮಕೂರು: ಯುವಜನರು ಕೇವಲ ಉದ್ಯೋಗಾಕಾಂಕ್ಷಿಗಳಾಗದೆ, ದೇಶದ ಅಭಿವೃದ್ಧಿಗೆ ಹೊಸ ಆಲೋಚನೆ, ಸೃಜನಶೀಲತೆ ಮತ್ತು ನಾಯಕತ್ವದ ಮೂಲಕ ಕೊಡುಗೆ ನೀಡುವ ಜವಾಬ್ದಾರಿಯುತ ನಾಯಕರಾಗಿ ರೂಪುಗೊಳ್ಳಬೇಕು ಎಂದು ತುಮಕೂರು ವಿವಿ ಕಲಾ ನಿಕಾಯ ಡೀನ್ ಪ್ರೊ.ಕೆ.ಜಿ.ಪರಶುರಾಮ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಕೋಶ ಹಾಗೂ ಬೆಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ವಿಕಸಿತ್ ಭಾರತ ಯಂಗ್ ಲೀಡರ್ಸ್ ಡೈಲಾಗ್ ಜಿಲ್ಲಾ ಮಟ್ಟದ ಚಾಂಪಿಯನ್ ಶಿಪ್ ಸ್ಪರ್ಧೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಮಹತ್ವದ ಗುರಿಯನ್ನು ಸಾಕಾರಗೊಳಿಸುವಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂದಿನ ಸಮಸ್ಯೆಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಹಾಗೂ ನವೀನ ಚಿಂತನೆಯನ್ನು ಯುವಜನರಲ್ಲಿ ಬೆಳೆಸುವುದು ಇಂತಹ ಸ್ಪರ್ಧೆಗಳ ಪ್ರಮುಖ ಉದ್ದೇಶವಾಗಿದೆ ಎಂದರು.
ವಿಕಸಿತ ಭಾರತ ಪರಿಕಲ್ಪನೆಯು ಕೇವಲ ಆರ್ಥಿಕ ಬೆಳವಣಿಗೆಗೆ ಸೀಮಿತವಾಗದೆ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಕೃಷಿ, ಉದ್ಯೋಗ, ಪರಿಸರ ಸಂರಕ್ಷಣೆ, ಸಾಮಾಜಿಕ ಸಮಾನತೆ ಸೇರಿದಂತೆ ಎಲ್ಲ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಯನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಯುವಜನರ ಚಿಂತನೆ, ಸಂಶೋಧನೆ ಮತ್ತು ಕ್ರಿಯಾಶೀಲ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ ಎಂದು ರಾಜ್ಯಶಾಸ್ತ್ರ ಅಧ್ಯಯನ ವಿಭಾಗ ಹಾಗೂ ಸಂಶೋಧನಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಪ್ರೊ.ಜಿ.ಬಸವರಾಜ ತಿಳಿಸಿದರು.
ಯುವಕರು ಕೇವಲ ಏಕಮುಖ ಸಂವಹನ ರೀತಿಯಲ್ಲಿ ತಮ್ಮ ವಿಚಾರಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸೀಮಿತವಾಗಬಾರದು. ಬದಲಾಗಿ, ಸಂವಾದದ ಮೂಲಕ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು, ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಯುವಜನರು ತಮ್ಮ ಆಲೋಚನೆ, ಪ್ರತಿಭೆ ಹಾಗೂ ನಾಯಕತ್ವದ ಗುಣಗಳನ್ನು ಸಮರ್ಥವಾಗಿ ಬಳಸಿಕೊಂಡು ಸದೃಢ ಮತ್ತು ಸ್ವಾವಲಂಬಿ ಭಾರತ ನಿಮಾರ್ಣಕ್ಕೆ ಒತ್ತು ನೀಡಬೇಕು. ದೇಶದ ಅಭಿವೃದ್ಧಿಯ ಕುರಿತು ಕೇವಲ ಮಾತನಾಡುವುದಷ್ಟೇ ಅಲ್ಲದೆ, ಅದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ತುಮಕೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಆರ್.ಸುದೀಪ್ ಕುಮಾರ್ ಉಪಸ್ಥಿತರಿದ್ದರು. ವಿವಿಯ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಸಂಯೋಜನಾಧಿಕಾರಿ ಪ್ರೊ. ನಾಗಭೂಷಣ ಬಗ್ಗನಡು ಸ್ವಾಗತಿಸಿದರು. ಅನಿತಾ ವಂದಿಸಿದರು.