ಕಾರದ ಶ್ರೀ ವೀರಬಸವ ಸ್ವಾಮೀಜಿ
- ಬೆಳ್ಳಾವಿ ಕಾರದೇಶ್ವರ ಮಠದ ಶ್ರೀಗಳ ಮುನಿಸು
- ಕಾಲ್ನಡಿಗೆಯಲ್ಲಿ ಸಿದ್ದಗಂಗಾಮಠಕ್ಕೆ ತೆರಳಿದ ಸ್ವಾಮೀಜಿ
- ಭಕ್ತರಲ್ಲಿ ಮನೆ ಮಾಡಿದ ಅತಂಕ
ತುಮಕೂರು: ತಾಲೂಕಿನ ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ನಾಪತ್ತೆ ಪ್ರಕರಣ ಕೆಲಕಾಲ ಆತಂಕ ಸೃಷ್ಟಿಸಿತ್ತು. ಬುಧವಾರ ಬೆಳಗ್ಗೆ ಮಠದಿಂದ ಯಾರಿಗೂ ಹೇಳದೆ ತೆರಳಿದ್ದ ವೀರಬಸವ ಸ್ವಾಮೀಜಿ ಮಧ್ಯಾಹ್ನದ ಹೊತ್ತಿಗೆ ಸಿದ್ದಗಂಗಾ ಮಠದಲ್ಲಿ ಪ್ರತ್ಯಕ್ಷರಾಗಿದ್ದು 'ಶ್ರೀಗಳ ನಾಪತ್ತೆ' ಗೊಂದಲಕ್ಕೆ ತೆರೆಬಿತ್ತು.
ಪ್ರತಿನಿತ್ಯದಂತೆ ಬೆಳಗ್ಗೆ ವಾಯುವಿಹಾರಕ್ಕೆ ತೆರಳಿದ ಶ್ರೀಗಳು ಮಠದಲ್ಲಿನ ಸಿಬ್ಬಂದಿಗೆ ಎಲ್ಲಿಗೆ ಹೋಗುತ್ತಿದ್ದೇನೆ' ಎಂಬವಿಚಾರವನ್ನು ತಿಳಿಸದೆ ಇದ್ದದ್ದು ಮಠದ ಆಡಳಿತ ಮಂಡಳಿ ಹಾಗೂ ಭಕ್ತರಲ್ಲಿ ಕೆಲಸಮಯ ಆತಂಕ ಮೂಡಿಸಿತ್ತು. ಯಾರೊಬ್ಬರಿಗೂ ವಿಚಾರ ತಿಳಿಸದೆ ಇದ್ದದ್ದು ಶ್ರೀಗಳು ಬಳಸುತ್ತಿದ್ದ ವಾಹನವು ಮಠದಲ್ಲಿ ಇದ್ದದ್ದರಿಂದ ಭಕ್ತರ ಹಾಗೂ ಸಮಾಜ ಮುಖಂಡರಲ್ಲಿ ಇನ್ನಷ್ಟು ಕಳವಳ ಉಂಟುಮಾಡಿತ್ತು. ಸುದ್ದಿ ಕಾಡ್ಡಿಚ್ಚಿನಂತೆ ಹರಡಿದ್ದು ಶ್ರೀಮಠದ ಆಡಳಿತಮಂಡಳಿ, ಭಕ್ತರು ಮಠದತ್ತ ದೌಡಾಯಿಸಿ, ಶ್ರೀಗಳು ಎತ್ತ ಕಡೆ ಪಯಣ ಬೆಳೆಸಿದ್ದಾರೆಂದು ಹುಡುಕಾಡಲು ಆರಂಭಿಸಿದರು. ಆದರೆ, ಕಾರದ ಶ್ರೀಗಳು ಮಧ್ಯಾಹ್ನದ ವೇಳೆಗೆ ಸಿದ್ದಗಂಗಾ ಮಠದಲ್ಲಿ ಇದ್ದಾರೆಂಬ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರಲ್ಲಿ ಮನೆ ಮಾಡಿದ್ದ ಆತಂಕ ದೂರವಾಯಿತು.
