ತುಮಕೂರಿನಲ್ಲಿ ಮನೆಬಾಗಿಲಿಗೆ ಇ-ಖಾತಾ ಆಂದೋಲನಕ್ಕೆ ಪಾಲಿಕೆ ಆಯುಕ್ತೆ ಬಿ.ಶುಭ ಚಾಲನೆ ನೀಡಿದರು.  
ತುಮಕೂರು

ಮನೆಬಾಗಿಲಿಗೆ ಇ-ಖಾತಾ

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ ಆಯುಕ್ತೆ ಬಿ.ಶುಭ
  • ವಿಶೇಷ ಅಭಿಯಾನಕ್ಕೆ ಚಾಲನೆ
  • ಮೊದಲ ದಿನ 72 ಇ-ಆಸ್ತಿ ಪತ್ರ ವಿತರಣೆ
ತುಮಕೂರು:ಮಹಾನಗರ ಪಾಲಿಕೆ ಹೊಸ ಇತಿಹಾಸ ಬರೆಯುವತ್ತ ಹೆಜ್ಜೆ ಇಟ್ಟಿದೆ. ಇ&ಖಾತೆಗಾಗಿ ಜನರನ್ನು ಹೈರಾಣಾಗಿಸಿದ್ದ ಪಾಲಿಕೆ ಸಿಬ್ಬಂದಿ ರಾಜ್ಯದಲ್ಲೇ ಪ್ರಥಮ ಎಂಬಂತೆ ಮನೆಬಾಗಿಲಿಗೆ ಇ&ಖಾತೆ ತಲುಪಿಸುವ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿತು. ಮೊದಲ ದಿನವೇ 72 ಇ-ಖಾತೆಗಳನ್ನು ಮನೆ ಬಾಗಿಲಿಗೆ ತೆರಳಿ ನೀಡಲಾಯಿತು. 125 ಹೊಸದಾಗಿ ಇ&ಖಾತೆಗೆ ಅರ್ಜಿ ಸ್ವೀಕರಿಸಿದ್ದು 42 ಅರ್ಜಿಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ.
ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ಪುತ್ಥಳಿ ಮುಂಭಾಗ ವಾಹನದಲ್ಲಿ ಇ- ಆಸ್ತಿ ಆಂದೋಲನಕ್ಕೆ ಪಾಲಿಕೆ ಆಯುಕ್ತೆ ಬಿ.ಶುಭ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶುಭ, ಇದು ಮಹಾನಗರ ಪಾಲಿಕೆಯ ಮಹತ್ತರವಾದ ಯೋಜನೆ. ಸಾರ್ವಜನಿಕರ ಮನೆ ಬಾಗಿಲಿಗೆ ಈ ಯೋಜನೆ ಪ್ರಯೋಜನ ತಲುಪಿಸುವ ಕೆಲಸ ಮಾಡಲು ಇದೊಂದು ಪ್ರಮುಖ ಕಾರ್ಯವಾಗಿದೆ ಎಂದರು.
