Unopposed selection for Bandakunte agricultural title no
ಪಟ್ಟನಾಯಕನಹಳ್ಳಿ: ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ಬಂದಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹನುಮನಹಳ್ಳಿ ತಿಮ್ಮಣ್ಣ, ಉಪಾಧ್ಯಕ್ಷರಾಗಿ ಬಂದಕುಂಟೆ ಗೊಲ್ಲರಹಟ್ಟಿ ಬಿ.ಕೆ.ಮಂಜುನಾಥ್ ಅವಿರೋಧ ಆಯ್ಕೆಯಾದರು.
ಪೂರ್ವ ನಿಗದಿಯಂತೆ ಗುರುವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹನುಮನಹಳ್ಳಿ ತಿಮ್ಮಣ್ಣ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಂದಕುಂಟೆ ಗೊಲ್ಲರಹಟ್ಟಿ ಬಿ.ಕೆ.ಮಂಜುನಾಥ್ ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಶಿರಾ ತಾಲೂಕು ಸಹಕಾರಿ ಅಭಿವೃದ್ಧಿಅಧಿಕಾರಿ ಶ್ರೀನಿವಾಸ್ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷ ಹನುಮನಹಳ್ಳಿ ತಿಮ್ಮಣ್ಣ ಮಾತನಾಡಿ, ರೈತರ ಏಳಿಗೆಗಾಗಿ ನನಗೆ ನೀಡಲಾದ ಈ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಬಿತ್ತನೆಬೀಜ ಹಾಗೂ ರಸಗೊಬ್ಬರವನ್ನು ಬಂದಕುಂಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲೇ ಸುಲಭವಾಗಿ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು.
ಉಪಾಧ್ಯಕ್ಷ ಬಂದಕುಂಟೆ ಗೊಲ್ಲರಹಟ್ಟಿ ಬಿ.ಕೆ.ಮಂಜುನಾಥ್ ಮಾತನಾಡಿ, ರೈತರ ಪರವಾಗಿ ಧ್ವನಿಯಾಗಿರುವೆ. ಯುವಕರನ್ನು ಹೆಚ್ಚು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಹಾಗೂ ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕೃಷಿಯಲ್ಲಿ ಯಶಸ್ಸು ಸಾಧಿಸಿ ಆರ್ಥಿಕವಾಗಿ ಸದೃಢರಾಗಲು ಎಲ್ಲ ರೀತಿಯಲ್ಲೂ ಸಂಘದಿಂದ ನೀಡಲು ನೆರವು ನೀಡಲು ಯತ್ನಿಸಲಾಗುವುದು ಎಂದರು. ಎಲ್ಐಸಿ ನಾಗರಾಜ್, ಶಿರಾ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಚ್. ಎಂ.ಜನಾರ್ದನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ಸಿ.ಗುರುಲಿಂಗಪ್ಪ, ಸಂಘದ ಸಿಬ್ಬಂದಿ ಇದ್ದರು.