- ನಿವೇಶನಕ್ಕಾಗಿ ವ್ಯವಸ್ಥೆ ವಿರುದ್ಧ ಹೋರಾಟ
- ಶಿರಾ ನಗರದ ಪೌರಕಾರ್ಮಿಕ ಲೇಔಟ್ನಲ್ಲಿ ದುರಂತ
- ಮೃತಳ ಪತಿ ಶ್ರೀಕಾಂತ್ ವಿರುದ್ಧ ಎಫ್ ಐಆರ್
ಹೆತ್ತ ಮಕ್ಕಳಿಗೆ ವಿಷವುಣಿಸಿ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ. ನಿವೇಶನ ಹಾಗೂ ಸೂರಿಗಾಗಿ ವ್ಯವಸ್ಥೆ ವಿರುದ್ಧ ಹೋರಾಟ ನಡೆಸಿದ್ದ ರಾಬಿಯಾ (32) ಆತ್ಮಹತ್ಯೆ ಮಾಡಿಕೊಂಡಿದ್ದು ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.
ವ್ಯವಸ್ಥೆ ವಿರುದ್ಧ ಸಮರ ಸಾರಿ ಜಯಿಸಿದ್ದ ರಾಬಿಯಾ ನಗರದ ಹೊರವಲಯದ ಪೌರಕಾರ್ಮಿಕ ಲೇಔಟ್ನಲ್ಲಿ ವಾಸಿಸುತ್ತಿದ್ದು ಬುಧವಾರ ತಡರಾತ್ರಿ ಮಕ್ಕಳಿಗೆ ವಿಷವಿಕ್ಕಿ ಆನಂತರ ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿಷ ಸೇವಿಸಿದ ತಮನ್ನಾ (10) ಹಾಗೂ ಸಿಮ್ರಾನ್ (5) ಸಾವನ್ನಪ್ಪಿದ್ದಾರೆ.
ಬೆಳಕಿಗೆ ಬಂದ ಘಟನೆ: ಬೆಳಗ್ಗೆ 10 ಗಂಟೆಯಾದರು ರಾಬಿಯಾ ಮನೆ ಬಾಗಿಲು ತೆರೆದು ಹೊರಬಾರದೇ ಇದ್ದಾಗ ಮೂರನೇ ಪತಿ ಶ್ರೀಕಾಂತ್ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಮನೆ ಬಾಗಿಲು ತೆರೆದಾಗ ಆತ್ಮಹತ್ಯೆ ಘಟನೆ ಬೆಳಕಿಗೆ ಬಂದಿದೆ. ಮೇಲ್ನೋಟಕ್ಕೆ ಮೂವರು ವಿಷ ಸೇವಿಸಿರುವುದು ಕಂಡುಬಂದಿದೆ.
ಎಸ್ಪಿ ಭೇಟಿ : ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್, ಶಿರಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದರು. ಮೃತ ದೇಹಗಳನ್ನು ಮರಣೋತ್ತರ ಪರೀೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಇನ್ನು ಮೃತ ರಾಬಿಯಾ ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಮೃತಳ ತಾಯಿ ನಗೀನಾ ದೂರು ಆಧರಿಸಿ
ಶಿರಾ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಕ್ಕಳನ್ನ ಕೊಲೆ ಮಾಡಿದ ಆರೋಪದ ಮೇಲೆ ರಾಬಿಯಾ ವಿರುದ್ಧ ಒಂದು ಪ್ರಕರಣ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹಿನ್ನೆಲೆ ಶ್ರೀಕಾಂತ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ಆರೋಪಿ ಶ್ರೀಕಾಂತ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಕೈಗೊಂಡಿದ್ದಾರೆ.
