ತುಮಕೂರಿನಲ್ಲಿ ಅಟವೀ ಸುಕ್ಷೇತ್ರದ ಸಂಕ್ರಾಂತಿ ಜಾತ್ರಾ ಮಹೋತ್ಸವ ಕುರಿತು ಕಿರಿಯಶ್ರೀ ಅಟವೀ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಟವೀ ಶಿವಲಿಂಗ ಸ್ವಾಮೀಜಿ, ಟಿ.ಬಿ.ಶೇಖರ್, ಜಗದೀಶ್ ಚಂದ್ರ, ಕೆ.ವಿ.ಬೆಟ್ಟಯ್ಯ ಮತ್ತಿತರರು ಇದ್ದರು.
- ಮಕರ ಸಂಕ್ರಾಂತಿಯಲ್ಲಿ ಜಾತ್ರೆ
- ಅಟವೀ ಸಿದ್ದಲಿಂಗ ಸ್ವಾಮಿಗಳ ಪುಣ್ಯಸ್ಮರಣೋತ್ಸವ
- ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ತುಮಕೂರು: ತಾಲೂಕಿನ ಚಿಕ್ಕತೊಟ್ಲುಕೆರೆಯ ಶ್ರೀ ಅಟವೀ ಸುಕ್ಷೇತ್ರದಲ್ಲಿ ಜ.15ರಂದು ಮಕರ ಸಂಕ್ರಾಂತಿಯ ಉತ್ತರಾಯಣ ಪುಣ್ಯಕಾಲದ ಜಾತ್ರಾಮಹೋತ್ಸವ ಹಾಗೂ ಲಿಂಗೈಕ್ಯ ಅಟವೀ ಸಿದ್ಧಲಿಂಗ ಸ್ವಾಮಿಗಳ 76ನೇ ಪುಣ್ಯ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ.
ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಟವಿ ಸುಕ್ಷೇತ್ರದ ಕಿರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಟವೀ ಕ್ಷೇತ್ರದ ಶಿವಲಿಂಗ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂದು ಬೆಳಿಗ್ಗೆ 6.30ರಿಂದ ಓಂಕಾರೇಶ್ವರ ಮಹಾಶಿವಯೋಗಿಗಳು, ಜಡೆಶಾಂತ ಬಸವ ಮಹಾಶಿವಯೋಗಿಗಳು, ಅಟವೀ ಮಹಾಶಿವಯೋಗಿಗಳು, ಅಟವೀ ಸಿದ್ಧಲಿಂಗ ಮಹಾಸ್ವಾಮಿಗಳವರ ಗದ್ದುಗೆಗಳಿಗೆ ಮಹಾರುದ್ರಾಭಿಷೇಕ, ಪುಷ್ಪಾಲಂಕಾರ, ಅಷ್ಟೋತ್ತರ, ಶತಬಿಲ್ವಾರ್ಚನೆ, ಮಹಾಮಂಗಳಾರತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬೆಳಗ್ಗೆ 10.30ಕ್ಕೆ ಚಿಕ್ಕತೊಟ್ಲುಕೆರೆ ಗ್ರಾಮದ ಬಸವೇಶ್ವರ ದೇವಸ್ಥಾನದಿಂದ ಓಂಕಾರ ಶಿವಯೋಗಿಗಳವರ ಹಾಗು ಅಟವೀ ಮಹಾಶಿವಯೋಗಿಗಳ ಉತ್ಸವವು ವಿವಿಧ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಅಟವೀ ಮಠಕ್ಕೆ ತಲುಪಲಿದೆ. ನಂತರ ಬೆಳಿಗ್ಗೆ 11 ಗಂಟೆಗೆ ಷಟ್ಸ್ಥಳ ಧ್ವಜಾರೋಹಣ ಹಾಗೂ ನಂದಿ ಧ್ವಜಾರೋಹಣ, ಆನಂತರ ಶ್ರೀಗುರು ಅಟವೀಶ್ವರರ ಪಲ್ಲಕ್ಕಿ ಮಹೋತ್ಸವ ನಡೆಯಲಿದೆ ಎಂದರು
ಸಂಕ್ರಾಂತಿ ಜಾತ್ರೆಗಳ ಹೆಬ್ಬಾಗಿಲು, ಸುಗ್ಗಿ ಮುಗಿದು ರೈತರು ಬಿಡುವಾಗಿ ತಮ್ಮ ದುಡಿಮೆಯನ್ನು ಸಾರ್ಥಕಗೊಳಿಸಿಕೊಳ್ಳಲು ಜಾತ್ರಾ ಮಹೋತ್ಸವಗಳನ್ನು ಆಯೋಜಿಸುತ್ತಾರೆ. ಮಕರ ಸಂಕ್ರಾಂತಿಯಂದೇ ಅಟವೀ ಮಠದಲ್ಲಿ ಜಾತ್ರೆ ನಡೆಯುವುದು ವಿಶೇಷ. ಈ ಜಾತ್ರೆಯಲ್ಲಿ ಕೋರಾ ಹೋಬಳಿಯ ಹಳ್ಳಿಗಳ ಭಕ್ತರು ಪಾಲ್ಗೊಂಡು ವಿಶೇಷವಾಗಿ ಆಚರಿಸುವರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಟವೀ ಸುಕ್ಷೇತ್ರದ ಅಟವೀ ಶಿವಲಿಂಗ ಸ್ವಾಮೀಜಿ, ಕ್ಷೇತ್ರದ ಕಾರ್ಯಾಧ್ಯಕ್ಷ ಟಿ.ಬಿ.ಶೇಖರ್, ಖಜಾಂಚಿ ಜಗದೀಶ್ ಚಂದ್ರ, ಅಟವೀ ಜ್ಞಾನ ಪ್ರಸಾರ ಕೇಂದ್ರದ ಸಂಚಾಲಕ ಕೆ.ವಿ.ಬೆಟ್ಟಯ್ಯ, ಮುಖಂಡರಾದ ಮಹದೇವಪ್ಪ, ವಿಶ್ವನಾಥ್ ಅಪ್ಪಾಜಪ್ಪ, ಬೆಟ್ಟಲಿಂಗಯ್ಯ, ಅನುಸೂಯಮ್ಮ, ಭೀಮರಾಜು ಮತ್ತಿತರರು ಹಾಜರಿದ್ದರು.