- ಕಂದಾಯ ಸಚಿವ ಡಾ.ಜಿ.ಪರಮೇಶ್ವರ ಭರವಸೆ
- ಭುವನ ಸಾವಿಗೆ ಕಾರಣದ ಬಗ್ಗೆ ತನಿಖೆ
ತುಮಕೂರು: ಎಸ್ಐಆರ್ ಕರ್ತವ್ಯ ನಿಭಾಯಿಸುವ ವೇಳೆ ವಿಎಒ ಭುವನ ರಸ್ತೆ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರು ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಆರಂಭಿಸಿದ್ದ ಆಹೋರಾತ್ರಿ ಪ್ರತಿಭಟನಾ ಸ್ಥಳಕ್ಕೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಭಾನುವಾರ ಭೇಟಿ ನೀಡಿ, ಸಮಸ್ಯೆಯನ್ನು ಆಲಿಸಿದರು.
ಪ್ರತಿಭಟನಾ ನಿರತ ನೌಕರರನ್ನು ಉದ್ದೇಶಿಸಿ ಮಾತನಾಡಿದ ಡಾ. ಜಿ.ಪರಮೇಶ್ವರ, ದುರ್ಘಟನೆ ಯಾಕಾಯ್ತು ಎಂಬುದರ ಬಗ್ಗೆ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ಪೂರ್ವ ನಿಗದಿಯಾಗಿತ್ತು. ಅಲ್ಲದೇ, ಆರೋಗ್ಯ ಸಮಸ್ಯೆಯಿಂದ ನನಗೆ ತಕ್ಷಣಕ್ಕೆ ಬರಲು ಸಾಧ್ಯವಾಗಲಿಲ್ಲ. ಅಪಘಾತವಾದ ಸುದ್ದಿ ತಿಳಿದ ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ, ಸೂಕ್ತ ಚಿಕಿತ್ಸೆ ಒದಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ದುರ್ದೈವದಿಂದ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರಿಸಿದ ಅವರು, ಘಟನೆಯ ಬಗ್ಗೆ ಕಾರಣದ ವರದಿ ತರಿಸಿಕೊಂಡು, ಬೇರೆ ಹಂತದಲ್ಲಿ ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ತುಮಕೂರು ಜಿಲ್ಲೆಯಿಂದ ಕಂದಾಯ ಸಚಿವನಾಗಿರುವುದು ಎರಡನೇ ವ್ಯಕ್ತಿ ನಾನು. ನನಗೂ ಕೂಡ ನಲವತ್ತು ವರ್ಷದ ರಾಜಕಾರಣ, ಎಲ್ಲದರ ಬಗ್ಗೆಯೂ ಜವಾಬ್ದಾರಿ ಇದೆ. ಸಾರ್ವಜನಿಕ ಬದುಕಿನಲ್ಲಿ ಎಲ್ಲರನ್ನು ಸಮಾನತೆಯಿಂದ ಕಾಣಬೇಕು ಎಂಬ ಪರಿಕಲ್ಪನೆಯಲ್ಲಿ ರಾಜಕಾರಣ ಮಾಡಿಕೊಂಡು ಬಂದವನು. ನಿಮ್ಮನ್ನು ನಿರ್ಲಕ್ಷ್ಯ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಆಸ್ಪದ ನೀಡುವುದಿಲ್ಲ ಎಂದು ಹೇಳಿದರು.
ತಹಶೀಲ್ದಾರ್ ಗ್ರೇಡ್ 2 ಬಡ್ತಿ ನೀಡುವ ಪ್ರಕ್ರಿಯೆ ಎಂಟು ವರ್ಷದಿಂದ ನೆನೆಗುದಿಗೆ ಬಿದ್ದಿತ್ತು. ನಾನು ಕಂದಾಯ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ಬಳಿಕ ತಹಶೀಲ್ದಾರ್ ಗ್ರೇಡ್ 2 ಹುದ್ದೆಯಿಂದ ತಹಶೀಲ್ದಾರ್ ಗ್ರೇಡ್ 1 ಹುದ್ದೆಗೆ ಬಡ್ತಿ ನೀಡಲಾಗಿದೆ. ಬಡ್ತಿ ಸರಪಳಿ ಪ್ರಕ್ರಿಯೆ ಆರಂಭಿಸಿದ್ದೇನೆ. ಇನ್ನೊಂದು ವಾರದಲ್ಲಿ ವಿಎ ಹುದ್ದೆಯ ಸಿಬ್ಬಂದಿಗಳಿಗೂ ಆರ್‌ಐ ಹುದ್ದೆಗೆ ಬಡ್ತಿ ನೀಡಲಾಗುತ್ತದೆ. ಈ ಬಗ್ಗೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಕಳೆದ ಒಂದೂವರೆ ವರ್ಷದಿಂದ ಕಂದಾಯ ಇಲಾಖೆಯ ಪತಿ-ಪತ್ನಿ ಪ್ರಕರಣದ ವರ್ಗಾವಣೆ ಆಗಿರಲಿಲ್ಲ. ಅದನ್ನು ಕಾರ್ಯಗತಗೊಳಿಸಿದ್ದೇನೆ. ವೃಂದ ಮತ್ತು ನೇಮಕಾತಿ ಸರಿಯಾಗಿಲ್ಲ. ಅದನ್ನು ತಿದ್ದುಪಡಿಗೊಳಿಸಲು ಸೂಚಿಸಿದ್ದೇನೆ.
