ತುಮಕೂರು ವಿಶ್ವವಿದ್ಯಾಲಯದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಹಾಗೂ ವಿವಿ ಕಲಾ ಕಾಲೇಜಿನ ಆಯೋಜಿಸಿದ್ದ ಸಹಯೋಗದಲ್ಲಿ ಪ್ರೇರಣಾ ಉಪನ್ಯಾಸ- ಕಾರ್ಯಕ್ರಮವನ್ನು ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಉದ್ಘಾಟಿಸಿದರು. ಡಾ.ಚಿಂತಾಮಣಿ ಕೊಡ್ಲೆಕೆರೆ, ಪ್ರೊ. ಎಂ. ವೆಂಕಟೇಶ್ವರಲು, ಪ್ರೊ.ಎಚ್.ಎಸ್.ಮೋಹನ್, ಪ್ರೊ. ಜಿ. ಸುದರ್ಶನ ರೆಡ್ಡಿ, ಡಾ. ಜಿ. ದಾಕ್ಷಾಯಿಣಿ ಇದ್ದರು.
- ವಿವಿಯಲ್ಲಿ ಪ್ರೇರಣಾ ಉಪನ್ಯಾಸ
- ಯುವಜನತೆಗೆ ಬೇಕಾದ ಮೌಲ್ಯಗಳು
- ಸಾಹಿತಿ ಡಾ.ಚಿಂತಾಮಣಿ ಕೊಡ್ಲೆಕೆರೆ
ತುಮಕೂರು: ಯುವಜನರಲ್ಲಿ ಹುಸಿ ಸಂಕಲ್ಪಕ್ಕಿಂತ ದೃಢ ಸಂಕಲ್ಪವಿರಬೇಕು. ಗುರು-ಹಿರಿಯರ ನಡೆ ಹಾಗೂ ವರ್ತನೆಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಬೇಕು ಎಂದು ಸಾಹಿತಿ ಡಾ.ಚಿಂತಾಮಣಿ ಕೊಡ್ಲೆಕೆರೆ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಪ್ರೇರಣಾ ಉಪನ್ಯಾಸ ಕಾರ್ಯಕ್ರಮ ಸಮಿತಿ ಹಾಗೂ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರೇರಣಾ ಉಪನ್ಯಾಸ-: ಯುವ ಜನತೆಗೆ ಬೇಕಾದ ಜೀವನ ಮೌಲ್ಯಗಳು ಮತ್ತು ಸಾಹಿತ್ಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಯಾರೂ ಕೂಡ ರಾತ್ರೋರಾತ್ರಿ ದೊಡ್ಡವರಾಗಲು ಅಥವಾ ಪ್ರಸಿದ್ಧರಾಗಲು ಸಾಧ್ಯವಿಲ್ಲ. ನಿಷ್ಠೆ, ಏಕಾಗ್ರತೆ ಮತ್ತು ದೀರ್ಘಕಾಲದ ತಪಸ್ಸಿನಿಂದ ಮಾತ್ರ ಶ್ರೇಷ್ಠತೆ ಸಾಧ್ಯ ಎಂದರು.
ಮೌಲ್ಯ ಎಂದರೆ ಕೇವಲ ಭೌತಿಕ ಬೆಲೆಯಲ್ಲ. ಚಿಂತನೆ, ಭಾವನೆ, ಸತ್ಯ ಮತ್ತು ಪ್ರಾಮಾಣಿಕತೆಯನ್ನು ಗೌರವಿಸುವುದೇ ನಿಜವಾದ ಮೌಲ್ಯ. ಕೇವಲ ಒಂದು ಮೌಲ್ಯದಿಂದ ನಮಗೆಲ್ಲಾ ಮೌಲ್ಯಗಳು ಲಭ್ಯವಾಗಬೇಕಾದರೆ ಅದು ನಮ್ಮ ಪ್ರಾಮಾಣಿಕತೆಯಿಂದ ಮಾತ್ರ ಸಾಧ್ಯ. ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳ ಅರಿವು ಮೂಡಬೇಕಿದೆ. ಪಠ್ಯದ ಮೂಲಕವೇ ಮೌಲ್ಯಗಳನ್ನು ಅಳವಡಿಸಿಕೊಂಡು ಪರೀಕ್ಷಿಸಿಕೊಳ್ಳಬೇಕು. ವಿಚಾರದ ಬೆಂಬಲವಿಲ್ಲದ ಮೌಲ್ಯಗಳು ಕುರುಡು, ಆದರೆ ಭಾವನೆ ಮತ್ತು ಕ್ರಿಯೆಗಳ ಮೂಲಕ ಪಡೆಯುವ ಮೌಲ್ಯಗಳು ಬೆಳಕಿನಂತಿರುತ್ತವೆ ಎಂದು ತಿಳಿಸಿದರು.
ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಾತನಾಡಿ, ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿಯೂ ಜ್ಞಾನದ ಆಹಾರವನ್ನು ನೀಡುತ್ತಿದೆ. ಆದರೆ, ಇಂದಿನ ದಿನಗಳಲ್ಲಿ ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ. ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರು ವಿದ್ಯಾವಂತ ನಾಗರಿಕರೇ ಹೊರತು ಅನಾಗರಿಕರಲ್ಲ. ಇದರ ಪರಿಣಾಮವಾಗಿ ಹಲವಾರು ಕನಸುಗಳನ್ನು ಹೊತ್ತಿದ್ದ ಪುಟ್ಟ ಮನಸ್ಸುಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಶೋಚನೀಯ ಎಂದರು.
ಇಂದಿನ ಯುವ ಪೀಳಿಗೆ ಕೇವಲ ಅಂಕಗಳಿಗಾಗಿ ಮಾತ್ರ ಶಿಕ್ಷಣ ಪಡೆಯುತ್ತಿರುವುದು ಬೇಸರದ ಸಂಗತಿ. ಮೆಕಾಲೆ ಅವರ ಕಾಲದಿಂದ ನಮಗೆ ಶಿಕ್ಷಣ ಬಂದಿದೆ ಎಂದು ನಾವು ಭಾವಿಸುತ್ತೇವೆ. ಆದರೆ ನಮ್ಮಲ್ಲಿ ಕ್ರಿಸ್ತ ಪೂರ್ವ 795 ಕ್ಕೂ ಮುಂಚಿತವಾಗಿಯೇ ಗುರು-ಮುನಿಗಳಿಂದ ಶಿಕ್ಷಣ ಪಡೆಯುತ್ತಿದ್ದೆವು ಎಂಬುದನ್ನು ಮರೆಯಬಾರದು. ಯುವಕರಿಂದ ಬಲಿಷ್ಠ ಭಾರತ ನಿಮಾರ್ಣವಾಗಲು ಇಂತಹ ಪ್ರೇರಣಾ ಉಪನ್ಯಾಸಗಳು ಅಗತ್ಯ. ಇದೀಗ ಗ್ರಂಥಾಲಯಗಳ ಬಳಕೆ ಕಡಿಮೆಯಾಗಿದೆ. ಓದುವ ಅಭ್ಯಾಸದಿಂದ ಕಳೆದುಕೊಳ್ಳುವ ವಸ್ತು ಯಾವುದೂ ಇಲ್ಲ. ಸ್ನೇಹಿತರು, ಸಹಚರರು ದಾರಿ ತಪ್ಪಿಸಬಹುದು, ಆದರೆ, ಪುಸ್ತಕಗಳು ಎಂದಿಗೂ ನಿಮ್ಮನ್ನು ದಾರಿ ತಪ್ಪಿಸುವುದಿಲ್ಲ ಎಂದು ಹೇಳಿದರು.
ತುಮಕೂರು ವಿವಿ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಪರೀಕ್ಷಾಂಗ ಕುಲಸಚಿವ ಪ್ರೊ.ಎಚ್.ಎಸ್. ಮೋಹನ, ಡಾ.ಎನ್.ಟಿ.ನೀಲಕಂಠ ಉಪಸ್ಥಿತರಿದ್ದರು.
ಪ್ರೊ. ಜಿ. ಸುದರ್ಶನ ರೆಡ್ಡಿ ಸ್ವಾಗತಿಸಿದರು. ವಿವಿ ಕಲಾ ಕಾಲೇಜಿನ ಪ್ರಾಚಾಯೆರ್ ಡಾ. ಜಿ. ದಾಕ್ಷಾಯಿಣಿ ವಂದಿಸಿದರು. ಡಾ. ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.