ತುಮಕೂರಿನಲ್ಲಿ ಏಡ್ಸ್ ಜಾಗೃತಿ ಜಾಥಗೆ ನ್ಯಾ.ನೂರುನ್ನೀಸ ಚಾಲನೆ ನೀಡಿದರು. ಡಾ.ಮೋಹನ್ದಾಸ್, ಡಾ.ಚಂದ್ರಶೇಖರ್, ಡಾ.ಅಶೋಕ್ ಮತ್ತಿತರರು ಇದ್ದರು.
- ವಿಶ್ವ ಏಡ್ಸ್ ದಿನ
- ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ
- ತುಮಕೂರಿನಲ್ಲಿ ಜಾಗೃತಿ ಜಾಥಾ
ತುಮಕೂರು: ಜಿಲ್ಲೆಯಲ್ಲಿ ಎಚ್ಐವಿ ರೋಗಿಗಳಿಗಾಗಿ ಸೂಕ್ತವಾದ ವಸತಿ ಸೌಲಭ್ಯಗಳ ಕೊರತೆಯಿದ್ದು, ಏಡ್ಸ್ ರೋಗಿಗಳಿಗೆ ವಸತಿ ಸೇರಿದಂತೆ ಹಲವು ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರೇತರ ಸಂಸ್ಥೆಗಳು ನೆರವಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮನವಿ ಮಾಡಿದರು.
ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ವಿಶ್ವ ಏಡ್ಸ್ ದಿನದ ಅಂಗವಾಗಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಎಚ್ಐವಿ ರೋಗಿಗಳಿಗೆ ಸರ್ಕಾರದಿಂದಲೇ ಎಲ್ಲಾ ಕೆಲಸಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಅನೇಕ ವಿದೇಶಗಳಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು ಸಮಾಜಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ಪೂರಕವಾದ ಸೇವೆಗಳನ್ನು ನೀಡುತ್ತಿವೆ. ಅದೇ ರೀತಿ ಜಿಲ್ಲೆಯಲ್ಲಿಯೂ ಏಡ್ಸ್ ರೋಗಿಗಳ ನೆರವಿಗಾಗಿ ಸರ್ಕಾರೇತರ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಕೋರ ಬಳಿಯಿರುವ ನಿರಾಶ್ರಿತ ಕೇಂದ್ರದಲ್ಲಿ ಏಡ್ಸ್ ರೋಗಿಯೊಬ್ಬರನ್ನು ದಾಖಲಿಸಲಾಗಿತ್ತು. ಇದು ಅಂಗವಿಕಲರು, ವೃದ್ಧರು ಇರುವ ನಿರಾಶ್ರಿತ ಕೇಂದ್ರವಾಗಿರುವುದರಿಂದ ಏಡ್ಸ್ ರೋಗಿಯನ್ನು ಇರಿಸಿಕೊಳ್ಳಲು ಆಗುವುದಿಲ್ಲವೆಂದು ಹೊರ ಕಳಿಸಲಾಗಿದೆ ಎಂದು ಬೇಸರಿದರು.
ಏಡ್ಸ್ ದಿನಚರಣೆ ಕೇವಲ ಆಚರಣೆ ಮಟ್ಟಕ್ಕೆ ಸೀಮಿತವಾಗಬಾರದು. ಎಚ್ಐವಿ ರೋಗಿಗಳಿಗೂ ಸಮಾಜದಲ್ಲಿ ಗೌರವದಿಂದ ಬದುಕುವ ಹಕ್ಕು ಇದೆ. ಅಧಿಕಾರಿಗಳು, ಆರೋಗ್ಯ ಇಲಾಖೆ ಹಾಗೂ ಸಮಾಜ ಸೇವಾ ಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ರೋಗಿಗಳಿಗೆ ಬೇಕಾದ ಸಮಯೋಚಿತ ಚಿಕಿತ್ಸೆ ಮತ್ತು ಸೌಲಭ್ಯಗಳು ದೊರಕುತ್ತವೆ ಎಂದರು.
ಎಚ್ಐವಿ ನಿಯಂತ್ರಣಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ವಿವಿಧ ಜಾಗೃತಿ ಕಾರ್ಯಕ್ರಮ, ಶಿಕ್ಷಣ ಕಾರ್ಯಾಗಾರ, ಯುವಕರಿಗೆ ತಿಳುವಳಿಕೆ ನೀಡುವ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಜನರಲ್ಲಿ ಇರುವ ತಪ್ಪು ಕಲ್ಪನೆಗಳನ್ನು ನಿವಾರಣೆ ಮಾಡಿದಾಗ ಮಾತ್ರ ರೋಗ ತಡೆಗಟ್ಟುವಿಕೆ ಯಶಸ್ವಿಯಾಗುತ್ತದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಮೋಹನ್ದಾಸ್ ಮಾತನಾಡಿ, ಜಿಲ್ಲೆಯಲ್ಲಿ ಏಡ್ಸ್ ಹರಡುವಿಕೆ ತಡೆಯುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲಾ ತಾಲೂಕುಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಅರಿವು ಕಾರ್ಯಕ್ರಮಗಳು ಹಾಗೂ ಜಾಗೃತಿ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ನಗರದಲ್ಲಿ ಕೃಷಿ ಮಾರುಕಟ್ಟೆ, ಕೆಎಸ್ಆರ್ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ಏಡ್ಸ್ ನಿಯಂತ್ರಣ ಕುರಿತ ಕರಪತ್ರಗಳನ್ನು ಹಂಚಿ, ಜಾನಪದ ಕಲಾ ತಂಡಗಳಿಂದ ಬೀದಿ ನಾಟಕ ಪ್ರದರ್ಶನದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
"ಹೆಚ್ಐವಿ/ಏಡ್ಸ್ ನಿಯಂತ್ರಣಕ್ಕೆ ಇರುವ ಅಡೆತಡೆಗಳನ್ನು ಕೊನೆಗಾಣಿಸೋಣ" ಎಂಬ ಘೋಷವಾಕ್ಯದೊಂದಿಗೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ನಗರದೆಲ್ಲೆಡೆ ಜಾಗೃತಿ ಜಾಥ ನಡೆಸಿದರು.
ಡಿಎಚ್ಒ ಡಾ.ಚಂದ್ರಶೇಖರ್, ಪ್ರಭಾರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಅಶೋಕ್ ಮತ್ತಿತರರು ಇದ್ದರು.