ನಜ್ಜುಗುಜ್ಜಾಗಿರುವ ಕ್ರೂಸರ್.
- ಏಳು ಜನರಿಗೆ ಗಂಭೀರ ಗಾಯ
- ಕೊಪ್ಪಳ ಜಿಲ್ಲೆ ಕುಕನೂರು ಮೂಲದವರು
- ನೆಲಹಾಲ್ ಬಳಿ ಅಪಘಾತ
ತುಮಕೂರು: ಶಬರಿಮಲೈ ಅಯ್ಯಪ್ಪಸ್ವಾಮಿ ದರ್ಶನ ಮುಗಿಸಿಕೊಂಡು ಊರಿಗೆ ಮರಳುತ್ತಿದ್ದ 10 ಜನರ ಅಯ್ಯಪ್ಪಸ್ವಾಮಿ ಭಕ್ತರಿದ್ದ ಕ್ರೂಸರ್ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶುಕ್ರವಾರ ನಸುಕಿನಲ್ಲಿ ಜರುಗಿದೆ.
ರಾಷ್ಟ್ರೀಯ ಹೆದ್ದಾರಿ 48ರ ತುಮಕೂರು ಸಮೀಪದ ನೆಲಹಾಲ್ ಬಳಿ ಬೀಕರ ಅಪಘಾತ ಸಂಭವಿಸಿದ್ದು ಅಯ್ಯಪ್ಪ ಮಾಲಾಧಾರಿಯಾಗಿದ್ದ 6 ವರ್ಷದ ಬಾಲಕಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಚಾಲಕ ಸೇರಿದಂತೆ ಗಾಯಗೊಂಡಿದ್ದ 7 ಜನರಿಗೆ ತುಮಕೂರು ಜಿಲ್ಲಾಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.
ಮೃತಪಟ್ಟವರನ್ನು ಕೊಪ್ಪಳ ಜಿಲ್ಲೆ ಕುಕನೂರು ಮೂಲದ ಗವಿಸಿದ್ದಪ್ಪ (28), ಮಾರತಪ್ಪ (45), ವೆಂಕಟೇಶಪ್ಪ (30) ಹಾಗೂ ಸಾಕ್ಷಿ (7) ಎಂದು ಗುರುತಿಸಲಾಗಿದೆ. ಗದ್ದಿಗೆರೆ ತಾಂಡದ ಪ್ರಶಾಂತ್, ಕುಕ್ಕನೂರು ಪ್ರವಿಣ್ಕುಮಾರ್, ರಾಜಪ್ಪ, ಹುಲಿಗಪ್ಪ, ರಾಕೇಶ್, ತಿರುಪತಿ ಹಾಗೂ ಗತ್ತಿಗೇರಿಯ ಶ್ರೀನಿವಾಸ್ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಜನವರಿ 5ರಂದು ಕುಕನೂರು ಮೂಲದ 10 ಅಯ್ಯಪ್ಪ ಮಾಲಾಧಾರಿಗಳು ಚಾಲಕನೊಂದಿಗೆ ಕ್ರೂಸರ್ ವಾಹನದಲ್ಲಿ ಶಬರಿಮಲೈಗೆ ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದರು. ಶಬರಿಮಲೈನಲ್ಲಿ ಅಯ್ಯಪ್ಪನ ದರ್ಶನ ಪಡೆದು ತಮಿಳುನಾಡಿನ ಪಳನಿಯಿಂದ ಊರಿಗೆ ವಾಪಸ್ಸಾಗುವಾಗ ತುಮಕೂರು ಬಿಟ್ಟು ಶಿರಾ ಮಾರ್ಗವಾಗಿ ತೆರಳುತ್ತಿದ್ದಾಗ ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಅಪ್ಪಳಿಸಿ ಭೀಕರ ಅಪಘಾತ ಸಂಭವಿಸಿದೆ.
