ಜಿಲ್ಲಾಧಿಕಾರಿ ವಿರುದ್ಧ ತುಮಕೂರಿನಲ್ಲಿ ಕಂದಾಯ ಇಲಾಖೆ ನೌಕರರು ಪ್ರತಿಭಟಿಸಿದರು.
- ರಾತ್ರಿ ಮೀಟಿಂಗ್ ಮಾಡುವ ಶುಭಕಲ್ಯಾಣ್ ಸತ್ತಾಗ ಬರಲಿಲ್ಲ
- ವಿಎಒ ಭುವನ ಸಾವಿಗೆ ಆಕ್ರೋಶ
- ಸಾಮೂಹಿಕ ರಾಜೀನಾಮೆ ಬೆದರಿಕೆ
ತುಮಕೂರು: ಎಸ್ಐಆರ್ ಪ್ರಕ್ರಿಯೆ ಕಾರ್ಯಕ್ಕೆ ತೆರಳುವ ವೇಳೆ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ಲೆಕ್ಕ ಆಡಳಿತಾಧಿಕಾರಿ (ವಿಎಒ) ಶನಿವಾರ ಸಂಜೆ ಕೊನೆಯುಸಿರೆಳದಿದ್ದು ಈ ಘಟನೆಗೆ ನೇರ ಹೊಣೆಯಾಗಿರುವ ಜಿಲ್ಲಾಧಿಕಾರಿ ಶುಭಕಲ್ಯಾಣ್ರನ್ನು ವರ್ಗಾವಣೆ ಮಾಡುವಂತೆ ಕಂದಾಯ ಇಲಾಖೆ ಸಿಬ್ಬಂದಿ ರಾತ್ರಿ 9 ಗಂಟೆವರೆಗೆ ಪಟ್ಟುಹಿಡಿದು ಕುಳಿತಿದ್ದರು.
ತಾಲೂಕಿನ ಗೂಳೂರು ಸಮೀಪದ ಬೇವಿನಮರದಮ್ಮ ಗುಡಿ ಸಮೀಪ ದ್ವಿಚಕ್ರವಾಹನದಲ್ಲಿ ಬೆಳಗ್ಗೆ 8 ಗಂಟೆಗೆ ಅವಸರದಲ್ಲಿ ಎಸ್ಐಆರ್ ಕಾರ್ಯಕ್ಕೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದ್ದು ತೀವ್ರವಾಗಿ ಗಾಯಗೊಂಡಿದ್ದ ಭುವನ (24) ಶನಿವಾರ ಸಂಜೆ ಸಾವನ್ನಪ್ಪಿದರು. ಒತ್ತಡದ ಕಾರಣದಿಂದ ಭುವನ ಸಾವನ್ನಪ್ಪಿದ್ದು ಈ ಸಾವಿನ ಹೊಣೆಯನ್ನು ಜಿಲ್ಲಾಡಳಿತ ಹೊರಬೇಕು ಎಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಂದಾಯ ಇಲಾಖೆ ನೌಕರರು ಪ್ರತಿಭಟಿಸಿದರು. ಪ್ರತಿಭಟನಾ ಸ್ಥಳಕ್ಕೆ ಡಿಸಿ ಶುಭಕಲ್ಯಾಣ್ ಬಾರದೇ ಇದ್ದದ್ದಕ್ಕೆ ಆಕ್ರೋಶಗೊಂಡ ನೌಕರರು ಡಿಸಿ ವರ್ಗಾವಣೆಗೆ ಪಟ್ಟು ಹಿಡಿದರಲ್ಲದೆ, ಅವರ ನಿವಾಸದ ಮುಂದೆ ವಿಷ ಕುಡಿಯುವುದಾಗಿ ಬೆದರಿಕೆ ಹಾಕಿದರು.
ಸಿಎಂ, ಎಚ್ಡಿಕೆಗೆ ಸಿಬಿಎಸ್ ಕರೆ
ಪ್ರತಿಭಟನೆ ತಾರಕಕ್ಕೇರಿದ ಹಿನ್ನೆಲೆ ಸಿಎಂ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮೂಲಕ ಪ್ರತಿಭಟನಾನಿರತ ನೌಕರರನ್ನು ಸಮಾಧನಗೊಳಿಸಿದರಲ್ಲದೆ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆ ಕೊಟ್ಟರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ಬಾಬು ಪ್ರತಿಭಟನಾನಿರತ ಭೇಟಿ ನೀಡಿ ಕಂದಾಯ ಇಲಾಖೆ ನೌಕರರಿಗೆ ಬೆಂಬಲ ನೀಡಿದರು. ಈ ವೇಳೆ ರಾಜ್ಯ ಮುಖ್ಯಕಾರ್ಯದರ್ಶಿಗೆ ಕರೆ ಮಾಡಿ ಮಾಹಿತಿ ಹಂಚಿಕೊಂಡರು. ಅಲ್ಲದೆ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಲ್ಲದೆ, ಪ್ರತಿಭಟನಾನಿರತ ವಿಎಒ ಒಬ್ಬರಿಗೆ ಮೊಬೈಲ್ ಕೊಟ್ಟು ಮಾತನಾಡಲು ಹೇಳಿದರು. ಈ ವೇಳೆ ಯಾವುದೇ ಅಚಾತುರ್ಯಕ್ಕೆ ಅವಕಾಶ ಕೊಡದಂತೆ ಎಚ್ಡಿಕೆ ಮನವಿ ಮಾಡಿಕೊಂಡರು.
ತೊಲಗಲಿ, ತೊಲಗಲಿ ಡಿಸಿ ತೊಲಗಲಿ
ಬೆಳಗಿನಿಂದ ಡಿಸಿ ಪ್ರತಿಭಟನಾಸ್ಥಳಕ್ಕೆ ಬಂದಿಲ್ಲ. ಅವರು ಬಾರದೇ ಇದ್ದರೆ ಡಿಸಿ ನಿವಾಸಕ್ಕೆ ಮುತ್ತಿಗೆ ಹಾಕುತ್ತೀವಿ. ನಮ್ಮ ಬಳಿ ಬರಲು ಪೋಲೀಸ್ ರಕ್ಷಣೆ ಬೇಕೇ. ಅವರ ಮನೆ ಮುಂದೆಯೇ ವಿಷ ಕುಡಿಯುತ್ತೀವಿ. ಸಾಮೂಹಿಕ ರಾಜೀನಾಮೆ ನೀಡುತ್ತೀವಿ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು. ನಿನ್ನೆ ರಾತ್ರಿವರೆಗೆ ಮೀಟಿಂಗ್ ಮಾಡಿದ ಡಿಸಿ, ಸಹದ್ಯೋಗಿ ಸತ್ತಾಗ ಬರಲಿಲ್ಲ. ಯಾವ ಮುಖ ಇಟ್ಕೊಂಡು ಡಿಸಿ ಆಗಿ ಮುಂದುವರೆಯುತ್ತೀರಾ. ಅವರೊಬ್ಬರೆ ಆಡಳಿತ ಮಾಡಲಿ ಎಂದು ಘೋಷಣೆಗಳನ್ನು ಕೂಗಿದರು.