ತಿಪಟೂರು ಹೊರವಲಯದ ರಂಗಾಪುರ ಹೊಸಳ್ಳಿಯಲ್ಲಿ ಉದ್ಘಾಟನೆಯಾಗುತ್ತಿರುವ ತುಮಕೂರು ವಿವಿ "ಕಲ್ಪಸಿರಿ' ಕ್ಯಾಂಪಸ್
- ತಿಪಟೂರಿನ ಬಹುಜನರ ಕನಸಿನ ಪಿಜಿ ಸೆಂಟರ್
- ಕ್ಯಾಂಪಸ್ ಉದ್ಘಾಟನೆಗೆ ರಾಜ್ಯಪಾಲರ ಗ್ರೀನ್ಸಿಗ್ನಲ್
- ಜು.13ರಂದು ಲೋಕಾರ್ಪಣೆ ಸಾಧ್ಯತೆ
ತುಮಕೂರು: ತುಮಕೂರು ವಿಶ್ವವಿದ್ಯಾಲಯ ತಿಪಟೂರು ಸ್ನಾತಕೋತ್ತರ ಕೇಂದ್ರದ ನೂತನ ಕ್ಯಾಂಪಸ್ "ಕಲ್ಪ ಸಿರಿ'ಗೆ ಉದ್ಘಾಟನೆ ಭಾಗ್ಯ ಸಿಕ್ಕಿದೆ. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರ ನಿವೃತ್ತಿಗೆ ದಿನಗಣನೆ ಆರಂಭವಾಗಿರುವ ನಡುವೆಯೇ ಕ್ಯಾಂಪಸ್ ಉದ್ಘಾಟನೆಗೆ ರಾಜ್ಯಪಾಲರಿಂದ ಅನುಮತಿ ಪಡೆಯಲು ವಿವಿ ಯಶಸ್ವಿಯಾಗಿದೆ.
ತಿಪಟೂರು ರಂಗಾಪುರ ಹೊಸಹಳ್ಳಿಯಲ್ಲಿ ಸರ್ಕಾರ ನೀಡಿರುವ 16.20ಎಕರೆ ಕ್ಯಾಂಪಸ್ನಲ್ಲಿ 7.70ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ "ಕಲ್ಪಸಿರಿ' ಕ್ಯಾಂಪಸ್ಗೆ ಡಿಸಿಎಂ ಡಾ.ಜಿ.ಪರಮೇಶ್ವರ ಜು.8ರಂದು ಮಧ್ಯಾಹ್ನ 3ಕ್ಕೆ ಚಾಲನೆ ನೀಡಬೇಕಿತ್ತು ಆದರೆ, ನಿಗದಿಯಾಗಿದ್ದ ಸಮಯ ಕೊನೆಯ ಕ್ಷಣದಲ್ಲಿ ಬದಲಾವಣೆಯಾಗಿದ್ದು ಕೇಂದ್ರ ಸಚಿವ ವಿ.ಸೋಮಣ್ಣ ಸಲಹೆಯಂತೆ ಜು.13ಕ್ಕೆ ಮುಂದೂಡಿಕೆಯಾಗಿದೆ.
2022ರಲ್ಲಿ ಅಂದಿನ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹಾಗೂ ಸಿಂಡಿಕೇಟ್ ಸದಸ್ಯ ದೂರದೃಷ್ಠಿಯ ಲವಾಗಿ ರಂಗಾಪುರ ಗ್ರಾಪಂ ವ್ಯಾಪ್ತಿಯಲ್ಲಿದ್ದ ಸರ್ಕಾರಿ ಭೂಮಿಯನ್ನು ವಿವಿಗೆ ಪಡೆದು ಸ್ನಾತಕೋತ್ತರ ಕೇಂದ್ರ ಆರಂಭಿಸಲು ವಿವಿ ಆಂತರಿಕ ನಿಧಿಯಿಂದಲೇ ಆರಂಭದಲ್ಲಿ ಬರೋಬ್ಬರಿ 3ಕೋಟಿ ರೂ. ಅಂದಾಜು ವೆಚ್ಚದಲ್ಲಿ ಶೈಕ್ಷಣಿಕ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು.
