ತುಮಕೂರಿನ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯ ವಿದ್ಯಾನಿಧಿ ಕಾಲೇಜಿನಲ್ಲಿ ನಿರ್ಮಿಸಿರುವ ವಿಜಿ ಆಡಿಟೋರಿಯಂ ಅನ್ನು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್​ ಲೋಕಾರ್ಪಣೆ ಮಾಡಿದರು. ಕೆ.ಬಿ.ಜಯಣ್ಣ, ಎನ್​.ಬಿ.ಪ್ರದಿಪ್​ ಕುಮಾರ್​, ಓಂಕಾರ್​, ಸಿದ್ದೇಶ್ವರಸ್ವಾಮಿ, ಸುಬ್ರಹ್ಮಣ್ಯ, ಪ್ರೇಮ್​, ಅರುಣಾ ಮತ್ತಿತರರು ಇದ್ದರು.  
ತುಮಕೂರು

ಒಳ್ಳೆಯ ಸ್ಮಾರ್ಟ್ ಫೋನ್​ ಇಟ್ಟುಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್​
  • ಇಡೀ ಜಗತ್ತು ಪರಿಚಯಿಸಲಿರುವ ಮೊಬೈಲ್​
  • ನಿತ್ಯ 5 ಗಂಟೆ ಮೊಬೈಲ್​ ಬಳಸಿ
ತುಮಕೂರು: ವಿದ್ಯಾವಾಹಿನಿ ಶಿಕ್ಷಣ ಸಮೂಹ ಸಂಸ್ಥೆ ವತಿಯಿಂದ ವಿದ್ಯಾನಿಧಿ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಿರುವ "ವಿಜಿ ಆಡಿಟೋರಿಯಂ' ಅನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಯಿತು. ಸಕಾರಾತ್ಮಕ ಮೊಬೈಲ್​ ಬಳಕೆಯಿಂದ ಇಡೀ ಜಗತ್ತು ನಿಮಗೆ ಪರಿಚಯವಾಗಲಿದೆ. ಹೊಸ, ಹೊಸ ಆ್ಯಪ್​ಗಳನ್ನು ಅನ್ವೇಷಿಸುವುದರೊಂದಿಗೆ ಭಾಷಾ, ಜ್ಞಾನಭಂಡಾರ ತೆರೆದುಕೊಳ್ಳಲಿದೆ ಎಂದು ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್​ ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ನೀವು ಏನಾಗಬೇಕೆಂಬುದನ್ನು ಇಂದೇ ನಿರ್ಧರಿಸಿ ಅಚಲ ವಿಶ್ವಾಸದಿಂದ ಗುರಿಯಡೆಗೆ ನಡೆದಲ್ಲಿ ಯಶಸ್ಸು ಕಟ್ಟಿಟ್ಟಬುತ್ತಿ. ಇಂದಿನ ವಿದ್ಯಾರ್ಧಿಗಳೆದುರು ಹೊಸತೊಂದು ಲೋಕವೇ ಸೃಷ್ಟಿಯಾಗಿದೆ. ನೀವು ಬದುಕುತ್ತಿರುವ ಯುಗವೇ ಅದ್ಭುತ, ಸಂಭ್ರಮದಿಂದ ಕೂಡಿರುವಂಥದ್ದು. ಈಜುವುದೊಂದನ್ನು ಹೊರತು ಪಡಿಸಿ ಮತ್ತೆಲ್ಲಾ ಕೌಶಲಗಳನ್ನೂ ಆನ್​ ಲೈನ್​ ಮೂಲಕ ಕಲಿಯಹುದು. ಒಳ್ಳೆಯ ಸ್ಮಾರ್ಟ್ ಫೋನ್​ ಇಟ್ಟುಕೊಳ್ಳಿ. ಸಾಧ್ಯವಾದಷ್ಟು ಭಾಷೆಗಳನ್ನು ಕಲಿತುಕೊಳ್ಳಿ. ಅಭಿವ್ಯಕ್ತಿಯ್ನು ಸುಧಾರಿಸುವ ನಿಟ್ಟಿನಲ್ಲಿ ಕಾಯೋರ್ನ್ಮುಖವಾಗಿ. ಜಗತ್ತು ನಿಮ್ಮನ್ನು ಸ್ವೀಕರಿಸುವ ರೀತಿ ಬೇರೆಯೇ ಆಗುತ್ತದೆ. ಪ್ರತಿನಿತ್ಯ 5 ಗಂಟೆ ನೀವು ಮೊಬೈಲ್​ ನೋಡಿ. ಇಪುಸ್ತಕಗಳನ್ನು ಓದಿ, ಎಐ ಮೂಲಕ ಹೊಸದನ್ನು ಅನ್ವೇಷಿಸುವ ಮೂಲಕ ನಿಮ್ಮನ್ನು ನೀವು ತೆರೆದುಕೊಳ್ಳಿ ಎಂದು ಹೇಳಿದರು.
ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎನ್​.ಬಿ.ಪ್ರದಿಪ್​ ಕುಮಾರ್​ ಮಾತನಾಡಿ, ಶೈಕ್ಷಣಿಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳಿಗೆ ಆಪ್ತವಾಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ವ್ಯವಸ್ಥೆಯ ಆಡಿಟೋರಿಯಂ ರೂಪುಗೊಂಡಿದೆ. ಮುಂದಿನ ದಿನಗಳಲ್ಲಿ ಕೌಶಲಆಧಾರಿತ ಕಲಿಕೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯಲಿದೆ. ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಿಸುವ ಸಾಮರ್ಥ್ಯ ವಿದ್ಯಾರ್ಥಿಗಳಲ್ಲಿ ಹೆಚ್ಚಾಗಬೇಕು. ಅದಕ್ಕೆ ಪೂರಕ ವಾತಾವರಣನ್ನು ಕಲ್ಪಿಸುವುದು ಈ ಆಡಿಟೋರಿಯಂ ನಿರ್ಮಾಣದ ಉದ್ದೇಶ ಎಂದು ತಿಳಿಸಿದರು.
ಸಂಸ್ಥಾಪಕ ಅಧ್ಯಕ್ಷ ಕೆ.ಬಿ.ಜಯಣ್ಣ, ಉದ್ಯಮಿ ಓಂಕಾರ್​, ವಿದ್ಯಾನಿಧಿ ಪ್ರಾಂಶುಪಾಲ ಸಿದ್ದೇಶ್ವರ ಸ್ವಾಮಿ, ಸುಬ್ರಹ್ಮಣ್ಯ, ಪ್ರೇಮ್​, ಅರುಣಾ ಮತ್ತಿತರರು ಉಪಸ್ಥಿತರಿದ್ದರು. ಎಂ.ಎಸ್​.ಹೇಮಲತಾ ಪ್ರಾರ್ಥಿಸಿ, ಅಕ್ಷತಾ ಸ್ವಾಗತಿಸಿದರು. ಡಾ. ಆರತಿ ಪಟ್ರಮೆ ಕಾರ್ಯಕ್ರಮ ನಿರೂಪಿಸಿದರು.