ಲೋಕಾ ಬಲೆಗೆ ಬಿದ್ದ ಲಿಂಗರಾಜು
- 1.25 ಲಕ್ಷ ರೂ., ಗೆ ಲಂಚಕ್ಕೆ ಬೇಡಿಕೆ
- ತುಮಕೂರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ
- ಲಂಚ ಪಡೆಯುವ ವೇಳೆ ಬಲೆಗೆ ಬಿದ್ದ ಸಹಾಯಕ
ತುಮಕೂರು: ಸಣ್ಣ ಉದ್ಯಮಗಳಿಗೆ ನೀಡುವ ಸರ್ಕಾರದ ಸಹಾಯಧನ ಮಂಜೂರು ಮಾಡಲು ಉದ್ಯಮಿಯಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಡಿ.ಕೆ.ಲಿಂಗರಾಜು ಹಾಗೂ ಅವರ ಸಹಾಯಕ ಎನ್.ಎಸ್. ಪ್ರಸಾದ್ ಲಂಚ ಪಡೆಯುವ ಸಿಕ್ಕಿಬಿದ್ದಿದ್ದಾರೆ. ವಿಜಯನಗರದ ಕೈಗಾರಿಕೋದ್ಯಮಿ ಎಂ.ಎಸ್.ಚನ್ನಬಸವೇಶ್ವರ್ ಬಳಿ ಗುರುವಾರ ಮಧ್ಯಾಹ್ನ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿಯ ಮುಂಭಾಗ 1.15 ಲಕ್ಷ ರೂ., ಲಂಚವನ್ನು ಸಹಾಯಕ ಪ್ರಸಾದ್ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ವಸಂತನರಸಾಪುರ ಕೈಗಾರಿಕಾ ಪ್ರದೇಶದ ಎರಡನೇ ಹಂತದಲ್ಲಿ ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ ತಯಾರಿಸುವ ಶಿವಲಿಂಗ ಇಂಡಸ್ಟ್ರೀಸ್ ಕಾರ್ಖಾನೆ ನಡೆಸುತ್ತಿದ್ದ ಚನ್ನಬಸವೇಶ್ವರ್ ಸುಮಾರು ಒಂದು ವರ್ಷದ ಹಿಂದೆ ಆರಂಭವಾದ ಈ ಉದ್ಯಮಕ್ಕೆ ಸರ್ಕಾರದ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಿದ್ದರು. ಸಹಾಯಧನವಾಗಿ 18.75 ಲಕ್ಷ ರೂ., ಮಂಜೂರು ಮಾಡಲು ಜಂಟಿ ನಿರ್ದೇಶಕ ಲಿಂಗರಾಜು 1.25 ಲಕ್ಷ ರೂ., ಲಂಚಕ್ಕೆ ಬೇಡಿಕೆಯಿಟ್ಟಿದ್ದು ಮುಂಗಡವಾಗಿ 10 ಸಾವಿರ ಪಡೆದಿದ್ದರು. ಉಳಿದ ಹಣವನ್ನು ನೀಡಲು ನಿರಾಕರಿಸಿ ಉದ್ಯಮಿ ಚನ್ನಬಸವೇಶ್ವರ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಹಿನ್ನೆಲೆ ಲೋಕಾಯುಕ್ತ ಡಿವೈಎಸ್ಪಿಗಳಾದ ಡಾ. ಕೆ.ಎಂ.ಸಂತೋಷ್, ಎಂ.ಮಂಜುನಾಥ್ ನೇತೃತ್ವದಲ್ಲಿ ಈ ದಾಳಿ ನಡೆಸಿದ್ದು ಲಂಚ ಪಡೆಯುವಾಗಿ ಸಹಾಯಕ ಪ್ರಸಾದ್ ಸಿಕ್ಕಿಬಿದ್ದಿದ್ದ. ಲಂಚ ಬೇಡಿಕೆಯಲ್ಲಿ ಲಿಂಗರಾಜು ಮೊದಲ ಆರೋಪಿಯಾಗಿದ್ದು ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಮುಂದುವರೆಸಲಾಗಿದೆ.