ತುಮಕೂರಿನಲ್ಲಿ ಮಹಿಳಾ ಆಯೋಗ ನಿಮ್ಮ ಮನೆ ಬಾಗಿಲಿಗೆ ಕಾರ್ಯಕ್ರಮದಡಿ ಮಹಿಳಾ ಜನ ಸುನ್ವಾಯಿ ಕುಂದುಕೊರತೆಯನ್ನು ಡಾ.ನಾಗಲಕ್ಷ್ಮೀ ಚೌಧರಿ ಆಲಿಸಿದರು. ಡಾ.ಎನ್.ತಿಪ್ಪೇಸ್ವಾಮಿ, ಬಿ.ಶುಭ, ಪುರುಷೋತ್ತಮ್ ಮತ್ತಿತರರು ಇದ್ದರು.
- ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ
- ಮಹಿಳಾ ಜನ ಸುನ್ವಾಯಿ
- ಸಾರ್ವಜನಿಕ ಕುಂದು ಕೊರತೆ ಸಭೆ
ತುಮಕೂರು: ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಲಿಂಗ ಸೂಕ್ಷ್ಮತೆ ಇರಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ತಾಕೀತು ಮಾಡಿದರು.
ನಗರದ ಬಾಲಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮಹಿಳೆಯರ ದೂರು ಹಾಗೂ ಅಹವಾಲುಗಳನ್ನು ಆಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೌರ್ಜನ್ಯಕ್ಕೊಳಗಾದ ಮಹಿಳೆಯರು ಪೊಲೀಸ್ ಠಾಣೆಗಳಿಗೆ ನ್ಯಾಯ ಕೇಳಿ ಹೋದ ಸಂದರ್ಭದಲ್ಲಿ ಸೌಜನ್ಯದ ಮಾತುಗಳನ್ನಾಡದೆ ಅಗೌರವದಿಂದ ನಡೆಸಿಕೊಂಡ ಬಗ್ಗೆ ಸಭೆಯಲ್ಲಿ ಸಾಕಷ್ಟು ದೂರುಗಳು ಕೇಳಿ ಬಂದಿದ್ದು ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಅಥವಾ ಯಾವುದೇ ಸರ್ಕಾರಿ ಇಲಾಖೆ ವ್ಯವಹರಿಸುವಾಗ ಲಿಂಗ ಸೂಕ್ಷ್ಮತೆಯನ್ನು ಅರಿಯಬೇಕು ಎಂದು ಹೇಳಿದರು.
ಮಹಿಳೆಯರಿಗೆ ಸರಿಯಾದ ಸ್ಪಂದನೆ ಸಿಗಬೇಕೆಂಬ ಹಿನ್ನೆಲೆಯಲ್ಲಿ ಹಾಗೂ ಸಂಬಂಧಿಸಿದ ಅಧೀನ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆಯಲಾಗಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಅಥವಾ ಇನ್ನಿತರೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸರಿಯಾದ ಸ್ಪಂದಿಸದಿದ್ದರೆ ಇಲಾಖೆ ಬಗ್ಗೆ ಜನರಲ್ಲಿ ವಿಶ್ವಾಸ ಹೋಗುತ್ತದೆ. ಅಂತಹ ಕಳಂಕವನ್ನು ತರದಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ತಿಳಿಸಿದರು.
