- ಡಿಸಿ ವಿರುದ್ಧ ಸಿಡಿದೆದ್ದ ಕಂದಾಯ ಇಲಾಖೆ ನೌಕರರು
- ಎಸ್ಐಆರ್ ಪ್ರಕ್ರಿಯೆಗೆ ತೆರಳುವ ವೇಳೆ ಲಾರಿ ಡಿಕ್ಕಿ
- ಜಿಲ್ಲಾಧಿಕಾರಿ ವರ್ಗಾವಣೆಗೆ ಪ್ರತಿಭಟನಾನಿರತರ ಪಟ್ಟು
ತುಮಕೂರು: ಎಸ್ಐಆರ್ ಪ್ರಕ್ರಿಯೆ ಕಾರ್ಯಕ್ಕೆ ತೆರಳುವ ವೇಳೆ ಲಾರಿ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಗ್ರಾಮ ಆಡಳಿತ ಅಧಿಕಾರಿ (ವಿಎಒ) ಶನಿವಾರ ಸಂಜೆ ಕೊನೆಯುಸಿರೆಳದಿದ್ದು ಜಿಲ್ಲಾಡಳಿತದ ಒತ್ತಡವೇ ಈ ಸಾವಿಗೆ ಕಾರಣವೆಂದು ಆರೋಪಿಸಿರುವ ಕಂದಾಯ ಇಲಾಖೆ ನೌಕರರ ಆಕ್ರೋಶ ಭುಗಿಲೆದಿದ್ದೆ. ಕಂದಾಯ ಸಚಿವರು ಆದ ಡಿಸಿಎಂ ಡಾ.ಜಿ.ಪರಮೇಶ್ವರ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲವೆಂದು ಪ್ರತಿಭಟನಾನಿರತ ನೌಕರರು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪಟ್ಟು ಹಿಡಿದು ಕುಳಿತಿದ್ದಾರೆ.
ತಾಲೂಕಿನ ಗೂಳೂರು ಸಮೀಪದ ಬೇವಿನಮರದಮ್ಮ ಗುಡಿ ಸಮೀಪ ದ್ವಿಚಕ್ರವಾಹನದಲ್ಲಿ ಬೆಳಗ್ಗೆ 8 ಗಂಟೆಗೆ ಅವಸರದಲ್ಲಿ ಎಸ್ಐಆರ್ ಕಾರ್ಯಕ್ಕೆ ತೆರಳುತ್ತಿದ್ದಾಗ ಲಾರಿ ಡಿಕ್ಕಿ ಹೊಡೆದಿದ್ದು ತೀವ್ರವಾಗಿ ಗಾಯಗೊಂಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಭುವನ (24)ರನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ಸಾವನ್ನಪ್ಪಿದರು. ತಾಲೂಕು ಹೊಳಕಲ್ಲು ಗ್ರಾಪಂ ವಿಎಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭುವನ ಅವರು ನೆಲಮಂಗಲ ತಾಲೂಕು ಟಿ.ಬೇಗೂರು ಸಮೀಪದ ವರದನಾಯಕಹಳ್ಳಿಯ ರಮೇಶ್, ಸರೋಜಮ್ಮ ದಂಪತಿ ಪುತ್ರಿ.ಭುವನ ಅವಿವಾಹಿತೆ.
ಡಿಸಿ ಕಾರಿಗೆ ಮುತ್ತಿಗೆ: ತಲೆಗೆ ಗಂಭೀರ ಪೆಟ್ಟುಬಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದ ಭುವನ ಆಸ್ಪತ್ರೆಯ ತೀವ್ರ ನಿಗಾ ಟಕದಲ್ಲಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಿದ್ದಗಂಗಾ ಆಸ್ಪತ್ರೆ ಬಳಿ ಜಮಾವಣೆಗೊಂಡ ಕಂದಾಯ ಇಲಾಖೆ ನೌಕರರು, ಕಾರ್ಯದ ಒತ್ತಡವೇ ಈ ಸಾವಿಗೆ ಕಾರಣ. ಈ ಸಾವು ನ್ಯಾಯವೇ? ಜಿಲ್ಲಾಧಿಕಾರಿಗಳೇ ಇದಕ್ಕೆ ನೇರ ಹೊಣೆ ಎಂದು ಆಕ್ರೋಶ ಹೊರಹಾಕಿದರಲ್ಲದೆ, ಡಿಸಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಈ ವೇಳೆ ಶುಭಕಲ್ಯಾಣ್ ಸಾವರಿಸಿಕೊಂಡು ಆಸ್ಪತ್ರೆ ಒಳ ಪ್ರವೇಶಿಸಿದರು.
