- ಪ್ರಸೂತಿ ರಜೆ ಮೇಲೆ ತೆರಳಿದ್ದ ಅಶ್ವಿಜ
- 2019ರ ಬ್ಯಾಚ್ ಐಎಎಸ್ ಅಧಿಕಾರಿ
- ಜಿಲ್ಲಾಡಳಿತಕ್ಕೆ ಸ್ತ್ರೀ ಶಕ್ತಿ
ತುಮಕೂರು: ಪ್ರಸೂತಿ ರಜೆ ಮೇಲೆ ತೆರಳಿದ್ದ ಐಎಎಸ್ ಅಧಿಕಾರಿ ಬಿ.ವಿ.ಅಶ್ವಿಜ ಅವರನ್ನು ತುಮಕೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರ ಗುರುವಾರ ಆದೇಶಿಸಿದೆ.
ಜುಲೈ 25, 2023 ರಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತರಾಗಿ ನೇಮಕವಾಗಿದ್ದ 2019ನೇ ಬ್ಯಾಚ್ ಐಎಎಸ್ ಅಧಿಕಾರಿ ಬಿ.ವಿ.ಅಶ್ವಿಜ ಕಳೆದ ನವೆಂಬರ್ನಲ್ಲಿ ಪ್ರಸೂತಿ ರಜೆ ಮೇಲೆ ತೆರಳಿದ್ದರು.ಹುದ್ದೆ ನಿರೀೆಯಲ್ಲಿದ್ದ ಅವರನ್ನು ಜಿಪಂ ಸಿಇಒ ಹುದ್ದೆಗೆ ನೇಮಿಸಲಾಗಿದೆ.
ಜ.1 ರಂದು ತುಮಕೂರು ಜಿಪಂ ಸಿಇಒ ಆಗಿದ್ದ ಜಿ.ಪ್ರಭು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ವರ್ಗಾವಣೆಗೊಂಡಿದ್ದರು. ಆ ಬಳಿಕ ಜಿಲ್ಲಾಧಿಕಾರಿ ಶುಭಕಲ್ಯಾಣ್ ಪ್ರಭಾರ ಸಿಇಒ ಆಗಿ ಅಧಿಕಾರವಹಿಸಿಕೊಂಡಿದ್ದರು. 43 ದಿನಗಳ ಬಳಿಕ ಸಿಇಒ ಹುದ್ದೆಗೆ ಅಶ್ವಿಜರನ್ನು ನೇಮಿಸಲಾಗಿದೆ. ಅಶ್ವಿಜ ಪತಿ ಕೆ.ವಿ.ಅಶೋಕ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.
ಜಿಲ್ಲಾಡಳಿತದ ಪ್ರಮುಖ ಹುದ್ದೆಗಳಲ್ಲಿ ಮಹಿಳಾ ಅಧಿಕಾರಿಗಳಿರುವುದು ವಿಶೇಷವೆನಿಸಿದೆ. ಜಿಲ್ಲಾಧಿಕಾರಿ, ಜಿಪಂ ಸಿಇಒ, ಪಾಲಿಕೆ ಆಯುಕ್ತೆ, ತುಮಕೂರು ಉಪವಿಭಾಗಾಧಿಕಾರಿ, ತುಮಕೂರು ತಹಸೀಲ್ದಾರ್, ತೋಟಗಾರಿಕೆ ಉಪನಿರ್ದೇಶಕ ಹುದ್ದೆ ಹೀಗೆ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಇದ್ದಾರೆ.