ತುಮಕೂರಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಸುದ್ದಿಗೋಷ್ಠಿಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲದವರಿಂದ ವಶ ಪಡಿಸಿಕೊಂಡ ಮಾಲುಗಳನ್ನು ಪರಿಶೀಲಿಸಿದರು.
- 8 ಕೆಜಿ ಗಾಂಜಾ ಸೊಪ್ಪು ವಶ
- ಮಹಾರಾಷ್ಟ್ರ, ಒರಿಸ್ಸಾ ರಾಜ್ಯಗಳಿಂದ ಅಕ್ರಮ ಸಾಗಾಣಿಕೆ
- ಜಾಲ ಪತ್ತೆಹಚ್ಚಿದ ತುಮಕೂರು ಪೊಲೀಸರು
ತುಮಕೂರು: ಮಾದಕ ವಸ್ತುಗಳ ಅಕ್ರಮ ಮಾರಾಟ ಹಾಗೂ ಸೇವನೆ ಜಾಲವನ್ನು ಭೇಧಿಸುವಲ್ಲಿ ತುಮಕೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಾರಾಷ್ಟ್ರ, ಒರಿಸ್ಸಾ, ಛತ್ತೀಸ್ಗಡ ರಾಜ್ಯಗಳಿಂದ ಅಕ್ರಮವಾಗಿ ಸಾಗಾಣಿಕೆ ಮಾಡಿಕೊಂಡು ಬಂದು ತುಮಕೂರಿನಲ್ಲಿ ಮಾರಾಟ ಮಾಡಲು ಪ್ರಯತ್ನಿಸಿದ 6 ಪೆಡ್ಲರ್ ಗಳನ್ನು ಬಂಧಿಸಿರುವ ಪೊಲೀಸರು 9.6 ಲಕ್ಷ ರೂ., ಮೌಲ್ಯದ 8 ಕೆಜಿ ಗಾಂಜಾ ಸೊಪ್ಪು, 78 ಸಾವಿರ ರೂ., ಬೆಳೆಬಾಳುವ ಎಂಡಿಎಂಎ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನೆಲಮಂಗಲದ ಶೇಖ್ ಸಾಹಿಲ್ ಅಕ್ಬರ್ (24), ತುಮಕೂರಿನ ವಸೀಂ (27), ರೋಷನ್ ಸಮೀರ್ (29 ). ನಯಿಮ್ (38) ಫಾರೂಖ್ ಹುಸೇನ್ (45) ಹಾಗೂ ಮೈಸೂರಿನ ಶೋಯೆಬ್ (22) ಬಂಧಿತ ಆರೋಪಿಗಳು. ಆರೋಪಿಗಳು ಆಟೋ, ಕಾರು, ಲಾರಿ ಚಾಲಕ ವೃತ್ತಿ ಮಾಡುತ್ತಿದ್ದು ಮಾದಕ ವಸ್ತುಗಳ ಅಕ್ರಮ ಸಾಗಾಣಿಕೆ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಶೇಷ ತಂಡ: ನಗರ ಮತ್ತು ಹೊರವಲಯದಲ್ಲಿ ಹಾಗೂ ಶಾಲಾ ಕಾಲೇಜುಗಳ ಸಮೀಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುವ ದಂಧೆ ಬಗ್ಗೆ ಸಾಕಷ್ಟು ದೂರುಗಳ ಬಂಧ ಹಿನ್ನೆಲೆ ತಿಲಕ್ಪಾರ್ಕ್ ಸಿಪಿಐ ಜಿ.ಪುರುಷೋತ್ತಮ್ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ಗಳಾದ ಸಂಜಯ್ ಕುಮಾರ್ ಕಾಂಬ್ಳೆ, ಪದ್ಮಾವತಿ, ಪೇದೆಗಳಾದ ನಿಜಾಂಉದ್ದೀನ್-ಷಾ, ರಾಮಕೃಷ್ಣ, ಶಶಿಕುಮಾರನಾಯ್ಕ, ಮಂಜುನಾಥ, ಲೋಕೇಶ್ರನ್ನೊಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.