ತೃತೀಯ ಸ್ಥಾನ ಪಡೆದ ಜಿ.ಆರ್.ಚಾಲೆಂಜರ್ಸ್ ತಂಡ.
- ತುಮಕೂರು ಬ್ಯಾಡ್ಮಿಂಟನ್ ಲೀಗ್ ಪ್ರಥಮ ಆವೃತ್ತಿ
- ಪವನ್ ಪ್ಯಾಂಥರ್ಸ್ ಕುಣಿಗಲ್ ರನ್ನರ್ ಅಪ್ ಶ್ರೇಯ
- ತೃತೀಯ ಸ್ಥಾನಕ್ಕೆ ಜಿ.ಆರ್.ಚಾಲೆಂಜರ್ಸ್ ತೃಪ್ತಿ
ತುಮಕೂರು: ಪ್ರಥಮ ತುಮಕೂರು ಬ್ಯಾಡ್ಮಿಂಟನ್ ಲೀಗ್ನ ಚಾಂಪಿಯನ್ ಆಗಿ ಶಟಲ್ ಸ್ಟ್ರೈಕರ್ಸ್ ಹೊರಹೊಮ್ಮಿತು. ಟೀಮ್ ಸ್ಮಾಷೋಲಿಕ್ಸ್ ಮತ್ತು ವಿಂಟೇಜ್ ಇವೆಂಟ್ಸ್ ವತಿಯಿಂದ ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ (ಟಿಬಿಎ)ಯಲ್ಲಿ ಭಾನುವಾರ ಸಂಜೆ ಶಟಲ್ ಸ್ಟ್ರೈಕರ್ಸ್ ರೋಚಕ ಹಣಾಹಣಿಯಿಂದ ಕೂಡಿದ್ದ ಫೈನಲ್ ನಲ್ಲಿ ಪವನ್ ಪ್ಯಾಂಥರ್ಸ್ ಕುಣಿಗಲ್ ತಂಡದ ವಿರುದ್ಧ ಗೆಲುವು ಸಾಧಿಸಿ ಪ್ರಥಮ ಬಹುಮಾನದೊಂದಿಗೆ 70 ಸಾವಿರ ನಗದು ಹಾಗೂ ಟ್ರೋಫಿ ಮುಡಿಗೇರಿಸಿಕೊಂಡಿತು.
ಕುಣಿಗಲ್ ತಂಡ ರನ್ನರ್ ಅಪ್ ಪ್ರಶಸ್ತಿಯೊಂದಿಗೆ 50 ಸಾವಿರ ನಗದು, ಟ್ರೋಫಿ ಗೆದ್ದುಕೊಂಡಿತು.
8 ತಂಡಗಳು ಭಾಗವಹಿಸಿದ್ದ ಲೀಗ್ನಲ್ಲಿ ನಾಲ್ಕು ತಂಡಗಳು ನಾಕೌಟ್ ಹಂತ ಪ್ರವೇಶಿಸಿದ್ದವು. ಸೆಮಿಫೈನಲ್ ನಲ್ಲಿ ಶಟಲ್ ಸ್ಟ್ರೈಕರ್ಸ್, ನಿಟ್ಟೂರಿನ ಉಲ್ಫ್ಫ್ಯಾಕ್ಸ್ ತಂಡದ ವಿರುದ್ಧ ಜಯಗಳಿಸಿ ಫೈನಲ್ ಪ್ರವೇಶಿಸಿತು. ಇನ್ನೊಂದು ಗುಂಪಿನಿಂದ ಪವನ ಪ್ಯಾಂಥರ್ಸ್ ಕುಣಿಗಲ್ ತಂಡ ತುಮಕೂರಿನ ಜಿ.ಆರ್.ಚಾಲೆಂಜರ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೆ ತಲುಪಿತು.
ಸೆಮೀಸ್ ಸೋತ ತಂಡಗಳ ನಡುವೆ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಉಲ್ಫ್ಫ್ಯಾಕ್ಸ್ ವಿರುದ್ಧ ಜಿ.ಆರ್. ಚಾಲೆಂಜರ್ಸ್ ತಂಡ ಗೆಲುವು ಸಾಧಿಸಿ 30 ಸಾವಿರ ರೂ., ನಗದು ಹಾಗೂ ಟ್ರೋಫಿ ಯನ್ನು ತನ್ನದಾಗಿಸಿಕೊಂಡಿತು.
ಮಾಜಿ ಕಾಪೋರ್ರೇಟರ್ ಮಂಜುಳಾ, ಟಿಬಿಎನ ಪ್ರವಿಣ್, ಎನ್ಎಸ್ ಸಿಲ್ಕ್ಸ್ ನ ಎನ್.ಎಸ್.ಶಂಕರ್, ಹಿರಿಯ ಆಟಗಾರರಾದ ಸೋಮೇಶ್, ಲಿಖಿತ್, ವರುಣ್ ರೆಡ್ಡಿ, ಜೋತಿ ಪ್ರಕಾಶ್, ಎನ್.ವಿ.ಸ್ವಾಮಿ, ಗೌತಮ್ ಮತ್ತಿತರರು ಉಪಸ್ಥಿತರಿದ್ದರು.
8 ತಂಡ ಭಾಗಿ: ಕುಣಿಗಲ್ ಪ್ಯಾಂಥರ್ಸ್, ಜಿ.ಆರ್.ಚಾಲೆಂಜರ್ಸ್, ಉಲ್ಫ್ ಫ್ಯಾಕ್ಸ್, ಥಂಡರ್ ಸ್ಮಾಷರ್ಸ್, ತುಮಕೂರು ಪವರ್ ಸ್ಮಾಷರ್ಸ್, ಷಟಲ್ ಸ್ಟ್ರೈಕರ್ಸ್,ಗುಬ್ಬಿ ವಾರಿಯರ್ಸ್, ಎಸ್.ಎಸ್.ಸ್ಟ್ರೈಕರ್ಸ್ ಒಟ್ಟು ಜಿಲ್ಲೆಯ 8 ತಂಡಗಳು ಲೀಗ್ನಲ್ಲಿ ಸೆಣಸಾಡಿದವು.