ಇಂದಿನ ಅಹವಾಲು ಸ್ವೀಕಾರ ಸಭೆಯಲ್ಲಿ ಮಹಿಳೆಯರ ಸಾಕಷ್ಟು ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿದೆ ಎಂಬ ವಿಶ್ವಾಸ ನನಗಿದೆ. ಸಂಬಂಧಿಸಿದ ಇಲಾಖೆಗಳ ಎಲ್ಲಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದು, ಅಹವಾಲುಗಳಿಗೆ ಉತ್ತರ ನೀಡಿದ್ದಾರೆ. ಇನ್ನೂ ಸಮಸ್ಯೆಗೆ ಸ್ಪಂದನೆ ಸಹ ನೀಡಲಾಗಿದೆ. ಪ್ರತಿ ಬಾರಿ ಮಹಿಳಾ ಆಯೋಗವೇ ಸಮಸ್ಯೆಗಳನ್ನು ಬಗೆಹರಿಸಬೇಕೆಂಬ ಮನಸ್ಥಿತಿಯನ್ನು ಅಧಿಕಾರಿಗಳು ಬದಿಗಿರಿಸಿ ತಮ್ಮ ವ್ಯಾಪ್ತಿಯಲ್ಲಿ ಮಹಿಳೆಯರ ಕಲ್ಯಾಣಕ್ಕಾಗಿ ಹಾಗೂ ಅವರ ಸಮಸ್ಯೆಗೆ ಸ್ಪಂದನೆಯನ್ನು ನೀಡಬೇಕಿದೆ ಎಂದು ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ಮಹಾನಗರ ಪಾಲಿಕೆ ಆಯುಕ್ತೆ ಬಿ.ಶುಭ, ಜಿಪಂ ಉಪಕಾರ್ಯದರ್ಶಿ ಈಶ್ವರಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪುರುಷೋತ್ತಮ್, ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಡಾ. ಸಿದ್ದರಾಮಣ್ಣ ಮತ್ತಿತರರು ಉಪಸ್ಥಿತರಿದ್ದರು.
ರಾಯಚೂರು ಬಿಟ್ಟರೆ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಮಹಿಳಾ ಸಮಸ್ಯೆಗಳು ಹಾಗೂ ದೂರುಗಳು ಕೇಳಿಬಂದಿದೆ. ಬಾಣಂತಿಯರನ್ನು ಊರಿಂದ ಹೊರಗಿಡುವ ಅನಿಷ್ಠ ಪದ್ಧತಿ ಈ ಜಿಲ್ಲೆಯಲ್ಲಿ ಇದ್ದು, ಈ ಮೌಢ್ಯವನ್ನು ತೊಡೆದು ಹಾಕಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು. ಕಾನೂನನ್ನು ನಿರ್ಧಾಕ್ಷಿಣ್ಯವಾಗಿ ಜಾರಿಗಳಿಸಿದಾಗ ಮಾತ್ರ ಮೌಢ್ಯತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ತಕ್ಷಣ ಕ್ರಮ ವಹಿಸಬೇಕಿದೆ.
ಅಧ್ಯಕ್ಷೆ, ರಾಜ್ಯ ಮಹಿಳಾ ಆಯೋಗ
ಸಾಂತ್ವನ ಕೇಂದ್ರ ಮುಚ್ಚದಂತೆ ಪತ್ರ
ತಿಂಗಳಿಗೊಮ್ಮೆಯಾದರೂ ಪಂಚಾಯಿತಿ ಮಟ್ಟದಲ್ಲಿ ಮಹಿಳೆಯರ ಗ್ರಾಮ ಸಭೆ ನಡೆಸಿದಲ್ಲಿ ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಈ ಸಂಬಂಧ ಸರ್ಕಾರಕ್ಕು ಹಾಗೂ ಜಿಲ್ಲಾಡಳಿತಕ್ಕು ಪತ್ರ ಬರೆಯಲಾಗುವುದು. ಇನ್ನೂ ಜಿಲ್ಲಾ ಸಾಂತ್ವನ ಕೇಂದ್ರ ಹಾಗೂ ಸಖಿ ಕೇಂದ್ರಗಳಿಂದ ಮಹಿಳೆಯರಿಗೆ, ತಾಯಂದಿರಿಗೆ ನೆರವು ಸಿಗುತ್ತಿದ್ದು ಈ ನಿಟ್ಟಿನಲ್ಲಿ ಸಾಂತ್ವನ ಕೇಂದ್ರಗಳನ್ನು ಮುಚ್ಚದಂತೆ ಆಯೋಗವು ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದು ಡಾ.ನಾಗಲಕ್ಷ್ಮೀ ಚೌಧರಿ ಹೇಳಿದರು.