ತುಮಕೂರಿನ ಕೆ.ಆರ್.ಬಡಾವಣೆಯ ಶ್ರೀರಾಮ ದೇವಾಲಯ.
- ತುಮಕೂರು ಶ್ರೀರಾಮ ದೇವಾಲಯ
- ಆಸ್ತಿ ವಿವರವು ಇಲ್ಲ, ಖರ್ಚಿನ ಬಾಬ್ತು ಇಲ್ಲ
- ಮುಜರಾಯಿ ಇಲಾಖೆ ಒಡೆತನ
ತುಮಕೂರು: ನಗರದ ಹೃದಯಭಾಗದಲ್ಲಿರುವ ಕೆ.ಆರ್.ಬಡಾವಣೆಯ ಶ್ರೀರಾಮ ದೇವಾಲಯದ ಜಾಗದ ಮೇಲೆ ಪ್ರಭಾವಿಗಳ ಕಣ್ಣುಬಿದ್ದಿದೆ !. ಆದರೆ, ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದ ಅರ್ಚಕರಿಗೆ ಯಾವುದೇ ವೇತನ ನೀಡುತ್ತಿಲ್ಲ. ನಿತ್ಯ ಪೂಜೆಗೆ ಖರ್ಚುವೆಚ್ಚ ನೀಡುತ್ತಿಲ್ಲ ಎಂಬ ಅಚ್ಚರಿ ಅಂಶವು ಮಾಹಿತಿಹಕ್ಕು ಅರ್ಜಿಯಲ್ಲಿ ಬಹಿರಂಗಗೊಂಡಿದೆ.
ತುಮಕೂರಿನ ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಸಲ್ಲಿಸಿದ್ದ ಮಾಹಿತಿಹಕ್ಕು ಅರ್ಜಿಗೆ ತುಮಕೂರು ತಾಲೂಕು ಕಚೇರಿಯು ನೀಡಿರುವ ಹಿಂಬರಹದಲ್ಲಿ ಈ ಗೊಂದಲಗಳು ಕಂಡುಬಂದಿವೆ. ಆರ್ ಟಿಐ ಅರ್ಜಿಗೆ ನಿಗದಿತ ಕಾಲಾವಧಿಯನ್ನು ಮೀರಿಯೂ, ಅಸ್ಪಷ್ಟ ಹಾಗೂ ಅಪೂರ್ಣ ಮಾಹಿತಿಯನ್ನು ನೀಡಿರುವ ಮೂಲಕ ಸಾರ್ವಜನಿಕ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ಚರ ಮತ್ತು ಸ್ಥಿರ ಆಸ್ತಿಯ ಸ್ಪಷ್ಟ ವಿವರ ಕೊಡುವಲ್ಲಿ ತಾಲೂಕು ಕಚೇರಿ ವಿಫಲವಾಗಿದೆಯಲ್ಲದೆ, ದೇವಾಲಯದ ಅರ್ಚಕರಿಗೆ ಯಾವುದೇ ವೇತನ ನೀಡುತ್ತಿಲ್ಲ. ನಿತ್ಯ ಪೂಜೆಗೆ ಖರ್ಚುವೆಚ್ಚ ನೀಡುತ್ತಿಲ್ಲ ಎಂಬ ಉತ್ತರ ನೀಡಿರುವುದು ಈಗ ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ.
ಚರ, ಸ್ಥಿರಾಸ್ತಿ ಮಾಹಿತಿಯು ಇಲ್ಲ!: ದೇವಾಲಯದ ಚರ ಮತ್ತು ಸ್ಥಿರ ಆಸ್ತಿಯ ಪಟ್ಟಿಯೇ ತಾಲೂಕು ಕಚೇರಿಯಲ್ಲಿ ಇಲ್ಲದಿರುವುದು ಹುಬ್ಬೇರಿಸುವಂತೆ ಮಾಡಿದೆ. ಆರ್ಟಿಐ ಅರ್ಜಿ ಸಲ್ಲಿಸಿದ ಬಳಿಕವಷ್ಟೇ ಎಚ್ಚೆತ್ತುಕೊಂಡಿರುವ ಇಲಾಖೆಯು "ಈ ಸಂಬಂಧ ಚರ ಆಸ್ತಿಯ ಬಗ್ಗೆ ಮಾಹಿತಿ ಪಡೆದು ನೀಡಲಾಗುವುದು ಎಂದು ಉತ್ತರಿಸಿ ಬೇಜವಾಬ್ದಾರಿತನ ಪ್ರದರ್ಶಿಸಿದೆ. ಇದೇ ರೀತಿ ದೇವಾಲಯದ ಸ್ಥಿರಾಸ್ತಿ ಬಗ್ಗೆ ಬಾಡಿಗೆದಾರರ ವಿಳಾಸವಾಗಲೀ, ಅವರಿಂದ ಪಡೆಯುತ್ತಿರುವ ಮಾಸಿಕ ಬಾಡಿಗೆ ಮೊತ್ತದ ವಿವರವಾಗಲೀ ಇಲಾಖೆಯಲ್ಲಿ ಇಲ್ಲದಿರುವುದು ಆಘಾತಕಾರಿ ವಿಚಾರವಾಗಿದ್ದು ಈ ವಿವರವನ್ನು ಇಲಾಖೆಯು ಮುಚ್ಚಿಟ್ಟಿರುವ ಸಾಧ್ಯತೆ ಬಗ್ಗೆ ಅರ್ಜಿದಾರರು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ದೇವಾಲಯದಲ್ಲಿ ಎಸ್. ಸಂತೋಷ್ಕುಮಾರ್ ಆ.17, -2019 ರಿಂದ ತಾತ್ಕಾಲಿಕವಾಗಿ ಅರ್ಚಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಮಾಸಿಕ ಗೌರವಧನ, ವೇತನ ನೀಡುತ್ತಿಲ್ಲ ಎಂದು ಇಲಾಖೆಯು ಅರ್ಜಿದಾರ ವಿಶ್ವನಾಥನ್ಗೆ ನೀಡಿರುವ ಉತ್ತರದಲ್ಲಿ ತಿಳಿಸಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಯ ಶ್ರೀರಾಮ ದೇವಾಲಯದ ಜಾಗದ ಮೇಲೆ ಈಗ ನಗರದ ಪ್ರಭಾವಿಗಳ ಕಣ್ಣಬಿದ್ದಿದ್ದು ಇದನ್ನು ಕಾಪಾಡುವ ಹೊಣೆ ತಹಸೀಲ್ದಾರ್ ಹೆಗಲಿಗೆ ಬಿದ್ದಿದೆ.
2022-&23 ನೇ ಸಾಲಿನಲ್ಲಿ ಹುಂಡಿ ಎಣಿಕೆ ಮಾಡಿದಾಗ 77,870 ರೂ. ನಗದು ಮೊತ್ತ ಸಂಗ್ರಹವಾಗಿರುವುದು ಕಂಡುಬಂದಿದ್ದರೂ, ಅದರ ಹಿಂದಿನ ಸಾಲಿನಲ್ಲಾಗಲೀ ಅಥವಾ ಆನಂತರವಾಗಲೀ ಹುಂಡಿ ಎಣಿಕೆ ಮಾಡಿಲ್ಲವೆಂಬುದು ಊಹಾಪೋಹಕ್ಕೆ ಎಡೆಮಾಡುವಂತಿದೆ.
ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯವನ್ನು "ಸಿ' ವರ್ಗಕ್ಕೆ ಸೇರಿಸಿದ್ದು, ಈ ದೇವಾಲಯಕ್ಕೆ ಭಕ್ತರು, ದಾನಿಗಳಿಂದ ದೇಣಿಗೆಯಾಗಿ ನೀಡಿರುವ ವಸ್ತುಗಳು ಅಥವಾ ನಗದು ಮೊತ್ತ ಕಳೆದ 5 ವರ್ಷಗಳಿಂದ ಕಂಡುಬಂದಿಲ್ಲ. ದೇವಾಲಯದ ನಿತ್ಯ ಪೂಜೆಗೆ ಕಳೆದ 5 ವರ್ಷಗಳಿಂದ ಯಾವುದೇ ವೆಚ್ಚವಾಗಿಲ್ಲ ಎಂಬುದು ತಾಲೂಕು ಕಚೇರಿ ನೀಡಿರುವ ಉತ್ತರವು ಗಮನಾರ್ಹವಾಗಿದೆ.
ನಗರದ ಹೃದಯಭಾಗದಲ್ಲಿರುವ ಶ್ರೀರಾಮ ದೇವಾಲಯಕ್ಕೆ ಸಂಬಂಧಿಸಿದ ದಾಖಲೆಗಳ ಮಾಹಿತಿಯೇ ತಾಲೂಕು ಕಚೇರಿ ಅಧಿಕಾರಿಗಳ ಬಳಿ ಇಲ್ಲ. ಇದೀಗ ಪ್ರಭಾವಿಗಳು ದೇವಾಲಯ ಆಡಳಿತ ಮಂಡಳಿ ಒಳಕ್ಕೆ ನುಸುಳಿ ಜಾಗವನ್ನು ಕಬಳಿಸುವ "ರಾಜಕೀಯ' ಹುನ್ನಾರ ನಡೆಸುತ್ತಿರುವುದು ಕಂಡುಬಂದಿದೆ. ಮುಜರಾಯಿ ಇಲಾಖೆಗೆ ಸೇರಿದ ದೇವಾಲಯದ ಆಸ್ತಿ ರಕ್ಷಣೆ ಮಾಡಬೇಕಿದೆ.