ತುಮಕೂರು ಡಿಸಿ ಕಚೇರಿಗೆ ಬೆದರಿಕೆ ಇ ಮೇಲ್ ಸಂದೇಶ ಕರೆ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದ ಸಿಬ್ಬಂದಿ ಪ್ರತಿ ಕೊಠಡಿಗಳನ್ನು ಇಂಚಿಂಚು ತಪಾಸಿಸಿದರು.
- ಬೆದರಿಕೆ ಇ-ಮೇಲ್ ಸಂದೇಶ
- 3 ಗಂಟೆಗಳ ಕಾಲ ಪೊಲೀಸರ ತಪಾಸಣೆ
- ಹುಸಿ ಬಾಂಬ್ ಕರೆ
ತುಮಕೂರು: "ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶ್ರೀ ಸ್ಫೋಟ. ಎಲ್ಲರನ್ನೂ ಬೇಗ ತೆರವುಗೊಳಿಸಿ'! ಎಂಬ ಬೆದರಿಕೆ ಇ&ಮೇಲ್ ಸಂದೇಶ ಕೆಲಕಾಲ ಜಿಲ್ಲಾಡಳಿತವನ್ನೇ ಸ್ತಬ್ದಗೊಳಿಸಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂಬ ಇ ಮೇಲ್ ಸಂದೇಶವು ಮಂಗಳವಾರ ಬೆಳ್ಳಂಬೆಳಗ್ಗೆ ಆತಂಕ ವಾತಾವರಣ ಸೃಷ್ಟಿಸಿತ್ತು. ಪೊಲೀಸರ ತಪಾಸಣೆ ಬಳಿಕ ಇದೊಂದು ಹುಸಿ ಬಾಂಬ್ ಕರೆ ಎಂಬುದು ಖಾತ್ರಿಯಾಯಿತು.
ಬೆಳ್ಳಂಬೆಳಗ್ಗೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗಾಬರಿ, ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ ಕಚೇರಿಗೆ ತೆರಳಲು ಅವಸರದಲ್ಲಿ ಒಳ ಪ್ರವೇಶಸುತ್ತಿದ್ದ ಡಿಸಿ ಕಚೇರಿ ಸಿಬ್ಬಂದಿ, ಅಧಿಕಾರಿಗಳನ್ನು ಪೊಲೀಸರು ಮುಖ್ಯಗೇಟ್ ಬಳಿಯೇ ತಡೆದಾಗ ಗಲಿಬಿಲಿಗೊಂಡರು. ಅಷ್ಟರಲ್ಲಾಗಲೇ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ತಪಾಸಣೆಯಲ್ಲಿ ತೊಡಗಿದ್ದವು. ಅಗ್ನಿಶಾಮಕ ದಳ, ಪೊಲೀಸ್ ತುಕುಡಿ ಸಹ ಬಂದಿಳಿದಿತ್ತು. ಸಹಜವಾಗಿ ಪರಿಸ್ಥಿತಿ ಗಾಬರಿಹುಟ್ಟಿಸುವಂತಿತ್ತು.
ಬೆ.6.59ಕ್ಕೆ ಬಂದಿತ್ತು ಬೆದರಿಕೆ ಸಂದೇಶ!
ಜಿಲ್ಲಾಧಿಕಾರಿ ಅಧಿಕೃತ ಇ-ಮೇಲ್ಗೆ ಬೆಳಗ್ಗೆ 6.59ರಲ್ಲಿ ಈ ಬೆದರಿಕೆ ಸಂದೇಶ ಬಂದಿದೆ. ಬೆಳಗ್ಗೆ 8.30ರ ಹೊತ್ತಿಗೆ ಪೊಲೀಸರಿಗೆ ಸುದ್ದಿಮುಟ್ಟಿಸಿದ್ದು ತಕ್ಷಣವೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಎಎಸ್ಪಿ ಪುರುಷೋತ್ತಮ್, ನಗರ ಡಿವೈಎಸ್ಪಿ ಚಂದ್ರಶೇಖರ್, ಡಿಎಆರ್ ಡಿವೈಎಸ್ಪಿ ಪರಮೇಶ್, ನಗರ ಠಾಣೆ ಸಿಪಿಐ ಅವಿನಾಶ್ ಸೇರಿದಂತೆ ಪೊಲೀಸರ ದಂಡೇ ದೌಡಯಿಸಿತ್ತು.
ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ಆಗಮಿಸಿದ ಡಿಎಆರ್ ತಂಡವು ಮೊದಲಿಗೆ ಡಿಸಿ ಕಚೇರಿಗೆ ಪ್ರವೇಶ ರ್ನಿಬಂಧ ಹೇರಿತು. ಅಷ್ಟರಲ್ಲಾಗಲೇ ಕಚೇರಿ ಒಳಗಡೆ ಇದ್ದವರನ್ನು ತೆರವುಗೊಳಿಸಿ ಹೊರಹೋಗುವಂತೆ ಸೂಚನೆ ನೀಡಿತು. ಬೆಳಗ್ಗೆ 9ಕ್ಕೆ ತಪಾಸಣೆ ಆರಂಭಿಸಿದ ಪೊಲೀಸರು ಕಚೇರಿ ಇಂಚಿಂಚು ತಪಾಸಿಸಿದರು.
3 ಗಂಟೆಗು ಹೆಚ್ಚು ಕಾಲ ಪೊಲೀಸರು ನೆಲಮಹಡಿ ಸೇರಿ ಮೂರು ಮಹಡಿಗಳ ಪ್ರತಿ ಕಚೇರಿಯ ಮೂಲೆ, ಮೂಲೆಯನ್ನು ಶೋಧಿಸಿದರು. ಮಧ್ಯಾಹ್ನ 12ರ ಹೊತ್ತಿಗೆ ಶೋಧ ಕಾರ್ಯ ಪೂರ್ಣಗೊಳಿಸಿ ಹೊರಬಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಆತಂಕ ಪಡುವ ಅಗತ್ಯವಿಲ್ಲ. ಇದೊಂದು ಹುಸಿ ಬಾಂಬ್ ಕರೆ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದಂತೆ ಹೊರಭಾಗದಲ್ಲಿದ್ದ ಸರ್ಕಾರಿ ನೌಕರರು, ಮಾಧ್ಯಮದವರು, ಸಾರ್ವಜನಿಕರು ನಿಟ್ಟುಸಿರುಬಿಟ್ಟರು.
ಮೆಟಲ್ ಡಿಟೆಕ್ಟರ್ ಪ್ರತ್ಯಕ್ಷ
ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ ಇಮೇಲ್ ಸಂದೇಶದ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳ ಶೋಧ ಕಾರ್ಯ ಆರಂಭಿಸುತ್ತಿದ್ದಂತೆ ಕಚೇರಿ ಮುಖ್ಯದ್ವಾರದಲ್ಲಿ ಕ್ಷಣಾರ್ಧದಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಯಿತು. ಹ್ಯಾಂಡ್ ಡಿಟೆಕ್ಟರ್ ಹಿಡಿದ ಪೊಲೀಸ್ ಸಿಬ್ಬಂದಿ ಸಹ ಡಿಸಿ ಕಚೇರಿ ಪ್ರವೇಶ ಗೇಟ್ ಬಳಿಯೇ ನಿಂತರು. ಮಧ್ಯಾಹ್ನ 12 ರ ಬಳಿಕ ಅಧಿಕಾರಿಗಳು, ಸಿಬ್ಬಂದಿಯನ್ನು ಕೂಡ ತಪಾಸಣೆಗೊಳಪಡಿಸಿ ಕಚೇರಿ ಒಳಗೆ ಬಿಡಲಾಯಿತು. ಮಧ್ಯಾಹ್ನ ಊಟದ ನಂತರ ಸಾರ್ವಜನಿಕರ ಪ್ರವೇಶಕ್ಕೆ ಅನುವು ಮಾಡಿಕೊಡಲಾಯಿತು.
ತಮಿಳರು, ಪಾಕಸ್ತಾನಿಗಳ ಸೇಡು !