ನಾನು ನಿಮ್ಮ ಪರವಾಗಿ ಇರುವವನು. ನಾವು ನೀವೆಲ್ಲ ಸೇರಿದರೆ ಸರ್ಕಾರ. ನೀವೆ ಬೇರೆ, ನಾನೇ ಬೇರೆ ಎಂದರೆ ಏನು ಸಾಧ್ಯವಾಗುವುದಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಬಹಳ ಕಠಿಣವಾದ ಕೆಲಸಗಳನ್ನು ನೀವು ಮಾಡಿದ್ದೀರಿ. ಹಿಂದೆ ಮುಖ್ಯಮಂತ್ರಿಗಳು ಬಂದಾಗ ಶ್ರಮಪಟ್ಟು ಕೆಲಸ ಮಾಡಿದ್ದೀರಿ ಎಂದರು.
ಎಸ್ಐಆರ್ ಎನ್ನುವ ಭೂತ ನಮ್ಮ ಮುಂದೆ ಇಟ್ಟಿದ್ದಾರೆ. ಎರಡು ತಿಂಗಳ ಸಮಯ ನೀಡಬಹುದಿತ್ತು. ಆರಾಮಾಗಿ ಕೆಲಸ ನಡೆಸುತ್ತಿದ್ದರು. ಒಂದು ತಿಂಗಳು ಗಡುವು ನೀಡಿ ಭಯ ನತ್ತು ಒತ್ತಡದ ವಾತಾವರಣದಲ್ಲಿ ಕೆಲಸ ಮಾಡುವಂತಾಗಿದೆ ಎಂದು ಹೇಳಿದರು.
ಮೃತ ಯುವತಿಗೆ ಒತ್ತಡವಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಯಾವ ಹಂತದಲ್ಲಿ ಒತ್ತಡವಿತ್ತು ಎಂಬುದನ್ನು ಪರಿಶೀಲನೆ ನಡೆಸಲಾಗುವುದು. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಲು, ಸದಾ ನಿಮ್ಮ ಜೊತೆ ಇರುತ್ತೇನೆ ಎಂದು ಹೇಳಿದರು.
ಮೃತರ ಕುಟುಂಬಸ್ಥರಿಗೆ 15 ದಿನದೊಳಗೆ ವಿಮೆ ಹಣ ಬರಲಿದೆ. ಚುನಾವಾಣೆ ಆಯೋಗದಿಂದ 30 ಲಕ್ಷ ರೂ. ಪರಿಹಾರ ಒದಗಿಸಲಾಗುವುದು. ಅನುಕಂಪದ ಆದಾರದಲ್ಲಿ ಉದ್ಯೋಗ ಕಲ್ಪಿಸುವುದು ಸೇರಿದಂತೆ ಕುಟುಂಬಸ್ಥರಿಗೆ ಬೇರೆಬೇರೆ ರೀತಿಯಲ್ಲಿ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಕಂದಾಯ ಸಚಿವರಾಗಿದ್ದಾಗ ಈ ರೀತಿ ಆಗಿದೆ ಎಂದರೆ ನನಗೂ ಬೇಸರ ಆಯಿತು. ನಿನ್ನೆಯೇ ಬರಬೇಕಿತ್ತು ಆರೋಗ್ಯ ಸಮಸ್ಯೆಯಿಂದ ಸಾಧ್ಯವಾಗಲಿಲ್ಲ. ಈ ದುರ್ಘಟನೆಯ ವಿಚಾರದಲ್ಲಿ, ಬೇರೆ ಬೇರೆಯವರು ಬಂದು, ರಾಜಕೀಯವಾಗಿ ಮಾತನಾಡಿದ್ದಾರೆ. ಇದು ನನಗೆ ಬೇಸರವಾಗಿದೆ ಎಂದರು.
ಸದಾ ನಿಮ್ಮ ಜೊತೆಗಿರುತ್ತೇನೆ. ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ಯಾವ ವಿಷಯಕ್ಕಾದರೂ ನನ್ನನ್ನು ಮುಕ್ತವಾಗಿ ಭೇಟಿ ಮಾಡಬಹುದು. ನಿಮಗೆ ಸಮಯ ನೀಡುತ್ತೇನೆ, ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಣ. ನೀವು ಸಮಸ್ಯೆ ಇಟ್ಟುಕೊಂಡು ಕೆಲಸ ಮಾಡಲು ಆಗುವುದಿಲ್ಲ. ಸಮಸ್ಯೆ ಬಗೆಹರಿಸಲಾಗುವುದು. ಶಾಂತಿಯಿಂದ, ನೆಮ್ಮದಿಯಿಂದ ಕೆಲಸ ಮಾಡುವಂತಹ ವಾತಾವರಣ ನಿರ್ಮಿಸೋಣ ಎಂದು ಹೇಳಿದರು.