ಕೆಟ್ಟು ನಿಂತಿರುವ ಶುದ್ಧ ನೀರಿನ ಟಕ
- ವರ್ಷವಾದರೂ ರಿಪೇರಿಯಾಗದ ನೀರಿನ ಘಟಕ
ವರ್ಷವಾದರೂ ರಿಪೇರಿಯಾಗದ ನೀರಿನ ಘಟಕ
ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವ ಕಂಬದಹಳ್ಳಿ ಗ್ರಾಮಸ್ಥರು
ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಹೂಯಿಲ್ ದೊರೆ ಗ್ರಾಪಂ ವ್ಯಾಪ್ತಿಯ ಕಂಬದಹಳ್ಳಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ನಿಂತು ವರ್ಷ ಕಳೆದರೂ ಈವರೆಗೆ ರಿಪೇರಿ ಮಾಡುವ ಗೋಜಿಗೆ ಅಧಿಕಾರಿಗಳು ಮುಂದಾಗದ ಕಾರಣ ಗ್ರಾಮಸ್ಥರು ಕುಡಿಯುವ ನೀರಿಗೆ ಪರದಾಡುವಂತಾಗಿದೆ.
ಕಂಬದಹಳ್ಳಿಯಲ್ಲಿ ಸಾರ್ವಜನಿಕರು ಕುಡಿಯುವ ನೀರಿಗಾಗಿ ಹೊನ್ನೇನಹಳ್ಳಿ ಹೂಯಿಲ್ ದೊರೆ ರಂಗನಾಥಪುರ ಗ್ರಾಮಗಳಿಗೆ ತೆರಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಹಣ ಕೊಟ್ಟು ಖಾಸಗಿ ಶುದ್ಧ ಕುಡಿಯುವ ನೀರನ್ನು ಕೊಂಡುಕೊಳ್ಳುವ ಪರಿಸ್ಥಿತಿ ನಿಮಾರ್ಣವಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಬಹಳಷ್ಟು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರಹಾಕಿದ ಗ್ರಾಮಸ್ಥರು, ಶೀಘ್ರವಾಗಿ ಶುದ್ಧ ಕುಡಿಯುವ ನೀರಿನ ಘಟಕ ರಿಪೇರಿ ಮಾಡುವಂತೆ ಒತ್ತಾಯಿಸಿದ್ದಾರೆ.
ಮಂಗನಹಳ್ಳಿಯಲ್ಲಿಯೂ ಇದೆ ಸ್ಥಿತಿ: ಹೂಯಿಲ್ ದೊರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಗನಹಳ್ಳಿಯಲ್ಲಿಯೂ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟುನಿಂತು ಎರಡು ತಿಂಗಳು ಕಳೆದರೂ ಸಹ ಈವರೆಗೆ ರಿಪೇರಿ ಮಾಡಿಸುವ ಕೆಲಸವಾಗಿಲ್ಲ. ಇಲ್ಲಿನ ಗ್ರಾಮಸ್ಥರು ಶಾಗದಡು ಅಥವಾ ಹೂಯಿಲ್ ದೊರೆ ಗ್ರಾಮಗಳಿಗೆ ತೆರಳಿ ಶುದ್ಧ ಕುಡಿಯುವ ನೀರನ್ನು ತರಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕಂಬದಹಳ್ಳಿ ಹಾಗೂ ಮಂಗನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಖಾಸಗಿ ಕಂಪನಿಯ ನಿರ್ವಹಣೆಯ ಹಂತದಲ್ಲಿದ್ದು, ಈವರೆಗೆ ಗ್ರಾಪಂ ಸುಪರ್ದಿಗೆ ನೀಡಿಲ್ಲ. 2 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಿಸುವ ಕೆಲಸ ಮಾಡಿಸಲಾಗುವುದು.
- ಕನಕಪ್ಪ ಹನುಮಪ್ಪ ಮೇಲಸಕ್ರಿ, ಹೂಯಿಲ್ ದೊರೆ ಪಿಡಿಒ
ಕಂಬದಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹಲವು ದಿನಗಳೇ ಕಳೆದಿವೆ. ಏಳೆಂಟು ಕಿ.ಮೀ ದೂರದ ಬೇರೆ ಬೇರೆ ಹಳ್ಳಿಗಳಿಗೆ ಹೋಗಿ ನೀರು ತರುವ ಪರಿಸ್ಥಿತಿ ನಿಮಾರ್ಣವಾಗಿದೆ.
- ಯಶೋದಮ್ಮ ಗ್ರಾಮಸ್ಥೆ, ಕಂಬದಹಳ್ಳಿ
ಮಂಗನಹಳ್ಳಿ ಹಾಗೂ ಕಂಬದಹಳ್ಳಿ ಶುದ್ಧ ಕುಡಿಯುವ ನೀರಿನ ಘಟಕಗಳು ಖಾಸಗಿ ಕಂಪನಿಯಿಂದ ನಿಮಾರ್ಣ ಮತ್ತು ನಿರ್ವಹಣೆ ಮಾಡಲಾಗಿದ್ದು, ಸದರಿ ಘಟಕಗಳ ನಿರ್ವಹಣೆಯು ಈ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.
- ಮಂಜು ಪ್ರಸಾದ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್