2025ರ ಡಿಸೆಂಬರ್ವರೆಗೂ ಸಾಗಿದ ವಿವಿಧ ಕಾಮಗಾರಿಗೆ ಈವರೆಗೂ 7.70ಕೋಟಿ ರೂ. ವೆಚ್ಚವಾಗಿದ್ದು ಕಟ್ಟಡ ನಿರ್ಮಾಣವಾಗಿ ಬರೋಬ್ಬರಿ ಆರು ತಿಂಗಳ ನಂತರ ಉದ್ಘಾಟನೆಯಾಗುತ್ತಿದೆ. ಪ್ರಸ್ತುತ ತಿಪಟೂರು ಸ್ನಾತಕೋತ್ತರ ಕೇಂದ್ರ ಸರ್ಕಾರಿ ಪದವಿ ಕಾಲೇಜಿನಲ್ಲಿ ನಡೆಯುತ್ತಿದ್ದು 220 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ತುಮಕೂರು ವಿವಿ ತಿಪಟೂರು ಸ್ನಾತಕೋತ್ತರ ಕೇಂದ್ರದ ಬಗ್ಗೆ ಆರಂಭದಿಂದಲೂ ಮಲತಾಯಿ ಧೋರಣೆ ಹೊಂದಿದೆ ಎಂಬ ಆರೋಪವಿದ್ದು
ಕೇಂದ್ರ ಆರಂಭವಾಗಿ ದಶಕವಾದರೂ ಎಂ.ಕಾಂ ಹಾಗು ಎಂಸಿಎ ಕೋರ್ಸ್ಗಳಿಗೆ ಮಾತ್ರ ಅವಕಾಶ ನೀಡಿದೆ. ಎರಡೂ ವಿಭಾಗದಲ್ಲಿ 220 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಒಬ್ಬರು ನಿರ್ದೇಶಕ, 9 ಬೋಧಕ ಹಾಗೂ ಮೂವರು ಬೋಧಕೇರತ ಸಿಬ್ಬಂದಿ ಮೂಲಸೌಕರ್ಯವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆ.
ವಿವಿಯಲ್ಲಿ ಇರುವ ಎಲ್ಲಾ ಕೋರ್ಸ್ಗಳನ್ನು ತಿಪಟೂರು ಸ್ನಾತಕೋತ್ತರ ಕೇಂದ್ರದಲ್ಲಿಯೂ ಆರಂಭಿಸಬೇಕು, ತೆಂಗಿನ ಸೀಮೆಯ ಗ್ರಾಮೀಣ ಮಕ್ಕಳಿಗೆ ಉನ್ನತ ಶಿಕ್ಷಣ ಲಭಿಸುವಂತಾಗಲು ವಿವಿಯಲ್ಲಿರುವ ಖಾಯಂ ಪ್ರಾಧ್ಯಾಪಕರು, ಸಿಬ್ಬಂದಿಯನ್ನು ತಿಪಟೂರು ಕೇಂದ್ರಕ್ಕೂ ವರ್ಗಾವಣೆ ಮಾಡಬೇಕು ಎಂದು ಆಗ್ರಹವಿದೆ.
ವಿದ್ಯಾರ್ಥಿಗಳಿಗೆ ಸಾರಿಗೆ ಸಮಸ್ಯೆ, ಹಾಸ್ಟೆಲ್ಗೆ ಆಗ್ರಹ:
ರಂಗಾಪುರಕ್ಕೆ ತೆರಳುವ ಮಾರ್ಗದಲ್ಲಿ ತಿಪಟೂರು ನಗರದಿಂದ 5ಕಿಮೀ ದೂರದಲ್ಲಿ ನಿರ್ಮಾಣವಾಗಿರುವ "ಕಲ್ಪಸಿರಿ' ಕ್ಯಾಂಪಸ್ಗೆ ತೆರಳಲು ವಿದ್ಯಾರ್ಥಿಗಳಿಗೆ ಸೂಕ್ತವಾದ ಸಾರಿಗೆ ಸೌಲಭ್ಯವಿಲ್ಲ ಎಂಬುದು ಚಿಂತಿಗೀಡು ಮಾಡಿದೆ. ರಂಗಾಪುರ ಮಾರ್ಗವಾಗಿ ಧಸರೀಟ್ಟಕ್ಕೆ ತೆರಳುವ ಬೆರಳೆಣಿಕೆ ಬಸ್ಗಳನ್ನು ನಂಬಿ ವಿದ್ಯಾರ್ಥಿಗಳು ಕ್ಯಾಂಪಸ್ಗೆ ತೆರಳುವುದು ಕಷ್ಟಸಾಧ್ಯ ಎನ್ನಿಸಿದೆ.
ವಿದ್ಯಾರ್ಥಿನಿಯರ ಸಂಖ್ಯೆಯೇ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅವರ ಸುರಕ್ಷತೆಗೂ ಆದ್ಯತೆ ನೀಡಬೇಕಿದ್ದು ಕಲ್ಪಸಿರಿ ಕ್ಯಾಂಪಸ್ನಲ್ಲಿಯೇ ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಬೇಕು ಎಂಬ ಕೂಗು ಆರಂಭದಲ್ಲಿಯೇ ಎದ್ದಿದೆ. ಪಿಜಿ ಕ್ಯಾಂಪಸ್ನಲ್ಲಿ ಓದುವ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ಹಾಸ್ಟೆಲ್ ಸೌಲಭ್ಯ ನೀಡಲು ರಂಗಾಪುರದ ಮಠ ಮುಂದೆ ಬಂದಿದೆ, ವಿವಿಧ ಸಂ, ಸಂಸ್ಥೆಗಳ ಸಹಕಾರದಲ್ಲಿ ಮಹಿಳಾ ಪದವಿ ಕಾಲೇಜು ಹಾಸ್ಟೆಲ್ ಕಟ್ಟಡದಲ್ಲಿಯೇ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ ಆದರೆ, ತುಮಕೂರು ಕೇಂದ್ರಿತವಾಗಿರುವ ವಿವಿ ವತಿಯಿಂದಲೇ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಶಾಶ್ವತ ಹಾಸ್ಟೆಲ್ ಸೌಲಭ್ಯ ಕಲ್ಪಿಸುವ ಹೊಣೆಗಾರಿಕೆಯಿದೆ.