ಇನ್ನು ಈ ರಾಬಿಯಾ ಸಾಮಾನ್ಯಳೇನಲ್ಲ. ಆಶ್ರಯ ನಿವೇಶನಕ್ಕಾಗಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದ್ದಳು. ಈ ಹಿಂದೆ ಸಿಎಂ ಸಿದ್ದರಾಮಯ್ಯ ತುಮಕೂರಿನಲ್ಲಿ ಸರ್ಕಾರಿ ಸವಲತ್ತು ವಿತರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಏರು ಧ್ವನಿಯಲ್ಲಿ ಕೂಗಿ ರಾಬಿಯಾ ಗಮನಸೆಳೆದಿದ್ದಳು. ಈ ವೇಳೆ ನಿವೇಶನ ನೀಡಲು ಸಿಎಂ ಆದೇಶಿಸಿದ್ದರು. ಆದರೂ ಅಧಿಕಾರಿಗಳು ವರ್ಷ ಕಳೆದರು ನಿವೇಶನ ನೀಡದೆ ಅಲೆದಾಡಿಸಿ ಸತಾಯಿಸಿದ್ದರು. ಈ ಧೋರಣೆಯಿಂದ ಬೇಸತ್ತ 6 ತಿಂಗಳ ಹಿಂದೆ ಜಿಲ್ಲಾಉಸ್ತುವಾರಿ ಸಚಿವರಾಗಿದ್ದ ಜಿ.ಪರಮೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ರಂಪಾಟ ಮಾಡಿದ್ದಲ್ಲದೆ ಗೃಹ ಸಚಿವರಿಗೆ ನೇರವಾಗಿ ದಯಾಮರಣಕ್ಕೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದಳು.
ಆತ್ಮಹತ್ಯೆಗೆ ಪ್ರಚೋದನೆ ಶ್ರೀಕಾಂತ್ ವಿರುದ್ಧ ಎಫ್ ಐಆರ್
ರಾಬಿಯಾಗೆ ಒಟ್ಟು ಮೂರು ಗಂಡಂದಿರು. ಮೊದಲನೇ ಗಂಡನಿಂದ ತಲಾಕ್ ಪಡೆದ ಬಳಿಕ ಎರಡನೇ ಮದುವೆಯಾಗಿದ್ದಳು. ಮದುವೆ ಆದ ಕೆಲವೇ ದಿನಗಳಲ್ಲಿ ಎರಡನೇ ಗಂಡ ಅನಾರೋಗ್ಯದಿಂದ ಸಾವನ್ನಪ್ಪಿದ್ದ. ತಿಂಗಳ ಹಿಂದಷ್ಟೇ ತುಮಕೂರು ನಗರದ ರೌಡಿಶೀಟರ್ ಶ್ರೀಕಾಂತ್ನನ್ನು ವಿವಾಹವಾಗಿದ್ದಳು. ಅಲ್ಲದೇ ಸರ್ಕಾರದಿಂದ ಕೊಟ್ಟಿದ್ದ ನಿವೇಶನದಲ್ಲಿ ನಿರ್ಮಿಸಿಕೊಂಡ ಮನೆಯಲ್ಲಿ ಕಳೆದ 4 ದಿನಗಳಿಂದ ಮಕ್ಕಳೊಂದಿಗೆ ರಾಬಿಯಾ ವಾಸವಿದ್ದಳು. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಹಿನ್ನೆಲೆ ಶ್ರೀಕಾಂತ್ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.
ಮಕ್ಕಳಿಬ್ಬರಿಗೆ ವಿಷಪ್ರಾಶನ ಮಾಡಿ ರಾಬಿಯಾ ಎಂಬ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ
ಟನೆ ಶಿರಾ ನಗರದ ಹೊರವಲಯದಲ್ಲಿ ನಡೆದಿದೆ. ಈ ಸಂಬಂಧ ರಾಬಿಯಾ ವಿರುದ್ಧ ಮಕ್ಕಳಿಗೆ ವಿಷವುಣಿಸಿದ ಪ್ರಕರಣ ಹಾಗೂ ಆಕೆಯ ಪತಿ ಶ್ರೀಕಾಂತ್ ವಿರುದ್ಧ ಆತ್ಮಹತ್ಯೆ ಪ್ರಚೋದನೆ ಹಿನ್ನೆಲೆ ಬಿಎನ್ಎಸ್ 108ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.