ತುಮಕೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ "ಪದವಿ ಶಿಕ್ಷಣ ಉದ್ಯೋಗಕ್ಕಷ್ಟೇ ಅಲ್ಲ, ವ್ಯಕ್ತಿತ್ವ ನಿಮಾರ್ಣ' ಕುರಿತ ಕಾರ್ಯಾಗಾರದಲ್ಲಿ ಪ್ರೊ. ಎಚ್.ಎಸ್. ಮೋಹನ್, ಡಾ.ಪಿ.ಸಿ.ಪ್ರದಿಪ್ ಕುಮಾರ್, ಪ್ರೊ. ಶೇಟ್ ಪ್ರಕಾಶ್, ಡಾ.ಕೆ.ಎನ್.ಚೇತನ್ ಪ್ರತಾಪ್, ಪ್ರೊ.ಮಂಗಳಗೌರಿ ಮತ್ತಿತರರು ಇದ್ದರು.
- ಪದವಿ ಶಿಕ್ಷಣ ಉದ್ಯೋಗಕ್ಕಷ್ಟೇ ಅಲ್ಲ, ವ್ಯಕ್ತಿತ್ವ ನಿಮಾರ್ಣ ಕಾರ್ಯಾಗಾರ
- ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ
- ತುಮಕೂರು ವಿವಿ ಕುಲಸಚಿವ ಪ್ರೊ.ಎಚ್.ಎಸ್.ಮೋಹನ್
ತುಮಕೂರು: ಮನುಷ್ಯನು ಕೇವಲ ತನಗಾಗಿ ಮಾತ್ರವಲ್ಲದೆ, ಜಗತ್ತಿಗಾಗಿ ಬದುಕುವ ಪರಿಯನ್ನು ಅರಿತುಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್.ಎಸ್. ಮೋಹನ್ ಹೇಳಿದರು.
ನಗರದ ವಿವಿಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಹಾಗೂ ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ "ಪದವಿ ಶಿಕ್ಷಣ ಉದ್ಯೋಗಕ್ಕಷ್ಟೇ ಅಲ್ಲ, ವ್ಯಕ್ತಿತ್ವ ನಿಮಾರ್ಣ' ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜಕ್ಕೆ ಹಾಗೂ ಜಗತ್ತಿಗೆ ನಮ್ಮ ಕೊಡುಗೆ ಏನು ಎಂಬುದನ್ನು ಸದಾ ಪ್ರಶ್ನಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಸಾಧನೆಯ ಹಾದಿಯನ್ನು ತಮ್ಮಲ್ಲಿ ಮೂಡಿಸಿಕೊಳ್ಳಬೇಕು. ಅವರ ಅಚಲವಾದ ಹಾಗೂ ದೃಢವಾದ ಮನಸ್ಥಿಯನ್ನು ಅಳವಡಿಸಿಕೊಂಡು, ತಮ್ಮ ಗುರಿಯನ್ನು ಸಾಧನೆಯತ್ತ ಮಾತ್ರ ಇಟ್ಟುಕೊಳ್ಳಿ. ವಿವೇಕಾನಂದರ ತತ್ವಾದರ್ಶಗಳು ಎಂದಿಗೂ ಪ್ರಸ್ತುತ, ವಿದ್ಯಾರ್ಥಿಗಳು ಅದನ್ನು ಅನುಸರಿಸಬೇಕು ಎಂದು ತಿಳಿಸಿದರು.
ಕಾರ್ಯಾಗಾರದ ಅಧ್ಯಕ್ಷ ಹಿರಿಯ ಪ್ರಾಧ್ಯಾಪಕ ಪ್ರೊ. ಶೇಟ್ ಪ್ರಕಾಶ್ ಮಾತನಾಡಿ, ಖಾಸಗಿ ಕಾಲೇಜುಗಳಿಗಿಂತ ತುಮಕೂರು ವಿಶ್ವವಿದ್ಯಾಲಯ ನೂರು ಪಟ್ಟು ಉತ್ತಮವಾಗಿದೆ. ಒಮ್ಮೆ ಕ್ಯಾಂಪಸ್ ಒಳಗೆ ಕಾಲಿಟ್ಟರೆ ಪದವಿ, ಸ್ನಾತಕೋತ್ತರ ಪದವಿ ಹಾಗೂ ಪಿ.ಎಚ್ಡಿ., ಪಡೆದು ಸಂಪೂರ್ಣ ಶೈಕ್ಷಣಿಕ ಸಬಲರಾಗಿ ಹೊರಹೋಗಬಹುದು. ಇಲ್ಲಿ ಕೇವಲ ಓದು ಮಾತ್ರವಲ್ಲದೆ, ಸಾಂಸತಿಕ ಚಟುವಟಿಕೆಗಳು, ಕ್ರೀಡೆ ಮತ್ತು ಸಂಶೋಧನೆಗೆ ಹೆಚ್ಚಿನ ಅವಕಾಶಗಳಿವೆ. ಇಂದಿನ ಜೆನ್-ಜಿ ಯುವಜನತೆಯ ಶಕ್ತಿ ಏನೆಂಬುದು ದೇಶಕ್ಕೆ ಅರಿವಾಗಿದೆ. ಆ ಶಕ್ತಿಯನ್ನು ಸಕಾರತ್ಮಕ ಮಾರ್ಗದಲ್ಲಿ ಮುನ್ನಡೆಸುವ ಮಾರ್ಗದರ್ಶನವನ್ನು ನಮ್ಮ ವಿವಿಯು ನೀಡುತ್ತದೆ ಎಂದರು.
ಮೈಸೂರಿನ ಜೆ.ಎಸ್.ಎಸ್. ವೈದ್ಯಕಿಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮನೋವೈದ್ಯಕಿಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪಿ.ಸಿ.ಪ್ರದಿಪ್ ಕುಮಾರ್ ಹಾಗೂ ಬೆಂಗಳೂರಿನ ಪ್ರಜ್ಞಾ ಫೌಂಡೇಷನ್ನ ನಿವೃತ್ತ ಪ್ರಾಧ್ಯಾಪಕರು ಹಾಗೂ ಶಿಕ್ಷಣ ತಜ್ಞ ಡಾ. ಮಹೇಶ್ ಅರವಿಂದ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು.
ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕ ಡಾ.ಕೆ.ಎನ್.ಚೇತನ್ ಪ್ರತಾಪ್ ಪ್ರಾಸ್ತವಿಕ ನುಡಿಗಳನ್ನಾಡಿದರು. ಪ್ರಾಧ್ಯಾಪಕಿ ಪ್ರೊ. ಮಂಗಳಗೌರಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.