ತುಮಕೂರಿನಲ್ಲಿ ನಡೆಯಲಿರುವ 24ನೇ ಯುವ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ ಸಿದ್ಧತೆ ಕುರಿತು ಜಿಲ್ಲಾಧಿಕಾರಿ ಶುಭಕಲ್ಯಾಣ್ ಅವರು ಪ್ಯಾರಾ ಅಥ್ಲೆಟಿಕ್ಸ್ ಛೇರ್ಮನ್ ಸತ್ಯನಾರಾಯಣಗೆ ಮಾಹಿತಿ ನೀಡಿದರು. ಬಿ.ಶುಭ, ರೋಹಿತ್ ಗಂಗಾಧರ್, ಎ.ಎನ್.ಪ್ರಭಾಕರ್ ಮತ್ತಿತರರು ಇದ್ದರು.
- ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕ್ರೀಡಾಕಲರವ
- 20 ವಯೋಮಾನದೊಳಗಿನ ಪುರುಷ , ಮಹಿಳಾ ಕೂಟ
- 3 ದಿನಗಳ ಅಥ್ಲೆಟಿಕ್ಸ್ ಸ್ಪರ್ಧೆ
ತುಮಕೂರು: ಮತ್ತೊಂದು ಕ್ರೀಡಾಹಬ್ಬಕ್ಕೆ ತುಮಕೂರು ಸಜ್ಜಾಗುತ್ತಿದೆ. ಏ.24 ರಿಂದ 26ರವರೆಗೆ 3 ದಿನ 20 ವರ್ಷದೊಳಗಿನ (ಅಂಡರ್ 20 ಜೂನಿಯರ್ ಅಥ್ಲೆಟಿಕ್ ಫೆಡರೇಶಷನ್ ಕಾಂಪಿಟೇಷನ್) ಪುರುಷ ಹಾಗೂ ಮಹಿಳಾ 24ನೇ ಯುವ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ ಆಯೋಜಿಸಲಾಗಿದೆ.
ಕರ್ನಾಟಕ ಕ್ರೀಡಾಕೂಟ ಬಳಿಕ ಇದೀಗ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟ ಆತಿಥ್ಯವನ್ನು ತುಮಕೂರು ವಹಿಸುತ್ತಿದೆ. ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್ ಸ್ಪರ್ಧೆಗಳು ನಡೆಯಲಿದ್ದು ಯುವ ಕ್ರೀಡಾಪಟುಗಳ ಪ್ರತಿಭೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ದೇಶದ ವಿವಿಧ ಭಾಗಗಳ 1500 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕ್ರೀಡಾಕೂಟದ ವಿಜೇತರ ವಿಶ್ವ ಕಿರಿಯರ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯಲಿದ್ದಾರೆ.
ಈ ಕ್ರೀಡಾಕೂಟ ಸಿದ್ಧತೆ ಸಂಬಂಧಿಸಿದಂತೆ ಪ್ಯಾರಾ ಅಥ್ಲೆಟಿಕ್ಸ್ ಛೇರ್ಮನ್ ಸತ್ಯನಾರಾಯಣ ಸೋಮವಅರ ಮಹಾತ್ಮ ಗಾಂಧಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಂಗಣ ಹಾಗೂ ಸಂಬಂಧಿತ ಸೌಲಭ್ಯಗಳನ್ನು ಪರಿಶೀಲಿಸಿದರು. ಕ್ರೀಡಾಪಟುಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳು, ವಸತಿ ವ್ಯವಸ್ಥೆ, ಭದ್ರತೆ ಹಾಗೂ ಸ್ಪರ್ಧೆಗಳ ನಿರ್ವಹಣೆಗೆ ಸಂಬಂಧಿಸಿದ ಕ್ರಮಗಳನ್ನು ಅವಲೋಕಿಸಿ, ಕ್ರೀಡಾಕೂಟವನ್ನು ಯಶಸ್ವಿಯಾಗಿ ನಡೆಸಲು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಪಾಲಿಕೆ ಆಯುಕ್ತೆ ಬಿ.ಶುಭ, ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಹಿತ್ ಗಂಗಾಧರ್, ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ನ ಎ.ಎನ್.ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.