ಭಾರತದ ವೈದೇಹಿ ಚೌಧರಿ 
ತುಮಕೂರು

ವೈದೇಹಿ, ಝೀಲ್​ ದೇಸಾಯಿ ಕ್ವಾರ್ಟರ್ ಫೈನಲ್​ಗೆ ಲಗ್ಗೆ

ಪ್ರಮುಖ ಮುಖ್ಯಾಂಶಗಳು

  • ಐಟಿಎಫ್​ ಡಬ್ಲೂ 35 ಚಾಂಪಿಯನ್​ಶಿಪ್​
  • ಜಸ್ಟಿನಾ, ಪಾವ್ಲಿಕೊವಾಸ್ಕೊ ಗೆಲುವಿನ ಓಟ
  • ಮಧುರಿಮಾ, ಜೆನ್ನಿಫರ್​ಗೆ ನಿರಾಸೆ
ತುಮಕೂರು: ಐಟಿಎಫ್​ ವಿಶ್ವ ಮಹಿಳಾ ಚಾಂಪಿಯನ್​ಶಿಪ್​ ಟೂರ್ನಿ ರೋಚಕ ಘಟ್ಟ ತಲುಪಿದೆ. ಅಗ್ರಶ್ರೇಯಾಂಕಿತೆ ಜಸ್ಟಿನಾ ಮಿಕುಲ್ಸ್ಕೈಟ್‌​, ಎರಡನೇ ಶ್ರೇಯಾಂಕಿತೆ ಪೋಲೆಂಡ್​ನ ಜುಝನ್ನಾ ಪಾವ್ಲಿಕೊವಾಸ್ಕೊ ಹಾಗೂ ಮೂರನೇ ಶ್ರೇಯಾಂಕಿತೆ ಭಾರತದ ವೈದೇಹಿ ಚೌಧರಿ ಸಿಂಗಲ್ಸ್​ ವಿಭಾಗದಲ್ಲಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟರು.
ನಗರದ ವಿವಿ ಆವರಣದ ಜಿಲ್ಲಾ ಟೆನಿಸ್​ ಕ್ರೀಡಾಂಗಣದಲ್ಲಿ ಗುರುವಾರ ಪ್ರಧಾನಸುತ್ತಿನ ಸಿಂಗಲ್ಸ್​ ಪ್ರೀಕ್ವಾರ್ಟರ್​ಫೈನಲ್​ನಲ್ಲಿ ಅಗ್ರಶ್ರೇಯಾಂಕಿತೆ ಲಿಥುವೇನಿಯಾದ ಜಸ್ಟಿನಾ ಮಿಕುಲ್ಸ್ಕೈಟ್‌​ 0-6, 6-3. 6-1 ಸೆಟ್​ಗಳಿಂದ ಪೋಲೆಂಡ್​ನ ಜುಝುನ್ನಾ ಕೊಲೊನಸ್​ರನ್ನು ಮಣಿಸಿ ಗೆಲುವಿನ ಓಟ ಮುಂದುವರೆಸಿದರು.
ಮೊದಲ ಸೆಟ್​ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಜುಝುನ್ನಾ 0-6 ರಿಂದ ಅಗ್ರಶ್ರೇಯಾಂಕಿತೆ ಜಸ್ಟಿನಾಗೆ ಆಘಾತ ನೀಡುವ ಸೂಚನೆ ನೀಡಿದರು. ಈ ಆಘಾತದಿಂದ ಚೇತರಿಸಿಕೊಂಡ ಅನುಭವಿ ಜಸ್ಟಿನಾ 6-3, 6-1 ರಿಂದ ಉಳಿದ ಎರಡು ಸೆಟ್​ಗಳಲ್ಲಿ ತಮ್ಮ ಪಾರಮ್ಯ ತೋರಿ ಪಂದ್ಯವನ್ನು ಗೆದ್ದುಕೊಂಡರು.
ಎರಡನೇ ಶ್ರೇಯಾಂಕಿತ ಪೋಲೆಂಡ್​ನ ಜುಝಾನ್ನಾ ಪಾವ್ಲಿಕೋವ್ಸಾ 6-2, 6-4 ನೇರ ಸೆಟ್​ಗಳಿಂದ ಭಾರತದ ಸೊನಾಲ್​ ಪಾಟೀಲ್​ ವಿರುದ್ಧ ಜಯಗಳಿಸಿದರು. ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಸೊನಾಲ್​ ಉತ್ತಮ ನಿರ್ವಹಣೆ ತೋರಿದರಾದರು ಪಾವ್ಲಿಕೋವ್ಸಾ ಬ್ಯಾಕ್​ಹ್ಯಾಂಡ್​ ಹೊಡೆತಗಳ ಮುಂದೆ ನಿರುತ್ತರಾದರು.
