ತುಮಕೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಮಾಧ್ಯಮ ಹಬ್ಬ "ಇಂಪ್ರೆಶನ್​ 2026' ಅನ್ನು ರವಿಶಂಕರ್​ ಕೆ. ಭಟ್​ ಉದ್ಘಾಟಿಸಿದರು. ಶೋಭಾ ಮಳವಳ್ಳಿ, ಪ್ರೊ.ಎಚ್​.ಎಸ್​.ಮೋಹನ್​ , ಎಲ್​.ಯೋಗೇಶ್​, ಡಾ. ಜಿ. ದಾಕ್ಷಾಯಣಿ, ಡಾ.ಕೆ.ವಿ.ಸಿಬಂತಿ ಪದ್ಮನಾಭ ಇದ್ದರು.  
ತುಮಕೂರು

ಸುಳ್ಳು, ವದಂತಿ ಹರಡುವ ಮಾಧ್ಯಮಗಳೇ ಹೆಚ್ಚು

ಪ್ರಮುಖ ಮುಖ್ಯಾಂಶಗಳು

  • ತುಮಕೂರು ವಿವಿಯಲ್ಲಿ ಮಾಧ್ಯಮ ಹಬ್ಬ
  • ವಿವಿ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗ
  • ಇಂಪ್ರೆಶನ್​ 2026
ತುಮಕೂರು: ಅಂದಿನ ಪತ್ರಿಕೋದ್ಯಮಕ್ಕು ಇಂದಿನ ಪತ್ರಿಕೋದ್ಯಮಕ್ಕೂ ಬಹಳ ವ್ಯತ್ಯಾಸವಿದೆ. ಹಿಂದೆ ಇರದಿದ್ದ ದಾವಂತ, ಅವಸರ ಇಂದಿನ ಮಾಧ್ಯಮಗಳಲ್ಲಿದೆ. ಹಾಗಾಗಿ, ಅವಸರದ ಯುಗದ ಪತ್ರಿಕೋದ್ಯಮಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯ ಎಂದು ಹಿರಿಯ ಪತ್ರಕರ್ತ ರವಿಶಂಕರ್​ ಕೆ. ಭಟ್​ ಹೇಳಿದರು.
ತುಮಕೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಹಾಗೂ ವಿಶ್ವವಿದ್ಯಾಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ 2 ದಿನಗಳ ರಾಜ್ಯಮಟ್ಟದ ಮಾಧ್ಯಮ ಹಬ್ಬ ಇಂಪ್ರೆಶನ್​ 2026 ಅನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಈಗಿನ ಮಾಧ್ಯಮಗಳಲ್ಲಿ ಸುಳ್ಳು ಹಾಗೂ ವದಂತಿಗಳನ್ನು ಹರಡುವ ಮಾಧ್ಯಮಗಳೇ ಹೆಚ್ಚಾಗಿವೆ ಎಂದರು.
ನಾವು ಸಕಾರಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಅಂಶಗಳನ್ನೇ ಹೆಚ್ಚು ಸ್ವೀಕರಿಸುವ ಹಂತಕ್ಕೆ ತಲುಪಿದ್ದೇವೆ. ಯಾವುದು ಸತ್ಯ, ಯಾವುದು ಮಿಥ್ಯ ಎಂಬ ತಿಳಿಯದ ಗೊಂದಲದ ವಾತಾವರಣವಿದೆ. ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆ ನಮ್ಮ ವಿವೇಚನೆಯನ್ನು ಬಳಸಿಕೊಂಡಾಗ ಮಾತ್ರ ನಿಜ ಯಾವುದು ಎಂದು ತಿಳಿಯುತ್ತದೆ. ಇಲ್ಲದಿದ್ದರೆ ನಕಲಿ, ದುರುದ್ದೇಶಪೂರಿತ ಬರವಣಿಗೆಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ನಮ್ಮಿಂದಲೇ ಕನ್ನಡ ಭಾಷೆಗೆ ಅಪಾಯ ಎದುರಾಗುತ್ತಿದೆ. ಕನ್ನಡವನ್ನು ಒಂದು ವಿಷಯವಾಗಿಯೂ ಓದಲು ವಿದ್ಯಾರ್ಥಿಗಳು ಹಿಂದೆ ಬೀಳುತ್ತಿರುವುದು ಆತಂಕಕಾರಿ. ಬರವಣಿಗೆಯಲ್ಲಿ ತಪು$್ಪಗಳು ಹೆಚ್ಚಾಗುತ್ತಿವೆ. ನಾವು ಸರಿಯಾದ ರೂಪದಲ್ಲಿ ಕನ್ನಡ ಬಳಸದೆ ಹೋದರೆ ಭಾಷೆಗೆ ಕಂಟಕ ಎದುರಾಗಲಿದೆ. ಕನ್ನಡದ ಉಳಿವಿಗಾಗಿ ಇಂತಹ ಅನೇಕ ಕಾರ್ಯಕ್ರಮಗಳ ಅಗತ್ಯವಿದೆ ಎಂದು ಸಲಹೆ ನೀಡಿದರು.
ಪತ್ರಿಕೋದ್ಯಮದಲ್ಲಿ ಭರಪೂರ ಅವಕಾಶಗಳಿವೆ. ಆದರೆ ಅವುಗಳನ್ನು ಬಳಸಿಕೊಳ್ಳಲು ಉತ್ತಮ ಕೌಶಲವುಳ್ಳವರ ಅಗತ್ಯವಿದೆ. ಇಂದಿನ ವಿದ್ಯಾರ್ಥಿಗಳ ಓದು ಕೇವಲ ಸಾಮಾಜಿಕ ಮಾಧ್ಯಮಗಳ ಬರಹಗಳಿಗೆ ಸೀಮಿತವಾಗಿದೆ. ಸಾಮಾಜಿಕ ಮಾಧ್ಯಮಗಳ ಸರಿಯಾದ ಬಳಕೆ ತಿಳಿದಿದ್ದರೆ, ಕೇವಲ ಮೊಬೈಲ್​ನಂತಹ ಸಣ್ಣ ಸಾಧನದ ಸಹಾಯದಿಂದ ನೀವೇ ಹೀರೊಗಳಾಗಿ ಬೆಳೆಯಬಹುದು. ನಿಮ್ಮ ಕಣ್ಣಮುಂದೆಯೇ ನಡೆಯುವ ಸಾಕಷ್ಟು ವಿಷಯಗಳನ್ನು ಗ್ರಹಿಸಿ ಸುದ್ದಿ ರೂಪ ನೀಡುವ ಕೌಶಲ ನಿಮ್ಮ ಕೈಯಲ್ಲಿದೆ ಎಂದು ಹಿರಿಯ ಪತ್ರಕರ್ತೆ ಶೋಭಾ ಮಳವಳ್ಳಿ ತಿಳಿಸಿದರು.
ಇಂದಿನ ಮಾಧ್ಯಮಗಳಲ್ಲಿ ಶಬ್ದಗಳು ಆವೇಶ ಮತ್ತು ಆಡಂಬರದಿಂದ ಕೂಡಿವೆ. ಅವುಗಳನ್ನು ತಣಿಸುವ ಕೆಲಸವನ್ನು ಭವಿಷ್ಯದ ಪತ್ರಕರ್ತರು ಮಾಡಬೇಕಿದೆ. ಬರಹಗಾರನಿಗೆ 250 ಪದಗಳ ಚೌಕಟ್ಟಿನಲ್ಲಿ ಸುಲಲಿತವಾಗಿ ಬರೆಯುವುದು ಸವಾಲಿನ ಕೆಲಸ. ಇದಕ್ಕೆ ವ್ಯಾಪಕ ಓದು ಮುಖ್ಯ ಎಂದು ಪರೀಾಂಗ ಕುಲಸಚಿವ ಪ್ರೊ.ಎಚ್​.ಎಸ್​.ಮೋಹನ್​ ಹೇಳಿದರು.
ಕಲಾ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ದಾಕ್ಷಾಯಣಿ, ಕೆಯುಡಬ್ಲೂಜೆ ಜಿಲ್ಲಾಧ್ಯಕ್ಷ ಎಲ್​.ಯೋಗೇಶ್​, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಸಿಬಂತಿ ಪದ್ಮನಾಭ ಉಪಸ್ಥಿತರಿದ್ದರು. ಡಾ.ಜಿ.ಎಸ್​.ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು. ವಿಷ್ಣುಧರನ್​ ವಂದಿಸಿದರು.