ತುಮಕೂರು ಪಾಲಿಕೆ ತೆರಿಗೆ ಹೆಚ್ಚಳ ಬಗ್ಗೆ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ಜಿ.ಎಸ್​.ಬಸವರಾಜು, ಜಿ.ಕೆ.ಶ್ರೀನಿವಾಸ್​ ಜನತಾದರ್ಶನದಲ್ಲಿ ಮನವಿ ಮಾಡಿದರು.  
ತುಮಕೂರು

10 ರೂ., ಹೆಚ್ಚಿಸೋಕ್ಕೆ ಹಿಂದೆಮುಂದೆ ನೋಡ್ತೇವೆ..!

ಪ್ರಮುಖ ಮುಖ್ಯಾಂಶಗಳು

  • ಪಾಲಿಕೆ ತೆರಿಗೆ ಹೆಚ್ಚಳಕ್ಕೆ ಸಚಿವ ಪರಂ ಬೇಸರ
  • ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆ
  • ಆಯುಕ್ತೆ ಬಿ.ಶುಭ ಸಮಜಾಯಿಷಿ
ತುಮಕೂರು: ತುಮಕೂರು ಮಹಾನಗರ ಪಾಲಿಕೆ ತೆರಿಗೆ ಹೆಚ್ಚಿಸಿರುವ ಬಗ್ಗೆ ರಾಷ್ಟ್ರೀಯ ಮಾನವ ಪರಿಸರ ಸಂರಕ್ಷಣಾ ಪಡೆಯ ಜಿ.ಎಸ್​.ಬಸವರಾಜು, ಜಿ.ಕೆ.ಶ್ರೀನಿವಾಸ್​ ಜನತಾದರ್ಶನದಲ್ಲಿ ಗಮನಸೆಳೆದಾಗ ಸಚಿವ ಜಿ.ಪರಮೇಶ್ವರ್​ ಕುಪಿತಗೊಂಡರು.
ಏನ್ರೀ ಕಮೀಷನರ್​, ಸರ್ಕಾರವೇ 10 ರೂ., ಹೆಚ್ಚಿಸುವಾಗ ಹಿಂದೆಮುಂದೆ ನೋಡುತ್ತೇ, ನೀವು ಹೇಗ್ರೀ ತೆರಿಗೆ ಹೆಚ್ಚಳ ಮಾಡಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಆಯುಕ್ತೆ ಬಿ.ಶುಭ ಸಚಿವರಿಗೆ ಸಮಜಾಯಿಷಿ ನೀಡಿದರು.
ಜಿಲ್ಲಾಮಟ್ಟದ ಜನತಾದರ್ಶನದಲ್ಲಿ ಸಮಸ್ಯೆಗಳ "ಅರ್ಜಿ'ಯ ಮಹಾಪೂರವೇ ಹರಿದುಬಂದವು. ನಗರ ಕೇಂದ್ರ ಗ್ರಂಥಾಲಯದ "ಏಸಿ' ಸಭಾಂಗಣದಲ್ಲಿ ಏರ್​ ಕಂಡೀಷನ್​ ಕೈಕೊಟ್ಟಿದ್ದರಿಂದ ಬಿಸಿಲ ಧಗೆಗೆ ಸಂಪೂರ್ಣ ಬೆವತರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್​ ಸತತ 3 ಗಂಟೆಗಳ ಕಾಲ ನಡೆದ ಜನತಾದರ್ಶನದಲ್ಲಿ ಒಮ್ಮೆಯೂ ತಾಳ್ಮೆ ಕಳೆದುಕೊಳ್ಳಲಿಲ್ಲ. ಯಾರ ಮೇಲೂ ರೇಗಲಿಲ್ಲ. ಸಮಾಧಾನಚಿತ್ತದಿಂದ ಅರ್ಜಿಗಳನ್ನು ಸ್ವೀಕರಿಸಿ ಅದರ ಮೇಲೆ ಷರಾ ಬರೆದು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು "ಏಯ್​ ತಹಸೀಲ್ದಾರ್​ ನೋಡಪ್ಪ, ಇದನ್ನು ಬಗೆಹರಿಸಪ್ಪ' ಅಂತ ಹೇಳುವ ಮೂಲಕ ದೊರೆ ದೂರುಗಳ ಹಿಡಿದು ಬಂದವರ ಮನವಿಗೆ ಸ್ಪಂದಿಸಿದರು.