ಆಸ್ಪತ್ರೆ ಮುಂಭಾಗವೇ ಜಮಾಯಿಸಿದ ಕಂದಾಯ ಇಲಾಖೆ ನೌಕರರು ಪ್ರತಿಭಟನೆಗೆ ಮುಂದಾದರು. ನಂತರ ಪ್ರತಿಭಟನೆಯನ್ನು ಜಿಲ್ಲಾಧಿಕಾರಿ ಕಚೇರಿ ಬಳಿಗೆ ಸ್ಥಳಾಂತರಿಸಲಾಯಿತು.
ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ರಾಜ್ಯ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ, ಇಂಜಿನಿಯರ್ಸ್ ಸಂಘದ ಅಧ್ಯಕ್ಷ ರಾಧಾಕೃಷ್ಣ, ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಯೋಗೀಶ್ ನಾಯಕ್, ಜಿಲ್ಲಾಧ್ಯಕ್ಷ ದೇವರಾಜು ಸೇರಿದಂತೆ ಜಿಲ್ಲೆಯ ಎಲ್ಲಾ ವಿಎಒಗಳು, ಕಂದಾಯ ಇಲಾಖೆ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಂಡಿದ್ದರು.
ಬಿಎಲ್ಒ ಸೂಪರ್ ವೈಸರ್ ಆಗಿರುವ ಭುವನ ಎಸ್ಐಆರ್ ಪ್ರಕ್ರಿಯೆಗೆ ತೆರಳುವಾಗ ಬೆಳಗ್ಗೆ ಈ ಟನೆ ನಡೆದಿದೆ. ಆ ಜಾಗ ಬ್ಲಾಕ್ ಸ್ಪಾಟ್ ಎಂದು ಹೇಳುತ್ತಿದ್ದು ಈ ಸಾವಿಗೆ ಯಾರನ್ನು ಹೊಣೆ ಮಾಡಬೇಕು ಅನ್ನುವುದು ಗೊತ್ತಿಲ್ಲ. ಪೋಲೀಸರೇ ಹೇಳಬೇಕು. ಸಾವು ಮತ್ತು ಹುಟ್ಟು ನಮ್ಮ ಕೈಯಲ್ಲಿ ಇಲ್ಲ. ಶುಕ್ರವಾರ ರಾತ್ರಿ 7ರವರೆಗೆ ಸಭೆ ನಡೆಸಿದ್ದು ನಮ್ಮ ಇಲಾಖೆ ಅಧಿಕಾರಿಗಳು 24/7 ಕೆಲಸ ಮಾಡುತ್ತೇವೆ. ನಮಗೂ ಕುಟುಂಬ ಇದೆ. ಕುಟುಂಬಸ್ಥರ ನೋವು ಎನೂ ಎಂಬುದು ನನಗೂ ಗೊತ್ತಿದೆ.