"ಕಲ್ಪಸಿರಿ'ಗೆ ಐಷರಾಮಿ ಹೆಬ್ಬಾಗಿಲು, ಶೈಕ್ಷಣಿಕ ಭವನ:
ತಿಪಟೂರು ನಗರದ ಶೈಕ್ಷಣಿಕ ಚಟುವಟಿಕೆಗಳಿಗೆ ಬೂಸ್ಟರ್ ಎನ್ನಿಸುವ ತುಮಕೂರು ವಿವಿ ಶೈಕ್ಷಣಿಕ ಭವನ "ಕಲ್ಪಸಿರಿ'ಗೆ ಬರೋಬ್ಬರಿ 70 ಲಕ್ಷ ರೂ. ವೆಚ್ಚದಲ್ಲಿ ಹೆಬ್ಬಾಗಿಲು ನಿರ್ಮಿಸಲಾಗಿದ್ದು ಕ್ಯಾಂಪಸ್ಗೆ ಕಳೆ ತಂದಿದೆ. ಒಂದು ಅಂತಸ್ತಿನ ಭವನದಲ್ಲಿ 10 ಬೋಧನಾ ಕೊಠಡಿ, ಒಂದು ನಿರ್ದೇಶಕರ ಕಚೇರಿ, ಎರಡು ಸಭಾಂಗಣ ಜತೆಗೆ ಶೌಚಾಲಯ ಸೇರಿ ಕೆಲವು ಮೂಲಭೂತ ಸೌಕರ್ಯ ಹೊಂದಿರುವ "ಶೈಕ್ಷಣಿಕ ಭವನ' ಕೂಡ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಪೂರಕವಾಗಿದೆ.
ರಂಗಾಪುರ ಗ್ರಾಪಂ ಹೊಸಳ್ಳಿ ವ್ಯಾಪ್ತಿಯಲ್ಲಿರುವ 16.20ಎಕರೆ ಭೂಮಿಯನ್ನು 2018ರಲ್ಲಿ ತುಮಕೂರು ವಿವಿಗೆ ಹಸ್ತಾಂತರಿಸಲಾಗಿದ್ದು ಬರೋಬ್ಬರಿ 8 ವರ್ಷದ ನಂತರ ಜಾಗದಲ್ಲಿ ಹೊಸ ಕಟ್ಟಡ ತಲೆ ಎತ್ತಿದೆ. ಖಾಸಗಿ ಕಾಲೇಜುಗಳಿಗೆ ಪೈಪೂಟಿ ನೀಡುವಂತಹ ಗುಣಮಟ್ಟದ ಶಿಕ್ಷಣ ಬಡ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೀಡುವ ಹೊಣೆಗಾರಿಕೆ ತುಮಕೂರು ವಿವಿ ಮೇಲಿದೆ.
ತಿಪಟೂರು ಸುತ್ತಮುತ್ತಲ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಸಾಕಷ್ಟು ಹೋರಾಟ ಮಾಡಿ ತಿಪಟೂರು ಸ್ನಾತಕೋತ್ತರ ಆರಂಭಿಸಲಾಗಿತ್ತು. ಕೇಂದ್ರವನ್ನು ಉಳಿಸಲು 2018ರಲ್ಲಿ ಸರ್ಕಾರದಿಂದ ಭೂಮಿ, 2012ರಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನಕ್ಕೆ ಅಂದಿನ ಕುಲಪತಿ, ಸಿಂಡಿಕೇಟ್ ಸದಸ್ಯರು ಸಹಕಾರ ನೀಡಿದರು. ತೆಂಗಿನ ಸೀಮೆಯ ಜನರ ಬಹುದಿನದ ಕನಸು "ಕಲ್ಪ ಸಿರಿ' ಇಂದು ನನಸಾಗಿದೆ. ಮುಂದಿನ ದಿನದಲ್ಲಿ ಎಲ್ಲಾ ಕೋರ್ಸ್ ಜತೆಗೆ ಹಾಸ್ಟೆಲ್ಗಳು ಆರಂಭವಾಗಬೇಕಿದೆ.
ಸಿಂಡಿಕೇಟ್ ಮಾಜಿ ಸದಸ್ಯ, ತುಮಕೂರು ವಿವಿ