ಬೆಳಗ್ಗೆ 5 ಗಂಟೆಗೆ ಮಠ ತೊರೆದಿದ್ದರು!: ಬುಧವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಕಾರದ ವೀರಬಸವ ಸ್ವಾಮೀಜಿ ಮಠ ತೊರೆದಿದ್ದರು. ಮಠದಿಂದ ಕಾಲ್ನಡಿಗೆಯಲ್ಲಿ ಸಿದ್ದಗಂಗಾ ಮಠಕ್ಕೆ ಬಂದು ಸೇರಿದ್ದರು. ಸುಮಾರು 15ಕಿ.ಮೀ., ದೂರವನ್ನು ಶ್ರೀಗಳು ನಡೆದುಕೊಂಡೇ ಕ್ರಮಿಸಿದ್ದರು. ಜಾತ್ರಾ ಸಂದರ್ಭದಲ್ಲಿ ಫ್ಲೆಕ್ಸ್ ಅಳವಡಿಸುವ ವಿಚಾರಕ್ಕೆ ನಡೆದ ಗಲಾಟೆಯಿಂದ ಮನೊಂದು ಮಠವನ್ನು ತೊರೆದಿದ್ದರು ಎನ್ನಲಾಗಿದೆ.
ಸಿದ್ದಗಂಗಾ ಮಠದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಕಾರದ ವೀರಬಸವ ಸ್ವಾಮೀಜಿ, ಫ್ಲೆಕ್ಸ್ ವಿಚಾರಕ್ಕೆ ಗಲಾಟೆಯಾಗಿರುವುದು ಗೊತ್ತಿಲ್ಲ. ಮನೆ, ಮಠ ಅಂದರೆ ಗಲಾಟೆ ಇದ್ದದ್ದೆ. ಆ ವಿಚಾರಕ್ಕೆ ಗಲಾಟೆಯಾಗಿರುವುದು ಗೊತ್ತಿಲ್ಲ. ಬೆಳಗ್ಗೆ ಎದ್ದು ಕಾರದ ಮಠದಲ್ಲಿ ಗದ್ದುಗೆಗೆ ನಮಿಸಿ ಶಿವಕುಮಾರ ಶ್ರೀಗಳ ಗದ್ದುಗೆ ದರ್ಶನ ಪಡೆಯಬೇಕೆಂದು ಅನಿಸಿತು. ಅಲ್ಲದೆ, ಸಿದ್ದಲಿಂಗ ಸ್ವಾಮೀಜಿಗಳು ಸಹ ಮಠಕ್ಕೆ ಆಹ್ವಾನಿಸತ್ತಲೇ ಇದ್ದರು. ಹಾಗಾಗಿ, ಯಾರಿಗೂ ಹೇಳದೆ ಮಠಕ್ಕೆ ಬಂದುಬಿಟ್ಟಿದ್ದು ಇದರಿಂದ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಸಿದ್ದಲಿಂಗ ಶ್ರೀಗಳು ಹೇಳುವವರೆಗೂ ಮಠದಲ್ಲಿ ಇರುತ್ತೇನೆ' ಎಂದು ಸ್ಪಷ್ಟಪಡಿಸಿದರು.
ಕಳೆದ ಭಾನುವಾರ ಬೆಳ್ಳಾವಿ ಜಾತ್ರೆ ಸಮಯದಲ್ಲಿ ಮಠದ ಆವರಣದ ಗೋಡೆಗೆ ಹೊಂದಿಕೊಂಡಂತೆ ರಾತ್ರಿ ಕೆಲವರು ಫ್ಲೆಕ್ಸ್ ಹಾಕಿದ್ದರು. ಫ್ಲೆಕ್ಸ್ನ ಕೆಲಭಾಗ ಹರಿದಿದ್ದು ಈ ಬಗ್ಗೆ ಕೆಲವರು ಬಂದು ಕಾರದ ಸ್ವಾಮೀಜಿ ಅವರನ್ನು ಪ್ರಶ್ನಿಸಿದ್ದಲ್ಲದೆ, ಸಿಸಿಟಿವಿ ಫೂಟೇಜ್ ನೀಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಸ್ವಾಮೀಜಿ ಒಪ್ಪಿರಲಿಲ್ಲ. ತೀವ್ರ ಒತ್ತಡ ಹೇರಿದ್ದರಿಂದ ಕೊನೆಗೆ ಸಿಸಿ ಟಿವಿ ತೋರಿಸಿದ್ದರು. ಅದರಲ್ಲು ಯಾರೂ ಫ್ಲೆಕ್ಸ್ ಕಿತ್ತಿದ್ದಾರೆಂಬುದು ಗೊತ್ತಿರಲಿಲ್ಲ. ಸೋಮವಾರ ರಥೋತ್ಸವ ನೆರವೇರಿತು. ಮಂಗಳವಾರ ಮತ್ತೆ ಕೆಲವರು ಸ್ವಾಮೀಜಿ ಬಳಿ ಬಂದು ಈ ಬಗ್ಗೆ ಗಲಾಟೆ ಮಾಡಿದ್ದು ಇದರಿಂದ ಮನೊಂದು ಮಠದಿಂದ ಹೊರಗೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.