ಅಪಘಾತ ನಡೆದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳ ಚಾಲಕರು ಕೂಡಲೇ ನೆರವಿಗೆ ಧಾವಿಸಿಬಂದರು. ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಲು ನೆರವಾಗಿದ್ದಾರೆ. ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಎಎಸ್ಪಿಗಳಾದ ಗೋಪಾಲ್, ಪುರುಷೋತ್ತಮ್, ಡಿವೈಎಸ್ಪಿ ಚಂದ್ರಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದೇವ ಭಕ್ತ ತಂದೆಯ ತೋಳಿನಲ್ಲಿಯೇ ಇದ್ದ ಸಾಕ್ಷಿ
ಅಯ್ಯಪ್ಪನ ಅಪಾರ ಭಕ್ತನಾಗಿದ್ದ ಹುಲಿಗಪ್ಪ ಕಳೆದ ಎರಡು ವರ್ಷದಿಂದಲೂ ಮಗಳು ಸಾಕ್ಷಿಯೊಂದಿಗೆ ಮಾಲೆ ಧರಿಸಿಕೊಂಡು ಶಬರಿಮಲೈಗೆ ತೆರಳಿ ದೇವರ ದರ್ಶನ ಮಾಡಿದ್ದರು. ಶುಕ್ರವಾರ ಕೂಡ ಶಬರಿಮಲೈಯಿಂದಲೂ ತನ್ನ ಮಗಳು ಸ್ವಾತಿಯನ್ನು ತೊಡೆಯ ಮೇಲೆ ಕೂರಿಸಿಕೊಂಡೇ ಕ್ರೂಸರ್ನ್ನ ಮುಂಬದಿ ಸೀಟಿನಲ್ಲಿ ಕುಳಿತಿದ್ದರು.
ಎಲ್ಲರೂ ನಿದ್ದೆಯ ಮಂಪರಿನಲ್ಲಿದ್ದಾಗ ಕೇಳಿದ ಶಬ್ಧಕ್ಕೆ ಎಚ್ಚರವಾಗುವಷ್ಟದಲ್ಲಿ ತಂದೆಯ ಎದೆಯ ಮೇಲೆ ಮಲಗಿದ್ದ ಸಾಕ್ಷಿ ಹಾರಿ ಲಾರಿಗೆ ಅಪ್ಪಳಿಸಿದ್ದು ತಂದೆಗೆ ಬರಸಿಡಿಲಿನಂತೆ ಘಾಸಿಮಾಡಿತ್ತು. ಅಪಘಾತದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಬಚಾವಾಗಿದ್ದ ಹುಲಿಯಪ್ಪ ಹಿರಿ ಮಗಳನ್ನು ಕಳೆದುಕೊಂಡು ಕಂಗಾಲಾಗಿದ್ದರು. ಬಂದ ದು@ಖವನ್ನು ನುಂಗಿಕೊಂಡು ಏನು ಹೇಳಲಾಗದೆ ಜಿಲ್ಲಾಸ್ಪತ್ರೆಯ ಹಾಸಿಗೆಯ ಮೇಲೆ ಮಗಳಿಗಾಗಿ ಸುರಿಸುತ್ತಿದ್ದ ಕಣ್ಣೀರಿನ ಕಟ್ಟೆ ಊರಿನಿಂದ ಸಂಬಂಧಿಕರು ಬಂದ ಕೂಡಲೇ ಹೊಡೆದಿತ್ತು. ದೇವರ ದರ್ಶನಕ್ಕೆ ತೆರಳಿದ್ದವರೆಲ್ಲಾ ಶವವಾಗಿ ಮಲಗಿದ್ದನ್ನು ಕಂಡು ಚೀರುತ್ತಿದ್ದ ಸಂಬಂಧಿಕರನ್ನು ಕಂಡು ಅಲ್ಲಿದ್ದವರೆಲ್ಲರ ಕಣ್ಣಾಲಿಗಳೂ ತೇವವಾಗಿದ್ದವು.