Work hard to build the party at the grassroots level. 
ತುಮಕೂರು

ತಳಮಟ್ಟದಲ್ಲಿ ಪಕ್ಷ ಸಂಟನೆಗೆ ಶ್ರಮಿಸಿ

ಶಿರಾ: ರಾಜ್ಯದಲ್ಲಿ 2028ಕ್ಕೆ ಜೆಡಿಎಸ್​ ಅಧಿಕಾರಕ್ಕೆ ಬರಲಿದ್ದು, ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆ. ಹಾಗಾಗಿ ಕಾರ್ಯಕರ್ತರು ಗ್ರಾಮಗಳ ಪ್ರತಿ ಮನೆಗೆ ತೆರಳಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಬೇಕು ಎಂದು ಜಿಲ್ಲಾ ಜೆಡಿಎಸ್​ ಅಧ್ಯಕ್ಷ, ಮಾಜಿ ಶಾಸಕ ಎಚ್​.ನಿಂಗಪ್ಪ ಹೇಳಿದರು.
ನಗರದ ಶ್ರೀರಾಮ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಜೆಡಿಎಸ್​ ಪಕ್ಷದಿಂದ ಹಮ್ಮಿಕೊಂಡಿರುವ ಮತದಾರಪಟ್ಟಿ ಪರಿಷ್ಕರಣೆ ಮತ್ತು ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ ಮತ್ತು ಗಣ್ಯರಿಗೆ ಅಭಿನಂದನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ದೇವೇಗೌಡರು ನೀರಾವರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದಾರೆ. ತುಮಕೂರಿಗೆ 24 ಟಿಎಂಸಿ ಹೇಮಾವತಿ ನೀರು ಬರಲು ದೇವೇಗೌಡ ಅವರೇ ಕಾರಣ. ಎಚ್​.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗ ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಆಗಿದ್ದು. ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಜೆಡಿಎಸ್​ ಸುಭದ್ರವಾಗಿದೆ. ಶಿರಾ ತಾಲೂಕಿನಲ್ಲೂ ಜೆಡಿಎಸ್​ ಸುಭದ್ರವಾಗಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್​ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದರು.
ತಾಲೂಕು ಜೆಡಿಎಸ್​ ಅಧ್ಯಕ್ಷ ಸತ್ಯಪ್ರಕಾಶ್​ ಮಾತನಾಡಿ, ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರ ಮಾರ್ಗದರ್ಶನದಲ್ಲಿ ಜೆಡಿಎಸ್​ ಬಲ ವರ್ಧನೆಗೆ ಶಿರಾ ತಾಲೂಕಿನಲ್ಲಿ ವಿವಿಧ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ತಾಲೂಕಿನ ಪ್ರತಿಯೊಂದು ಬೂತ್​ಗಳಲ್ಲೂ ನಡೆಯಲಿದ್ದು, ತಾಲೂಕಿನ 274 ಬೂತ್​ಗಳಿಗೂ ಒಬ್ಬೊಬ್ಬ ಪದಾಧಿಕಾರಿಗಳನ್ನು ನೇಮಿಸಿದ್ದೇವೆ. ನೇಮಕವಾಗಿರುವ ಎಲ್ಲ ಪದಾಧಿಕಾರಿಗಳು ಪ್ರತಿ ಬೂತ್​ಗಳಲ್ಲೂ ಪಕ್ಷ ಸಂಘಟಿಸಿ ಎಂದರು.
ತುಮಕೂರು ಹಾಲು ಒಕ್ಕೂಟ ನಿರ್ದೇಶಕ ಎಸ್​.ಆರ್​.ಗೌಡ ಮಾತನಾಡಿ, ಇಂದು ನೇಮಕವಾಗಿರುವ ಜೆಡಿಎಸ್​ ಪಕ್ಷದ ಬಿಎಲ್​ಒಎಗಳು ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಮತದಾರರ ಪಟ್ಟಿ ಪರಿಷ್ಕರಣೆಯಿಂದ ಮುಂಬರುವ ಎಲ್ಲ ಚುನಾವಣೆಗೂ ಜೆಡಿಎಸ್​ ಪಕ್ಷಕ್ಕೆ ಅನುಕೂಲವಾಗುತ್ತದೆ. ಆದ್ದರಿಂದ ಕಾರ್ಯಕರ್ತರು ತಳಮಟ್ಟದಲ್ಲಿ ಪಕ್ಷ ಸಂಘಟಿಸಬೇಕು ಎಂದರು.
ಜಿಲ್ಲಾ ಜೆಡಿಎಸ್​ ಮಾಜಿ ಅಧ್ಯಕ್ಷ ಆರ್​.ಸಿ.ಅಂಜಿನಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ದೇವರಾಜು, ಜಿಲ್ಲಾ ಜೆಡಿಎಸ್​ ಉಪಾಧ್ಯಕ್ಷ ಗಂಗಣ್ಣ, ಎಸ್​ಟಿ ಘಟಕದ ಜಿಲ್ಲಾಧ್ಯಕ್ಷ ಹುಂಜನಾಳು ರಾಜಣ್ಣ, ರಾಜ್ಯ ಜೆಡಿಎಸ್​ ಪ್ರಧಾನ ಕಾರ್ಯದರ್ಶಿ ರೆಹಮತ್​, ಮಹಿಳಾ ಘಟಕದ ಅಧ್ಯಕ್ಷ ಜಯಮ್ಮ, ವಕ್ತಾರ ಲಿಂಗದಹಳ್ಳಿ ಸುಧಾಕರ್​ ಮತ್ತಿತರು ಇದ್ದರು.