ವೈದೇಹಿ, ಝೀಲ್​ ಗೆಲುವಿನ ಓಟ: ಮೂರನೇ ಶ್ರೇಯಾಂಕಿತೆ ಭಾರತದ ವೈದೇಹಿ ಚೌಧರಿ ಹಾಗೂ ನಾಲ್ಕನೇ ಶ್ರೇಯಾಂಕದ ಝೀಲ್​ ದೇಸಾಯಿ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರೆಸಿದ್ದು ಅಂತಿಮ 8ರ ಘಟ್ಟಕ್ಕೆ ಪ್ರವೇಶಿಸಿದರು.
ವೈದೇಹಿ 6-2, 6-2 ನೇರ್​ ಸೆಟ್​ಗಳಿಂದ ಟೂರ್ನಿಯ ಭರವಸೆಯ ಆಟಗಾರ್ತಿ ಮಧುರಿಮಾ ಸಾವಂತ್​ರನ್ನು ಮಣಿಸಿದರು. ಆಕ್ರಮಣಕಾರಿ ಆಟ ಪ್ರದರ್ಶಿಸಿದ ವೈದೇಹಿ ಪಂದ್ಯದಲ್ಲಿ ಸಂಪೂರ್ಣ ಹಿಡಿತಸಾಧಿಸಿದರು. 4ನೇ ಶ್ರೇಯಾಂಕದ ಅನುಭವಿ ಆಟಗಾರ್ತಿ ಝೀಲ್​ ದೇಸಾಯಿ 6-2, 6-3 ರಿಂದ ಮತ್ತೊಬ್ಬ ಭಾರತೀಯ ಭರವಸೆ ಆಟಗಾರ್ತಿ ಜೆನ್ನಿಫರ್​ ಲುಯಿಖಾಮ್​ರನ್ನು ಸೋಲಿಸಿ ಕ್ವಾರ್ಟರ್ ಫೈನಲ್​ ಪ್ರವೇಶಿಸಿದರು.
ಯಾಶಿನಾ ಕಣದಿಂದ ನಿವೃತ್ತಿ : ರಷ್ಯಾದ ಕ್ಸೆನಿಯಾ ಲಸ್ಕೊಟೋವಾ ಎರಡು ಗಂಟೆಗಳ ಕಾಲ ನಡೆದ ಕಠಿಣಹೋರಾಟದಲ್ಲಿ ಭಾರತದ ಸಂದೀಪ್ತಿ ಸಿಂಗ್​ ರಾವ್​ ವಿರುದ್ಧ ಗೆಲುವಿನ ನಗೆಬೀರಿದರು.
ಕ್ಸೆನಿಯಾ 6-4, 6-2 ಸೆಟ್​ಗಳಿಂದ ಸಂದೀಪ್ತಿ ವಿರುದ್ಧ ಜಯಗಳಿಸಿದ್ದು ಜಿದ್ದಾಜಿದ್ದಿನಿಂದ ಕೂಡಿದ್ದ ಹೋರಾಟದಲ್ಲಿ ಕ್ಸೆನಿಯಾ ಸಾಕಷ್ಟು ಬೆವರು ಹರಿಸಬೇಕಾಯಿತು.
ಆರನೇ ಶ್ರೇಯಾಂಕದ ರಷ್ಯಾ ಆಟಗಾರ್ತಿ ಎಕಟೆರಿನಾ ಯಾಶಿನಾ ಭುಜದ ಗಾಯದಿಂದಾಗಿ ನಿವೃತ್ತಗೊಂಡಿದ್ದರಿಂದ ಭಾರತದ ಕಶಿಸ್​ ಭಾಟಿಯಾ ಕ್ವಾರ್ಟರ್ ಫೈನಲ್​ ಹಾದಿ ಸುಗಮವಾಯಿತು. ಅಗ್ರಶ್ರೇಯಾಂಕಿತರು ಅಂತಿಮ 8ರ ಘಟ್ಟಕ್ಕೆ ಪ್ರವೇಶ ಪಡೆದಿದ್ದು ತುಮಕೂರು ಓಪನ್​ ರೋಚಕ ಪಂದ್ಯಗಳಿಗೆ ಸಾಕ್ಷಿಯಾಗಲಿದೆ.