Most officials absent from Disha meeting
- ಅಧಿಕಾರಿಗಳ ಅಸಹಕಾರಕ್ಕೆ ವಿ.ಸೋಮಣ್ಣ ಗರಂ
- ದಿಶಾ ಸಭೆಗೆ ಬಹುತೇಕ ಅಧಿಕಾರಿಗಳು ಗೈರು
- ಮೇ.29ರಂದು ಮತ್ತೊಂದು ಸಭೆಗೆ ನಿರ್ಧಾರ
ತುಮಕೂರು: ಕೇಂದ್ರ ಸಚಿವ ವಿ.ಸೋಮಣ್ಣ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ "ದಿಶಾ' ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಂದಾಯ ಸೇರಿದಂತೆ ಬಹುತೇಕ ಇಲಾಖೆಗಳು ಅಧಿಕಾರಿಗಳು ಗೈರಾಗಿದ್ದು ಸಚಿವರ ಆಕ್ರೋಶಕ್ಕೆ ಕಾರಣವಾಯಿತು.
ಕಂದಾಯ ಇಲಾಖೆಯಿಂದ ಜಿಲ್ಲಾಧಿಕಾರಿ ಶುಭಕಲ್ಯಾಣ್ ಕೆಲಹೊತ್ತು ಮಾತ್ರ ಇದ್ದು ನಂತರ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ನೆಪ ಹೇಳಿಕೊಂಡು ಎದ್ದು ಹೋದರು. ಸಭೆಯಲ್ಲಿ ಯಾವ ತಾಲೂಕಿನ ತಹಸೀಲ್ದಾರ್ಗಳು ಕೂಡ ಭಾಗವಹಿಸಿರಲಿಲ್ಲ. ಬಿಸಿಎಂ ಇಲಾಖೆ ಅಧಿಕಾರಿ ಎದ್ದು ಹೊರಹೋದವರು ಒಳಗೆ ಬರಲೇ ಇಲ್ಲ... ಹೀಗೆ ಬಹುತೇಕ ಇಲಾಖೆಗಳು ಅಧಿಕಾರಿಗಳು ಕೇಂದ್ರ ಸಚಿವರ ಸಭೆಯನ್ನು ಉದಾಸೀನ ಮಾಡಿದ್ದು ಅಚ್ಚರಿ ಮೂಡಿಸಿತು.
ಅಧಿಕಾರಿಗಳು ಇಲ್ಲದಿರುವ ಬಗ್ಗೆ ಪ್ರಶ್ನಿಸದರೆ ಸಚಿವರ ಸಭೆಗೆ ಹೋಗಿದ್ದಾರೆ ಸರ್ ಎಂದು ಸಭೆಗೆ ಕಡತಗಳೊಂದಿಗೆ ಹಾಜರಾಗಿದ್ದ ಆಯಾ ಇಲಾಖೆ ಸಿಬ್ಬಂದಿ ಉತ್ತರಕ್ಕೆ ಗರಂ ಆದ ವಿ.ಸೋಮಣ್ಣ, ಏಕೆ ನಾನು ಮಂತ್ರಿಯಲ್ಲವೇ? ಅಧಿಕಾರಿಗಳೇ ದಿಶಾ ಸಭೆಗೆ ತಪ್ಪಿಸಿಕೊಳ್ಳುವುದು ಮೂರ್ಖತನದ ಪರಮಾವಧಿಯಷ್ಟೇ, ಯಾವ ಇಲಾಖೆ ಅಧಿಕಾರಿಗಳು ಗೈರಾಗಿದ್ದಾರೆ ನನಗೆ ಪಟ್ಟಿಕೊಡಿ, ಸಭೆಗೆ ಗೈರಾಗಿರುವ ಮಧುಗಿರಿ ಹಾಗೂ ತುಮಕೂರು ತಾಪಂ ಇಒಗಳಿಗೆ ನೋಟಿಸ್ ನೀಡಲು ಎಂದು ಜಿಪಂ ಸಿಇಒ ಬಿ.ವಿ.ಅಶ್ವಿಜಾಗೆ ಸೂಚಿಸಿದರು.