ಜಿಲ್ಲಾಧಿಕಾರಿಗಳ ಅಧಿಕೃತ ಇ&ಮೇಲ್ಗೆ ಬಂದ ಸಂದೇಶದ ಪೂರ್ಣ ವಿವರವು ಇಂಗ್ಲೀಷನಲ್ಲಿತ್ತು. ಕೊನೆಯಲ್ಲಿ ಕನ್ನಡದಲ್ಲಿ "ತಮಿಳರು, ಪಾಕಿಸ್ತಾನಿಗಳು ಸೇಡು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶ್ರೀ ಸ್ಫೋಟ. ಎಲ್ಲರನ್ನೂ ಬೇಗ ತೆರವುಗೊಳಿಸಿ' ಎಂಬುದು ಕನ್ನಡದಲ್ಲಿತ್ತು. ಇದು ಐಪಿ ಬೇಸ್ ವಿಳಾಸದಿಂದ ಬಂದ ಮೇಲ್ ಅಲ್ಲ. ಹಾಗಾಗಿ, ಪೊಲೀಸರು ಇ ಮೇಲ್ ಕಳುಹಿಸಿದವರ ಪತ್ತೆಗೆ ತೀವ್ರ ಶೋಧ ನಡೆಸಬೇಕಿದೆ.
ಬಾಂಬ್ ಬೆದರಿಕೆ ಹಿನ್ನೆಲೆ ಬೆಳಗ್ಗೆ ಕಚೇರಿಗೆ ಬರುತ್ತಿದ್ದ ಸಿಬ್ಬಂದಿಯನ್ನು ಮುಖ್ಯದ್ವಾರದಲ್ಲೇ ತಡೆದು ಒಳಗಡೆ ಪ್ರವೇಶ ರ್ನಿಬಂಧ ಹೇರಿದ್ದರಿಂದ ಡಿಸಿ ಕಚೇರಿ ಸಿಬ್ಬಂದಿ, ಅಧಿಕಾರಿಗಳು ಅಕ್ಕಪಕ್ಕದ ಟೀ ಅಂಗಡಿಗಳನ್ನು ಆಶ್ರಯಿಸುವಂತಾಯಿತು. 2 ಗಂಟೆಗು ಹೆಚ್ಚು ಹೊತ್ತು ಕಾಲ ಗಾಬರಿ, ಆತಂಕದಲ್ಲೇ ಸಿಬ್ಬಂದಿ ಕಾಲಕಳೆದರು. ಸುದ್ದಿ ವಾಹಿನಿಗಳಲ್ಲಿ ಬಾಂಬ್ ಬೆದರಿಕೆ ಸುದ್ದಿ ಕೇಳಿ ಮನೆಯವರು ದೂರವಾಣಿ ಕರೆ ಮಾಡಿ ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಜಿಲ್ಲಾಧಿಕಾರಿ ಅಧಿಕೃತ ಇ ಮೇಲ್ಗೆ ಬೆದರಿಕೆ ಸಂದೇಶ ಬಂದ ಹಿನ್ನೆಲೆ ಬಾಂಬ್ ನಿಷ್ಕ್ರಿಯ ದಳ , ಶ್ವಾನ ದಳದ ಸಿಬ್ಬಂದಿ ತೀವ್ರ ತಪಾಸಣೆ ನಡೆಸಿದ್ದು ಯಾವುದೇ ಆತಂಕ ಪಡುವ, ಅನುಮಾನಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೂ ಇಡೀ ದಿನ ಹೈ ಅರ್ಲಟ್ ಆಗಿದ್ದು ಸುರಕ್ಷತೆ ದೃಷ್ಟಿಯಿಂದ ಕಚೇರಿ ಸಿಬ್ಬಂದಿ, ಸಾರ್ವಜನಿಕರನ್ನು ಸಹ ತಪಾಸಣೆಗೊಳಪಡಿಸಿ ಒಳಬಿಡಲಾಗುವುದು. ಮೆಟಲ್ ಡಿಟೆಕ್ಟರ್ ಸಹ ಅಳವಡಿಸಲಾಗಿದೆ. ಮುನ್ನಚ್ಚರಿಕೆ ವಹಿಸಿದ್ದು ಮೇಲ್ ಕಳುಹಿಸಿದ್ದವರ ಪತ್ತೆಗೆ ಅಗತ್ಯ ಕ್ರಮವಹಿಸಲಾಗಿದೆ.
ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