ತುಮಕೂರು-ಯಶವಂತಪುರ ಮೆಮು ರೈಲು ಸಂಚಾರ ಆರಂಭವಾದ 13ನೇ ವರ್ಷಾಚರಣೆಯನ್ನು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ಕೇಕ್ ಕತ್ತರಿಸಿ ಮಾಡಲಾಯಿತು. ಕರಣಂರಮೇಶ್, ಸಿ. ನಾಗರಾಜ್, ಆರ್.ಬಾಲಾಜಿ, ಅಮರೇಂದ್ರ ಪ್ರಸಾದ್, ಅಮಿತ್ ಪ್ರಸಾದ್, ಕೆ.ಆರ್. ಭಾಗ್ಯಲಕ್ಷ್ಮಿ, ಮಾಧವಮೂರ್ತಿ ಗುಡಿಬಂಡೆ, ರವಿಶಂಕರ್ ಮತ್ತತಿರರು ಇದ್ದರು.
- ರೈಲು ಸಂಚಾರ ಆರಂಭಿಸಿ 13ನೇ ವರ್ಷಾಚರಣೆ
- ತುಮಕೂರು-ಯಶವಂತಪುರ ನಡುವೆ
- ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ
ತುಮಕೂರು-ಬೆಂಗಳೂರು ಮೆಮು ರೈಲು ಸಂಚಾರ ಆರಂಭಿಸಿದ 13ನೇ ವರ್ಷಾಚರಣೆಯನ್ನು ತುಮಕೂರು ಜಿಲ್ಲಾ ರೈಲ್ವೆ ಪ್ರಯಾಣಿಕರ ವೇದಿಕೆ ವತಿಯಿಂದ ನಗರದ ರೈಲು ನಿಲ್ದಾಣದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬದ ರೀತಿಯಲ್ಲಿ ಸಂಭ್ರಮಿಸಲಾಯಿತು.
ನಗರದ ರೈಲು ನಿಲ್ದಾಣದಲ್ಲಿ ಸೋಮವಾರ ಮೆಮು ರೈಲನ್ನು ವಿಶೇಷವಾಗಿ ಮಾವಿನ ತೋರಣ, ಬಾಳೆಕಂದು, ಹೂವುಗಳನ್ನು ಕಟ್ಟಿ ಸಿಂಗರಿಸಿದ ವೇದಿಕೆ ಪದಾಧಿಕಾರಿಗಳು, ಪ್ರಯಾಣಿಕರಲ್ಲಿ ಹಬ್ಬದ ಸಂಭ್ರಮ ಕಂಡುಬಂತು. ಈ ವೇಳೆ ರೈಲಿನ ಚಾಲಕರಾದ ಅಮರೇಂದ್ರ ಪ್ರಸಾದ್ ಮತ್ತು ಅಮಿತ್ ಪ್ರಸಾದ್ ಕೈಯಲ್ಲಿ ಕೇಕ್ ಕತ್ತರಿಸಿ ಎಲ್ಲರಿಗೂ ಹಂಚಿ ಖುಷಿಪಟ್ಟರು.
ಈ ವೇಳೆ ಪ್ರಯಾಣಿಕರನ್ನು ಉದ್ದೇಶಿಸಿ ಮಾತನಾಡಿದ ವೇದಿಕೆ ಅಧ್ಯಕ್ಷ ಕರಣಂರಮೇಶ್,
ದಿನ ನಿತ್ಯ ಉದ್ಯೋಗಕ್ಕಾಗಿ ಬೆಂಗಳೂರಿಗೆ ತೆರಳುವ ಸಾವಿರಾರು ಉದ್ಯೋಗಿ ಪ್ರಯಾಣಿಕರ ಪ್ರಯಾಣಕ್ಕೆ ಅನುಕೂಲಕರವಾಗಿರುವ ರೈಲುಗಳು ನಮ್ಮ ಜೀವನಾಡಿಗಳಾಗಿವೆ, ನಮ್ಮ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಉದ್ಯೋಗಿ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಕಚೇರಿ ತಲುಪಲು ರೈಲುಗಳು ಸುಲಭದ ಸಂಚಾರ ವ್ಯವಸ್ಥೆಯಾಗಿವೆ. ಅಲ್ಲದೆ, ಬಡ ಮತ್ತು ಮಧ್ಯಮವರ್ಗದ ಜನಸಾಮಾನ್ಯರ ಸಂಚಾರಕ್ಕೆ ರೈಲುಗಳು ತುಂಬಾ ಸಹಕಾರಿಯಾಗಿವೆ ಎಂದರು.
ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರಾದ ವಿ. ಸೋಮಣ್ಣ ಕೇಂದ್ರದಲ್ಲಿ ರೈಲ್ವೇ ರಾಜ್ಯ ಸಚಿವರಾದ ಬಳಿಕ ಸಾಕಷ್ಟು ರೈಲ್ವೆ ಯೋಜನೆ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ದೊರೆತಿದೆ. ಅದರಲ್ಲೂ ವಿಶೇಷವಾಗಿ ತುಮಕೂರು ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕೆಳಸೇತುವೆ, ಮೇಲ್ಸೇತುವೆಗಳು ನಿಮಾರ್ಣವಾಗುತ್ತಿವೆ. ಇದರಿಂದ ಜನಸಾಮಾನ್ಯರ ಸುಗಮ ಓಡಾಟಕ್ಕೆ ಅನುಕೂಲವಾಗಿವೆ. ತುಮಕೂರು ರೈಲು ನಿಲ್ದಾಣ, ಅತ್ಯಾಧುನಿಕವಾಗಿ ಮರು ನಿಮಾರ್ಣಗೊಳ್ಳುತ್ತಿದೆ. ತುಮಕೂರಿನಿಂದ ಅರಸೀಕೆರೆ ಕಡೆಗೆ ಮತ್ತು ಬೆಂಗಳೂರು ಕಡೆಗೆ ಇನ್ನೂ ಹೆಚ್ಚಿನ ಮೆಮು ರೈಲುಗಳ ಸಂಚಾರದ ಅಗತ್ಯವಿದೆ. ಇದನ್ನು ಸಚಿವರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದು ವೇದಿಕೆ ಕಾರ್ಯದರ್ಶಿ ಸಿ. ನಾಗರಾಜ್ ಹೇಳಿದರು.
ಖಜಾಂಚಿ ಆರ್. ಬಾಲಾಜಿ ಮಾತನಾಡಿ, ನಮ್ಮ ವೇದಿಕೆಯ ಕಾರ್ಯಚಟುವಟಿಕೆಗಳಿಗೆ ತುಮಕೂರು ರೈಲು ನಿಲ್ದಾಣವೇ ಆಧಾರವಾಗಿದೆ. ಇದಕ್ಕೆ ರೈಲ್ವೇ ಹಿರಿಯ ಅಧಿಕಾರಿಗಳು, ಸ್ಥಳಿಯ ಅಧಿಕಾರಿಗಳು ಹಾಗೂ ರಕ್ಷಣಾ ಸಿಬ್ಬಂದಿಯ ಸಹಕಾರ, ಸಹಾಯ ಇದೆ. ವೇದಿಕೆ ಹಾಗೂ ಇಲಾಖೆ ಸಿಬ್ಬಂದಿ ನಡುವೆ ಅವಿನಾಭಾವ ಸಂಬಂಧಕ್ಕೆ ಇದು ಪೂರಕವಾಗಿವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆರ್ಪಿಎಫ್ ಅಧಿಕಾರಿಗಳಾದ ಅಂಬರೀಶ್, ವಿಕ್ರಂ, ರೈಲ್ವೇ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆನಂದ್, ರೋಟರಿ ಅಧ್ಯಕ್ಷೆ ಕೆ.ಆರ್. ಭಾಗ್ಯಲಕ್ಷ್ಮಿ, ವೇದಿಕೆ ಉಪಾಧ್ಯಕ್ಷ ಮಾಧವಮೂರ್ತಿ ಗುಡಿಬಂಡೆ, ಜಂಟಿ ಕಾರ್ಯದರ್ಶಿ ರವಿಶಂಕರ್, ನಿರ್ದೇಶಕರಾದ ಮೋಹನ್ ಕುಮಾರ್, ಚಕ್ರವರ್ತಿ, ರಾಜಶೇಖರ್, ಗುರುಪ್ರಸಾದ್, ದೀಪಕ್, ವೀರಪ್ಪ, ಭರತ್ ಕುಮಾರ್, ಗುರುಪ್ರಸಾದ್, ಅರ್ಷದ್, ನಂದಿನಿ, ಉಮಾಶಂಕರ್ ಮತ್ತಿತರ ಪ್ರಯಾಣಿಕರು ಭಾಗವಹಿಸಿದ್ದರು.