ತುಮಕೂರಿನ ನಿವೃತ್ತರ ಮಹಾ ಮನೆಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯತಡೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ನ್ಯಾ.ಲೋಕೇಶ್ ಧನಪಾಲ್ ಹವಲೆ ಉದ್ಘಾಟಿಸಿದರು. ಬಾ.ಹ.ರಮಾಕುಮಾರಿ, ಡಾ.ಸಿದ್ದರಾಮಣ್ಣ, ನರಸಿಂಹರೆಡ್ಡಿ, ಚಿದಾನಂದಮೂರ್ತಿ, ಡಾ. ಶಿವಾನಂದ್ ಮತ್ತಿತರರು ಇದ್ದರು.
- ಹಿರಿಯರ ಮೇಲಿನ ದೌರ್ಜನ್ಯ ತಡೆ ಅರಿವು ಕಾರ್ಯಕ್ರಮ
- ನಿವೃತ್ತರ ಮಹಾಮನೆಯಲ್ಲಿ
- ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಬೇಡ
ತುಮಕೂರು: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ನಮ್ಮ ಸಂಸ್ಕೃತಿಯನ್ನು ಕಡೆಗಣಿಸಿದ ಪರಿಣಾಮ ಯುವಜನತೆಗೆ ಹಿರಿಯರ ಬಗ್ಗೆ ಗೌರವವೇ ಇಲ್ಲದಂತಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಲೋಕೇಶ್ ಧನಪಾಲ್ ಹವಲೆ ಹೇಳಿದರು.
ನಗರದ ನಿವೃತ್ತರ ಮಹಾ ಮನೆಯಲ್ಲಿ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯತಡೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರ ಬಗ್ಗೆ ಗೌರವ ಕೊಡುವ ಮನ:ಸ್ಥಿತಿ ಈಗಿನವರಲ್ಲಿ ಮರೆಯಾಗುತ್ತಿದ್ದು ಇದಕ್ಕೆಲ್ಲ ಪಾಶ್ಚಾತ್ಯ ಸಂಸ್ಕತಿಯ ಅನುಕರಣೆಯೇ ಕಾರಣ ಎಂದು ಬೇಸರಿಸಿದರು.
ಇಡೀ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ಸಂಸ್ಕೃತಿ ನಮ್ಮದಾಗಿತ್ತು. ಈ ದೇಶಕ್ಕೆ ತನ್ನದೇ ಆದ ಇತಿಹಾಸ ಇದೆ. ಆದರೆ, ಪಾಶ್ಚಿಮಾತ್ಯರ ಅನುಕರಣೆಗೆ ಮಾರು ಹೋಗಿ ನಮ್ಮ ಸಂಸ್ಕೃತಿಯನ್ನು ಕಡೆಗಣಿಸಲಾಗಿದೆ. ನಮ್ಮ ಯುವ ಜನತೆ ಹಿರಿಯರ ಬಗ್ಗೆ ಗೌರವ ಕೊಡುವುದನ್ನು ಮರೆತು ತೋರ್ಪಡಿಕೆಯ ಸಂಸ್ಕೃತಿಗೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿಯೇ ಹಿರಿಯರಿಗೆ ಕಾನೂನುಗಳು ಬರಲು ಕಾರಣವಾಗಿದೆ. 2007 ರಲ್ಲಿ ಜಾರಿಗೆ ಬಂದ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯ ಪ್ರಕಾರ ಮಕ್ಕಳು ತಂದೆ ತಾಯಿಯರನ್ನು ದೂರ ಮಾಡಿದರೆ ರ್ನಿಲಕ್ಷಿಸಿದರೆ ಉಪ ವಿಭಾಗಾಧಿಕಾರಿಗಳ ನ್ಯಾಯ ಮಂಡಳಿಗೆ ಅರ್ಜಿ ಸಲ್ಲಿಸಿ ಸರಳ ವಿಧಾನದಲ್ಲಿ ನೆರವು ಪಡೆಯಬಹುದು. ಪೋಲಿಸರ ಸಹಾಯವನ್ನೂ ಕೋರಬಹುದು. ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಸಲಹೆ ಸಹಕಾರ ಪಡೆಯಬಹುದು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಡಾ. ಸಿದ್ದರಾಮಣ್ಣ, ಜೀವನವಿಡೀ ದುಡಿದು ವಯಸ್ಸಾದ ಸಂದರ್ಭದಲ್ಲಿಯೇ ಹಿರಿಯರಿಗೆ ಸಮಸ್ಯೆಗಳು ಮತ್ತು ಸವಾಲುಗಳು ಹೆಚ್ಚುತ್ತಿರುವುದು ನಾಗರಿಕ ಸಮಾಜಕ್ಕೆ ಅಂಟಿದ ಕಳಂಕವಾಗಿದೆ. ಬದುಕಿನ ಕೊನೆಯ ಘಟ್ಟದಲ್ಲಿ ಇರುವಾಗ ಅವರನ್ನು ಪ್ರೀತಿಯಿಂದ ಮಾತನಾಡಿಸಿದರಷ್ಟೇ ಸಾಕು. ನಮ್ಮ ಜನರಿಗೆ ಅಷ್ಟು ವ್ಯವಧಾನವೂ ಇಲ್ಲವಾಗಿದೆ. ಆಸ್ತಿ ಹಣ ಇಲ್ಲವೆಂದರೆ ಹಿರಿಯರ ಬಗ್ಗೆ ಕಾಳಜಿ ತೋರುವವರೇ ಇಲ್ಲವಾಗುತ್ತಾರೆ. ಇವೆಲ್ಲ ಅತ್ಯಂತ ದುರಂತಮಯ ಸನ್ನಿವೇಶಗಳು ಎಂದು ಕಳವಳ ವ್ಯಕ್ತಪಡಿಸಿದರು.
ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಅಧ್ಯಕ್ಷತೆವಹಿಸಿದ್ದರು. ಸಂಘದ ಖಜಾಂಚಿ ನರಸಿಂಹರೆಡ್ಡಿ, ಪದಾಧಿಕಾರಿಗಳಾದ ನಂದೀಶ್, ಲೀಲಾವತಿ, ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸುಶೀಲ ಪ್ರಾರ್ಥಿಸಿ, ಹಿರಿಯ ನಾಗರಿಕರ ಮತ್ತು ಸಬಲೀಕರಣ ಇಲಾಖೆ ಅಧಿಕಾರಿ ಚಿದಾನಂದಮೂರ್ತಿ ಸ್ವಾಗತಿಸಿದರು. ಡಾ. ಶಿವಾನಂದ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಪುಟ್ಟನರಸಯ್ಯ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಅನಂತರಾಮಯ್ಯ ವಂದಿಸಿದರು.