*ತುಮಕೂರಿನ ದೇವರಾಯನದುರ್ಗ ದೇವಾಲಯದಲ್ಲಿ ಬಿ.ಸುರೇಶಗೌಡ ಪೂಜೆ ಸಲ್ಲಿಸಿದರು.
- ಕೇಂದ್ರ ಸರ್ಕಾರಕ್ಕೆ ಶೀಘ್ರ ಪ್ರಸ್ತಾವನೆ
- ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ
- ಶಾಸಕ ಬಿ.ಸುರೇಶಗೌಡ ಭರವಸೆ
ತುಮಕೂರು: ದೇವರಾಯನದುರ್ಗದಲ್ಲಿ ರೋಪ್ ವೇ ನಿರ್ಮಿಸುವ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಬಿ.ಸುರೇಶಗೌಡ ಭರವಸೆ ನೀಡಿದರು.
ಸೋಮವಾರ ದೇವರಾಯನದುರ್ಗದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಸುರೇಶ್ಗೌಡ, ಕನಿಷ್ಠ 61 ಕೋಟಿ ರೂ. ನಿಂದ ಗರಿಷ್ಠ 150 ಕೋಟಿ ರೂ. ವೆಚ್ಚದಲ್ಲಿ ರೋಪ್ ವೇ ನಿರ್ಮಿಸುವ ಕೇಂದ್ರಕ್ಕೆ ಪ್ರಸತಾವನೆ ಸಲ್ಲಿಸಲಾಗುವುದು ಎಂದರು.
ಗಣಿ ಇಲಾಖೆಯಡಿ ಪರಿಸರ ಪುನರ್ ನಿಮಾರ್ಣಕ್ಕಾಗಿ ಲಭ್ಯವಿರುವ ಅನುದಾನದಲ್ಲಿ ರೋಪ್ ವೇ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಇದರ ಜತೆಗೆ ನಾಮದ ಚಿಲುಮೆ ಸುತ್ತಮುತ್ತಲಿನ ಪರಿಸರದಲ್ಲಿ ಪೂರ್ಣ ಪ್ರಮಾಣದ ಪ್ರಾಣಿ ಸಂಗ್ರಹಾಲಯ ಸ್ಥಾಪಿಸಲೂ ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತು ಎಂದರು.
ದೇವರಾಯನದುರ್ಗ ಸಮುದ್ರ ಮಟ್ಟದಿಂದ 3904 ಅಡಿ ಎತ್ತರದಲ್ಲಿದ್ದು, 4117 ಹೆಕ್ಟೇರ್ ಪ್ರದೇಶದಲ್ಲಿ ಅರಣ್ಯ ವ್ಯಾಪಿಸಿಕೊಂಡಿದೆ. ಇದೊಂದು ಸುರಕ್ಷಿತ ಅರಣ್ಯ ಪ್ರದೇಶ. ಇಲ್ಲಿ 1200 ಅಡಿ ಎತ್ತರದಲ್ಲಿ ರೋಪ್ ವೇ ಇರಬೇಕು. ಅದು ಮೋನೋ ಕೇಬಲ್ ಇರಬೇಕೆ ಅಥವಾ ಎರಡು- ಮೂರು ಕೇಬಲ್ ಇರಬೇಕೆ ಎಂಬ ಬಗ್ಗೆ ಸಾಧ್ಯಾಸಾಧ್ಯತೆ ನೋಡಿಕೊಂಡು ತೀಮಾರ್ನಿಸಲಾಗುವುದು ಎಂದರು.
ದೇವರಾಯನದುರ್ಗದಲ್ಲಿ ರೋಪ್ ವೇ ಮತ್ತು ಪ್ರಾಣಿ ಸಂಗ್ರಹಾಲಯ ಸ್ಥಾಪಿಸಿದರೆ ಇದೊಂದು ಅತ್ಯುತ್ತಮ ಆಕರ್ಷಣೀಯ ಪ್ರವಾಸಿ ಕೇಂದ್ರವಾಗದೆ ಎಂದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪವಿತ್ರ, ವಲಯ ಅರಣ್ಯಾಧಿಕಾರಿ ನಮಿತಾ ಇದ್ದರು.