ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್
- ತುಮಕೂರು ವಿವಿ 19ನೇ ಘಟಿಕೋತ್ಸವ
- 10839 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ
- ಪ್ರೊ.ಎಂ.ವೆಂಕಟೇಶ್ವರಲು
ತುಮಕೂರು: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ, ಚಾರ್ಟೆಡ್ ಅಕೌಂಟೆಂಟ್ ಕೆ.ಆರ್.ಪ್ರದಿಪ್, ಸಾಹಿತಿ ದ್ವಾರಾನುಕುಂಟೆ ಪಾತಣ್ಣ ಈ ಬಾರಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ಗೆ ಭಾಜನರಾಗಿದ್ದಾರೆ. ಜೂ.3ರಂದು ನಡೆಯಲಿರುವ 19ನೇ ಘಟಿಕೋತ್ಸವದಲ್ಲಿ ಒಬ್ಬರಿಗೆ ಡಿ.ಲಿಟ್, 59 ಅಭ್ಯರ್ಥಿಗಳಿಗೆ ಪಿ.ಎಚ್ಡಿ., 2058 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8781 ವಿದ್ಯಾರ್ಥಿಗಳು ಸ್ನಾತಕ ಪದವಿ ಸೇರಿ ಒಟ್ಟು 10839 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು.
ಅಂದು ಬೆಳಗ್ಗೆ 11.30ಕ್ಕೆ ನಡೆಯಲಿರುವ ಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚೆಂದ್ ಗೆಹಲೋತ್ ಅಧ್ಯಕ್ಷತೆವಹಿಸಲಿದ್ದು ಬೆಂಗಳೂರು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ನಿರ್ದೇಶಕ ಪ್ರೊ.ದೇಬಬ್ರತ ದಾಸ್ ಘಟಿಕೋತ್ಸವ ಭಾಷಣ ಮಾಡಲಿ ನೆರವೇರಿಸುವರು ಎಂದು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿವಿಯ ಎಲ್ಲಾ ಸ್ನಾತಕೋತ್ತರ ಪದವಿಗಳಿಗೆ ತಲಾ ಐದು ರ್ಯಾಂಕ್, ಎಂಎಸ್ಸಿ ವಿದ್ಯುನ್ಮಾನ ಮಾಧ್ಯಮ - 2 ರ್ಯಾಂಕ್, ಬಿಎ, ಬಿಎಸ್ಡಬ್ಲೂ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿ.ಇಡಿ(ಪದವಿ)ಗಳಿಗೆ ತಲಾ ಹತ್ತು ರ್ಯಾಂಕ್ಗಳು ಹಾಗೂ ಬಿಎಸ್ಸಿಫ್ಯಾಷನ್ ಆ್ಯಂಡ್ ಅಪಾರೆಲ್ ಡಿಸೈನಿಂಗ್-1 ರ್ಯಾಂಕ್, ಬಿ.ವೋಕ್ -3 ರ್ಯಾಂಕ್ ಘೋಷಣೆ ಮಾಡಲಾಗಿದೆ.
ಆಶಾರಾಣಿಗೆ 5 ಚಿನ್ನದ ಪದಕ: ವಿವಿಯ ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ಎಂ.ಆಶಾರಾಣಿ ಕನ್ನಡ ಎಂಎ ಪದವಿಯಲ್ಲಿ ಅತಿಹೆಚ್ಚು ಅಂಕಗಳಿಸಿ ಐದು ಚಿನ್ನದ ಪದಕ, ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಶ್ರಾವ್ಯ ಎನ್.ಬದರಿ ಬಿ.ಕಾಂ.,ನಲ್ಲಿ 3 ಚಿನ್ನದ ಪದಕ ಪ್ರೊ.ಎಚ್.ಆರ್.ಅಪ್ಪಣ್ಣಯ್ಯ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.
ಮಧುಗಿರಿಯ ಶ್ರೀ ಟಿ.ವಿ.ವೆಂಕಟ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಕೆ.ಆರ್.ಮೋಹನ್ ಕುಮಾರ್ ಬಿ.ಎ., (ರಾಜ್ಯಶಾಸ್ತ್ರ), ವಿವಿ ವಾಣಿಜ್ಯಶಾಸ್ತ್ರ ವಿಭಾಗದ ಜೆ.ಸ್ಫೂರ್ತಿ ಎಂ.ಕಾಂ.,ನಲ್ಲಿ 3 ಚಿನ್ನದ ಪದಕ, ವಿವಿಯ ಎಂ.ಎಸ್ಸಿ ಟಾಪರ್ ಆಗಿ ಹೊರಹೊಮ್ಮಿರುವ ಆರ್.ವಿನುತಾ ಎಂ.ಎಸ್ಸಿ ಕಂಪ್ಯೂಟರ್ ಸೈನ್ಸ್ನಲ್ಲಿ 3 ಚಿನ್ನದ ಪದಕ, ಎಂ.ಎಸ್ಸಿ., ಗಣಿತಶಾಸ್ತ್ರದಲ್ಲಿ ಬಿ.ಸಿ.ಕಾವ್ಯ 3 ಚಿನ್ನದ ಪದಕ ಪಡೆದಿದ್ದಾರೆ. ಈ ಘಟಿಕೋತ್ಸವದಲ್ಲಿ ಒಟ್ಟು 90 ವಿದ್ಯಾರ್ಥಿಗಳು 117 ಚಿನ್ನದ ಪದಕಗಳನ್ನು ಹಾಗೂ ನಾಲ್ವರು ವಿದ್ಯಾರ್ಥಿಗಳು ನಗದು ಬಹುಮಾನ ಪ್ರದಾನ ಮಾಡಲಾಗುತ್ತಿದೆ.
ವಿವಿ ಕುಲಸಚಿವ ಪ್ರೊ.ಎಚ್.ಎಸ್.ಮೋಹನ್ ಹಾಜರಿದ್ದರು.