ನಾನೂ ಅಧಿಕಾರಕ್ಕೆ ಬಂದು 49ವರ್ಷ ಪೂರೈಸಿದ್ದೇನೆ ನನಗೂ ಅನುಭವವಿದೆ, ಅಧಿಕಾರಿಗಳು ಅಸಹಕಾರ ತೋರಿಸಿದರೆ ಏನು ಮಾಡಬೇಕು ಎಂಬುದು ಅರಿವಿದೆ ಎಂದು ಖಡಕ್ ಎಚ್ಚರಿಕೆ ಕೂಡ ನೀಡಿದರು. ಬಹುತೇಕ ಇಲಾಖೆ ಅಧಿಕಾರಿಗಳು ಭಾಗವಹಿಸದ ಕಾರಣದಿಂದ ಮೇ.29ರಂದು ಆಯ್ದ ಇಲಾಖೆಗಳ ಸಭೆಯನ್ನು ನಡೆಸಲು ತಿರ್ಮಾನಿಸಿದರು.
ಕುಡಿಯುವ ನೀರಿಗೆ ಕೇವಲ 5ಕೋಟಿ ರೂ: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೀವ್ರ ಅಭಾವ ಸೃಷ್ಠಿಯಾಗಿದ್ದು ತುರ್ತು ನಿರ್ವಹಣೆಗೆ ರಾಜ್ಯ ಸರ್ಕಾರದಿಂದ ಕೇವಲ 5ಕೊಟಿ ರೂ. ಮಾತ್ರ ನೀಡಲಾಗಿದೆ ಎಂದು ಶಾಸಕ ಬಿ.ಸುರೇಶ್ಗೌಡ ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು ತಲಾ 40 ಲಕ್ಷ ರೂ. ಮಾತ್ರ ಹಂಚಿಕೆಯಾಗಲಿದೆ ಎಂದರು.
ಸರ್ಕಾರ ನೀಡಿರುವ 40 ಲಕ್ಷ ರೂ. ಅನುದಾನದಲ್ಲಿ ಎಷ್ಟು ಕೊಳವೆಬಾವಿ ಕೊರೆಸಲು ಸಾಧ್ಯ ಎಂದು ಸುರೇಶ್ಗೌಡ ಪ್ರಶ್ನಿಸಿದರು, ಜಿಲ್ಲಾಧಿಕಾರಿ ಶುಭಕಲ್ಯಾಣ್ ಉತ್ತರಿಸಿ, ಟಾಸ್ಕ್ಪೋರ್ಸ್ ಮೀಟಿಂಗ್ನಲ್ಲಿ ತಕ್ಷಣಕ್ಕೆ ಕೊಳವೆಬಾವಿ ಕೊರೆಸುವುದು ಹಾಗೂ ವಿದ್ಯುದಿಕರಣಕ್ಕೆ ಹಣ ಬಳಸಿಕೊಳ್ಳಲಾಗುವುದು ಹಾಗೂ ಅಗತ್ಯಬಿದ್ದರೆ ಮತ್ತಷ್ಟು ಅನುದಾನ ಸರ್ಕಾರ ಒದಗಿಸಲಿದೆ ಎಂದರು.
ಜಿಲ್ಲೆಯಲ್ಲಿ 34 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿದ್ದು 14 ಮಾತ್ರ ಕಾರ್ಯನಿರ್ವಹಿಸುತ್ತಿವೆ, 20 ಯೋಜನೆಗಳು ನೆನಗುದಿಗೆ ಬಿದ್ದಿವೆ. ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯಿಂದ ಸರ್ಕಾರದ ಮಹತ್ವಾಕಾಂ ಯೋಜನೆ ಪೋಲಾಗಿದೆ ಎಂದು ಸುರೇಶ್ಗೌಡ ದೂರಿದರು. ನಮ್ಮ ತಾಲೂಕಿನ ಎಲ್ಲಾ ಕೆರೆಗಳಲ್ಲಿ ನೀಡಿದೆ ಆದರೆ ಎಂವಿಎಸ್ ಕೆಲಸ ಮಾಡುತ್ತಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ದೂರಿದರು.
