- ಡಿಡಿಪಿಐ ರಘುಚಂದ್ರ ಶಾಲೆಗೆ ಭೇಟಿ
- ಮುಖ್ಯಶಿಕ್ಷಕ, ಶಿಕ್ಷಕರಿಗೆ ನೊಟೀಸ್
- ಮಗುವಿನ ಚಿಕಿತ್ಸೆಗೆ ನೆರವು
ತುಮಕೂರು: ಶಾಲೆ ಕೊಠಡಿ ಬಾಗಿಲಿಗೆ ಸಿಲುಕಿ ಬಾಲಕಿಯ ಬಲಗೈನ ಎರಡು ಬೆರಳು ತುಂಡಾದ ಸಂದರ್ಭದಲ್ಲಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಕೊಡಿಸದೆ ನಿರ್ಲಕ್ಷ್ಯವಹಿಸಿದ ಪ್ರಕರಣ ಸಂಬಂಧ ಮುಖ್ಯಶಿಕ್ಷಕರ ಹಾಗೂ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ನೊಟೀಸ್ ಜಾರಿ ಮಾಡಿದ್ದಾರೆ.
ಶನಿವಾರ ಸರ್ಕಾರಿ ಶಾಲೆಗೆ ಭೇಟಿನೀಡಿದ ಡಿಡಿಪಿಐ ರಘುಚಂದ್ರ ಅವರು, ಕೊಠಡಿಯ ಕಬ್ಬಿಣದ ಬಾಗಿಲಿಗೆ ಕೈಕೊಟ್ಟ ಒಂದನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿ ಬಲಗೈ ಬೆರಳು ತುಂಡಾಗಿದ್ದ ಪ್ರಕರಣದ ಮಾಹಿತಿ ಪಡೆದರು. ಮುಖ್ಯಶಿಕ್ಷಕ ನಾಗೇಶ್, ಶಿಕ್ಷಕರರಾದ ರೇಣುಕಮ್ಮ, ವೆಂಕಟೇಶ್ರಿಂದ ಟನೆ ವಿವರವನ್ನು ಸಂಪೂರ್ಣವಾಗಿ ಪಡೆದಿದ್ದಲ್ಲದೆ, ಶಾಲೆಯಲ್ಲೇ 1 ಗಂಟೆಗು ಹೆಚ್ಚು ಕಾಲ ಇದ್ದು ಅಲ್ಲಿನ ವ್ಯವಸ್ಥೆ, ಮೂಲಸೌಕರ್ಯಗಳನ್ನು ಸಹ ಪರಿಶೀಲಿಸಿದರು.
ಡಿಸಿ, ಆಯುಕ್ತರಿಗೆ ವರದಿ: ಘಟನೆ ಸಂಬಂಧ ಖುದ್ದು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದು ಈ ಸಂಬಂಧ ವರದಿಯನ್ನು ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಆಯುಕ್ತರಿಗೆ ಸಲ್ಲಿಸುವುದಾಗಿ ರಘುಚಂದ್ರ "ವಿಜಯವಾಣಿ'ಗೆ ತಿಳಿಸಿದರು. ಮಗು ಚಿನ್ಮಯಿ ಚೇತರಿಸಿಕೊಳ್ಳುತ್ತಿದ್ದು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಇಲಾಖೆ ವತಿಯಿಂದ ನೆರವು ನೀಡಲಾಗುವುದು ಎನ್ನಲಾಗಿದೆ.
ಮಗು ಚಿನ್ಮಯಿ ಚಿಕಿತ್ಸೆಗೆ ಶಾಲೆ ಶಿಕ್ಷಕರಿಗೆ ಆರ್ಥಿಕ ನೆರವು ನೀಡಿದ್ದು ಇನ್ನೂ ಹೆಚ್ಚಿನ ಚಿಕಿತ್ಸೆಗೆ ಶಿಕ್ಷಕರ ಕಲ್ಯಾಣ ನಿಧಿ ಅಥವಾ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಆರ್ಥಿಕ ನೆರವು ಕೊಡಿಸುವುದಾಗಿ ಡಿಡಿಪಿಐ ರುಚಂದ್ರ ಭರವಸೆ ನೀಡಿದರು.
ಮಗು ಚಿನ್ಮಯಿ ಬಲಗೈ ಬೆರಳು ತುಂಡಾದ ಘಟನೆಗೆ ಸಂಬಂಧಿಸಿದಂತೆ ಗೂಳೂರು ಶಾಲೆ ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕರರಾದ ರೇಣುಕಮ್ಮ, ವೆಂಕಟೇಶ್ ಹಾಗೂ ತುಮಕೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ವಿರುದ್ಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.