ತುಮಕೂರು: ರಾಜ್ಯದಲ್ಲಿ ಸ್ಥಳಿಯ ಸಂಸ್ಥೆಗಳ ಚುನಾವಣೆಯನ್ನು ನಡೆಸದಿರುವುದು ಎಲ್ಲೆಡೆಯೂ ಅಧಿಕಾರಶಾಹಿ ವ್ಯವಸ್ಥೆಯ ವೈಭವೀಕರಣಕ್ಕೆ ಕಾರಣವಾಗಿದೆ. ಕೂಡಲೇ ರಾಜ್ಯದಲ್ಲಿ ತಾಪಂ, ಜಿಪಂ ಚುನಾವಣೆಯನ್ನು ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಬೇಕು ಎಂದು ಕರ್ನಾಟಕ ಪಂಚಾಯತ್ ರಾಜ್ ಪರಿಷತ್ ಪ್ರಧಾನ ಕಾರ್ಯದರ್ಶಿ ಕಾಡಶೆಟ್ಟಿಹಳ್ಳಿ ಸತೀಶ್ ರಾಜ್ಯಪಾಲರಲ್ಲಿ ಮನವಿ ಮಾಡಿದರು.
ರಾಜ್ಯಪಾಲೆ ಡಾ.ಸುಧಾ ಯಾದವ್ ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸಂಜೆ ಜಿಲ್ಲೆಯ ವಿವಿಧ ಕ್ಷೇತ್ರಗಳ 20 ಗಣ್ಯರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸತೀಶ್, ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯದಲ್ಲಿ ಅಧಿಕಾರಿಶಾಹಿ ವ್ಯವಸ್ಥೆಯಿಂದ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದನೆ ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.
ಶಾಸಕ ಟಿ.ಬಿ.ಜಯಚಂದ್ರ, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಹೇಶ್, ಜನಪದ ಅಕಾಡಮಿ ಸದಸ್ಯ ಮಲ್ಲಿಕಾರ್ಜುನ, ನಾಟಕ ಅಕಾಡಮಿ ಸದಸ್ಯ ಉಗಮ ಶ್ರೀನಿವಾಸ್ ಮತ್ತಿತರರ ಗಣ್ಯರೊಂದಿಗೆ ರಾಜ್ಯಪಾಲರು ಮಸಾಲೆ ದೋಸೆ ರುಚಿ ಸವಿದರು. ಸಂವಾದದಲ್ಲಿ ಭಾಗವಹಿಸಿದ್ದ ಗಣ್ಯರು ಜಿಲ್ಲೆಯ ಜನಪದ ವೈವಿಧ್ಯತೆ, ನಾಟಕ, ಕಲೆ, ರೈತರ ಬದುಕು, ಬವಣೆಗಳ ಬಗ್ಗೆ ರಾಜ್ಯಪಾಲರಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಶುಭಕಲ್ಯಾಣ್ ಕೂಡ ಜಿಲ್ಲೆಯಲ್ಲಿ ನಡೆಸಿರುವ ಇವೆಂಟ್ಗಳಿಗೆ ಸಂಬಂಧಪಟ್ಟಂತೆ ತಯಾರಿಸಿಕೊಂಡಿರುವ ಕಾಫಿಟೇಬಲ್ ಪುಸ್ತಕವನ್ನು ರಾಜ್ಯಪಾಲರಿಗೆ ಕೊಟ್ಟು ಸಾಧನೆಯನ್ನು ಹೇಳಿಕೊಂಡಿದ್ದು ವಿಶೇಷ ಎನ್ನಿಸಿತು. ಗಣ್ಯರೊಂದಿಗೆ ಸಂವಾದ ಏರ್ಪಡಿಸಿದ್ದರೂ ಶುಭಕಲ್ಯಾಣ್ ಅವರೇ ರಾಜ್ಯಪಾಲರೊಂದಿಗೆ ಹೆಚ್ಚು ಮಾತನಾಡಿದ್ದು ಗಣ್ಯರಿಗೆ ಪರಿಚಯಿಸಿಕೊಳ್ಳಲಷ್ಟೇ ಅವಕಾಶವಾಯಿತು.