ಮುಗಿಲುಮುಟ್ಟಿದ ಆಕ್ರಂದನ, ಆಕ್ರೋಶ
ಅಪಘಾತ ಸುದ್ದಿ ತಿಳಿದು ಭುವನ ಪೋಷಕರು ಆಸ್ಪತ್ರೆಗೆ ದೌಡಾಯಿಸಿದರು. ಈ ವೇಳೆ ಜಿಲ್ಲಾಧಿಕಾರಿ ಶುಭಕಲ್ಯಾಣ್ ಬರುತ್ತಿದ್ದಂತೆ ದು:ಖದ ಮಡುವಿನಲ್ಲಿದ್ದ ಕುಟುಂಬಸ್ಥರ ಆಕ್ರೋಶ ಒಮ್ಮೆಲೇ ಸ್ಫೋಟಗೊಂಡಿತು. ರಾತ್ರಿ 10ಗಂಟೆವರೆಗೆ ಮೀಟಿಂಗ್ ಮಾಡುತ್ತೀರಾ, ಬೆಳಗ್ಗೆ 6 ಗಂಟೆಗೆ ಮತ್ತೆ ಕೆಲಸಕ್ಕೆ ಕರೀತೀರಾ. ನಿಮಗೆ ರ್ಯಾಂಕಿಂಗ್ ಬೇಕು, ಪ್ರೊಮೋಷನ್ ಬೇಕು. ಅದಕ್ಕೆ ನಮ್ಮ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತೀರಾ ಎಂದು ತರಾಟೆಗೆ ತೆಗೆದುಕೊಂಡರು.
ವಿಎಒ ಭುವನ ಪರಿಸ್ಥಿತಿಗೆ ಜಿಲ್ಲಾಧಿಕಾರಿಗಳೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ ಕಂದಾಯ ಇಲಾಖೆ ಸಿಬ್ಬಂದಿ, ತಾವು ಪ್ರಶಸ್ತಿ ಪಡೆಯಲು ನಮ್ಮಗಳ ಜೀವ ಹಿಂಡುತ್ತಾರೆ. ರಾತ್ರಿ 10 ಗಂಟೆವರೆಗೆ ಕೆಲಸ ಮಾಡಿಸಿಕೊಳ್ಳುತ್ತೀರಾ ಇದರಿಂದ ಸಂಸಾರದಲ್ಲಿ ಬಿರುಕು ಮೂಡಲು ಸಹ ಕಾರಣವಾಗಿದೆ ಎನ್ನುವಾಗ ಒತ್ತರಿಸಿಬರುತ್ತಿದ್ದ ಅಳುವನ್ನು ಮಹಿಳಾ ಸಿಬ್ಬಂದಿ ನುಂಗಿಕೊಳ್ಳುತ್ತಿದ್ದರು. ನಿತ್ಯ ಗಂಡಂದಿರಿಂದ ಬೈಗುಳ ಕೇಳಬೇಕಿದೆ. ಎಷ್ಟು ಗಂಟೆ ಬೇಕಾದರು ಕೆಲಸ ಮಾಡುತ್ತೇವೆ. ಒತ್ತಡ ಹೇರಬೇಡಿ. ನಿಗದಿತ ಸಮಯ ವಿಸ್ತರಣೆ ಮಾಡಿ ಎಂದು ಪ್ರತಿಭಟನೆ ವೇಳೆ ಸಿಬ್ಬಂದಿ ಘೋಷಣೆಗಳನ್ನು ಕೂಗಿದರು.
ನಿಮ್ಮಗಳ ವೈಯಕ್ತಿಕ ಪ್ರತಿಷ್ಠೆಗಾಗಿ ನಮ್ಮ ನೌಕರರನ್ನು ಬಲಿಪಶು ಮಾಡುತ್ತೀರಾ? ಜಿಲ್ಲಾಧಿಕಾರಿಗಳಿಗೆ ಕಾರು, ಬಂಗಲೆ ಎಲ್ಲವೂ ಇದೆ. ಆದರೆ, ನಮ್ಮ ಬಡ ನೌಕರರಿಗೆ ಏನು ಸವಲತ್ತು ಇದೆ. ಒತ್ತಡದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಮುಖ್ಯಕಾರ್ಯದರ್ಶಿ ಬಳಿ ಮಾತನಾಡಿ ರಾಜ್ಯಮಟ್ಟದಲ್ಲಿ ಹೋರಾಟ ಮಾಡುತ್ತೇವೆ.
ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ (ಪ್ರತಿಭಟನಾನಿರತರನ್ನು ಉದ್ದೇಶಿಸಿ ದೂರವಾಣಿಯಲ್ಲಿ ಭಾಷಣ)