ಕುಡಿಯುವ ನೀರಿನ ಎಲ್ಲಾ ಯೋಜನೆಗಳ ಅನುಷ್ಠಾನ ಸಂಬಂಧಿಸಿದಂತೆ ಸಮಗ್ರ ವರದಿ ತಯಾರಿಸಿ ಮೇ.29ರಂದು ಸಭೆಯಲ್ಲಿ ನೀಡಬೇಕು, ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇಲೆ ಬಗೆಹರಿಸಬೇಕು, ಕೇಂದ್ರದಿಂದ ಅನುದಾನದ ಅಗತ್ಯವಿದ್ದರೆ ನಾನು ತರುತ್ತೇನೆ ಎಂದು ಸೋಮಣ್ಣ ಭರವಸೆ ನೀಡಿದರು.
ಮನರೇಗಾ ಯೋಜನೆಗೆ ಪರ್ಯಾಯವಾಗಿ ಜಾರಿಗೆ ತಂದಿರುವ ವಿಬಿ ರಾಮ್ ಜಿ ಯೋಜನೆ ಜುಲೈ 1ರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಈ ಯೋಜನೆ ವ್ಯಾಪ್ತಿಗೆ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗಲಿವೆ. ಅಲ್ಲದೆ, ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಈ ಯೋಜನೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಅವಕಾಶವಿದೆ ಎಂದರು.
ಕೇಂದ್ರ ಪುರಸ್ಕತ ಯೋಜನೆಗಳಾದ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಕಾಮಗಾರಿಗಳು, ಕೃಷಿ ವಿಮಾ ಯೋಜನೆಗಳು, ತೋಟಗಾರಿಕೆ ಯೋಜನೆಗಳು ಸೇರಿದಂತೆ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ವಿ.ಸೋಮಣ್ಣ ಸೂಚಿಸಿದರು.
ಸಭೆಯಲ್ಲಿ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಸಿಇಒ ಬಿ.ವಿ.ಅಶ್ವಿಜಾ, ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ.ಅಶೋಕ್ ಮತ್ತಿತರರು ಇದ್ದರು.
ಗಣಿ ಹಣವನ್ನು ಇಡೀ ಜಿಲ್ಲೆಗೆ ಬಳಸಬೇಕು!
ಗಣಿಬಾಧಿತ ಪ್ರದೇಶಗಳ ಪುನಶ್ವೇತನ ಕಾರ್ಯಕ್ರಮಗಳಿಗೆ ಮೀಸಲಿರುವ ಹಣವನ್ನು ಇಡೀ ಜಿಲ್ಲೆಗೆ ವಿಸ್ತರಿಸಬೇಕು ಎಂದು ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಸೂಚಿಸಿದರು. ಚಿಕ್ಕನಾಯಕನಹಳ್ಳಿ, ಗುಬ್ಬಿ ಹಾಗೂ ತಿಪಟೂರು ತಾಲೂಕುಗಳಿಗೆ ಮಾತ್ರ ಹಣ ಬಳಸಲಾಗುತ್ತಿದೆ. ಆದರೆ, ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯನ್ನೇ ಆದ್ಯತಾ ವಲಯವಾಗಿ ಪರಿಗಣಿಸಬೇಕು ಎಂದರು.
ಈ ಮೂರು ತಾಲೂಕುಗಳಿಗೆ ಮಾತ್ರ ಬಳಸಬೇಕು ಎಂದು ಚೆನ್ನಾಗಿರುವ ರಸ್ತೆಗಳನ್ನೇ ಅಗೆದು ಹೊಸ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ, ಇಡೀ ವ್ಯವಸ್ಥೆಯನ್ನೇ ಅಧ್ವಾನ ಮಾಡಲಾಗಿದೆ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸಚಿವರು, ಅಧಿಕಾರಿಗಳು ಯಾವುದೊ ಭೂತವನ್ನು ತೋರಿಸಿ ಮೂರು ತಾಲೂಕಿಗೆ ಮೀಸಲಿಟ್ಟಿದ್ದಾರೆ, ಇಂತಹ ಭೂತಗಳನ್ನು ನಾನು ದೆಹಲಿಯಲ್ಲಿ ನೋಡಿಬಿಟ್ಟಿದ್ದೇನೆ ಎಂದರು.