ಹಿರಿಯ ನಾಗರಿಕರು, ಮಹಿಳೆಯರು ಪಾಲಿಕೆ ಕಚೇರಿಗೆ ಅಲೆದಾಡಬಾರದು ಎಂಬ ಉದ್ದೇಶದಿಂದ ನಾಲ್ಕು ಚಕ್ರದ ವಾಹನದ ಮೇಲೆ ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ಅವರಿಂದ ಅರ್ಜಿ ಪಡೆದು ನಂತರ ಪಾಲಿಕೆ ಕಚೇರಿಯಲ್ಲಿ ಇ-&ಆಸ್ತಿ ನೋಂದಣಿ ಮಾಡಿ ಮತ್ತೆ ಅರ್ಜಿದಾರರ ಮನೆಗೆ ತೆರಳಿ ಇ-ಖಾತೆ ನೀಡುವ ಕಾರ್ಯ ಮಾಡಲಾಗುತ್ತಿದೆ. ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ನಗರದ ನಾಗರಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಕಚೇರಿಗೆ ಬಂದಾಗ ಅಧಿಕಾರಿಗಳು ಸಿಗುವುದಿಲ್ಲ. ಹಾಗಾಗಿ ಪಾಲಿಕೆಯೇ ನಾಗರಿಕರ ಮನೆ ಬಾಗಿಲಿಗೆ ತೆರಳಿ ಇ-ಆಸ್ತಿ ಆಂದೋಲನ ನಡೆಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಹ ಪ್ರತಿ ನಾಗರಿಕರ ಮನೆ ಬಾಗಿಲಿಗೆ ಹೋಗಿ ಇ-ಖಾತೆ ನೋಂದಣಿ ಮಾಡಿಕೊಡುವಂತೆ ಸೂಚನೆ ನೀಡಿದ್ದಾರೆ. ಹಾಗಾಗಿ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇ-ಆಸ್ತಿ ನೋಂದಣಿಗಾಗಿ ಕ್ರಯಪತ್ರ, ದಾನಪತ್ರ, ವಿಭಾಗಪತ್ರ, ವಿಲ್​ ಪತ್ರ, ಭೂಪರಿವರ್ತನಾ ಆದೇಶ ಪ್ರತಿ, ಲೇಔಟ್​ ಪ್ರತಿ ಅಥವಾ ಎಂ.ಎ.ಆರ್​.19ರ ನಕಲು ಪ್ರತಿ, 01-04-2004 ರಿಂದ ಪ್ರಸ್ತುತ ಸಾಲಿನವರೆಗೆ ಇ.ಸಿ.-15, ಸ್ವತ್ತಿನ ಮಾಲೀಕರ ಭಾವಚಿತ್ರ, ಆಧಾರ್​ ಕಾರ್ಡ್​ ಮತ್ತು ಪ್ರಸ್ತುತ ಸಾಲಿನ ಕಂದಾಯ ಪಾವತಿಸಿರುವ ರಸೀದಿ ಸೇರಿದಂತೆ ಸ್ವತ್ತಿಗೆ ಅವಶ್ಯವಿರುವ ದಾಖಲೆಗಳನ್ನು ತರುವಂತೆಯೂ ಇದೇ ವೇಳೆ ಸಾರ್ವಜನಿಕರಿಗೆ ಪಾಲಿಕೆ ಆಯುಕ್ತೆ ಶುಭ ಅವರು ತಿಳಿಸಿ, ಅರ್ಜಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಉಪಆಯುಕ್ತ ಮನುಕುಮಾರ್​, ವಲಯ ಆಯುಕ್ತ ನಾಗರಾಜು, ಕಂದಾಯ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ಪಾಲ್ಗೊಂಡಿದ್ದರು.
125 ಅರ್ಜಿ ಸ್ವೀಕಾರ
ವಾರ್ಡ್​ ನಂ. 31 ರಿಂದ 35ರ ವ್ಯಾಪ್ತಿಯಲ್ಲಿ ಬರುವ ಬಡಾವಣೆಗಳ ನಾಗರಿಕರಿಗಾಗಿ ಸಿದ್ದರಾಮೇಶ್ವರ ಬಡಾವಣೆಯ ಬಸವ ಭವನದಲ್ಲಿ ಇ-ಆಸ್ತಿ ಆಂದೋಲನ ನಡೆಸಿದ್ದು, ಸಾರ್ವಜನಿಕರಿಂದ 125 ಅರ್ಜಿಗಳನ್ನು ಸ್ವೀಕರಿಸಲಾಯಿತು. ಇದರಲ್ಲಿ 42 ಅರ್ಜಿಗಳನ್ನು ಅಪ್​ಲೋಡ್​ ಮಾಡಿದ್ದು ಮೊದಲ ದಿನ 72 ಇ&ಖಾತೆಗಳನ್ನು ಮನೆಬಾಗಿಲಿಗೆ ತಲುಪಿಸಲಾಯಿತು. ಕ್ಯಾತಸಂದ್ರದ ಎಲ್​ಆರ್​ ಬಂಡೇಯ ವಾಸಿಗಳಿಗೆ 20 ಹಕ್ಕುಪತ್ರಗಳನ್ನು ನೀಡಲಾಯಿತು.