- ಬಿಜೆಪಿ ಶಾಸಕ ಸುರೇಶಗೌಡ
- ಕಾಂಗ್ರೆಸ್ ಹಿತಾಸಕ್ತಿಗಳ ಹಸ್ತಕ್ಷೇಪ
- ಸಿಎಂ ಸ್ವಂತ ಆಯ್ಕೆ ಇಲ್ಲ
ತುಮಕೂರು: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಒಬ್ಬರು ಅವರ ಆಯ್ಕೆಯ ಸಚಿವರು ಇದ್ದಂತೆ ಕಾಣುತ್ತಿಲ್ಲ. ಈ ಟೀಂ ನೋಡಿದರೆ ಕಾಂಗ್ರೆಸ್ ಪಕ್ಷದ ಅನೇಕ ಹಿತಾಸಕ್ತಿಗಳು ಡಿಕೆಶಿ ಅವರನ್ನು ಕಟ್ಟಿಹಾಕಿದಂತೆ ಭಾಸವಾಗುತ್ತದೆ ಎಂದು ಬಿಜೆಪಿ ಶಾಸಕ ಬಿ.ಸುರೇಶಗೌಡ ಹೇಳಿದ್ದಾರೆ.
ಒಬ್ಬ ಹೊಸ ನಾಯಕ ಬಂದಾಗ ಅವರದ್ದೇ ಆಯ್ಕೆಯ ಜನರನ್ನು ಇಷ್ಟು ಕೊಂಡು ಆಡಳಿತ ಮಾಡಬೇಕು ಎಂದು ಬಯಸುವುದು ಸಹಜ. ಆದರೆ, ಈ ಹೊಸ ಸಂಪುಟದಲ್ಲಿ ಸಿಎಂ ಸ್ವಂತ ಆಯ್ಕೆ ಯಾವುದು ಇಲ್ಲ. ಮೊದಲ ಕಂತಿನಲ್ಲಿ ಮಹಿಳೆಗೆ ಸ್ಥಾನ ಇಲ್ಲದೇ ಇರುವುದು ಎದ್ದು ಕಾಣುವ ಲೋಪ. ನಮ್ಮ ಪ್ರಧಾನಿ ನರೇಂದ್ರ ಮೋದಿ ಶೇಕಡಾ 33ರ ಮಹಿಳಾ ವೀಸಲಾತಿ ಮಸೂದೆ ಮಂಡಿಸಿದ್ದಾಗ ಅದನ್ನು ಸೋಲಿಸಿದ ಕಾಂಗ್ರೆಸ್ ಪಕ್ಷದ ಮಹಿಳಾ ವಿರೋಧಿ ನೀತಿ ಇಲ್ಲಿಯು ಮುಂದುವರಿದಿದೆ ಎಂದು ದೂರಿದರು.
ಶಿವಕುಮಾರ್ ಸಂಪುಟದಲ್ಲಿ ಡಾ.ಯತೀಂದ್ರ ಅವರನ್ನು ಬಿಟ್ಟರೆ ಯಾವುದೇ ಹೊಸ ಮುಖ ಇಲ್ಲ. ಯತೀಂದ್ರ ಅವರ ಸೇರ್ಪಡೆಗೆ ಯಾವ ಮಾನದಂಡ ಎಂದು ಹೆಚ್ಚು ಯೋಚಿಸಬೇಕಾದ ಅಗತ್ಯವಿಲ್ಲ. ಮುಖ್ಯಮಂತ್ರಿಯಾಗಲು ದೊಡ್ಡ ತಪಸ್ಸನ್ನೇ ಮಾಡಿರುವ ಶಿವಕುಮಾರ್ ಅವರು ಈಗ ಹೊಸ ಬಾಟಲಿಯಲ್ಲಿ ಹಳೇ ಮದ್ಯ ಇಟ್ಟುಕೊಂಡು ಹೇಗೆ ರಾಜ್ಯಕ್ಕೆ ದಕ್ಷ ಮತ್ತು ಪ್ರಾಮಾಣಿಕ ಆಡಳಿತ ಕೊಡುತ್ತಾರೆ ತಿಳಿಯದು. ಇನ್ನೂ ಡಿಸಿಎಂ ಆಗಿರುವ ನಮ್ಮ ಜಿಲ್ಲೆಯ ಡಾ.ಜಿ.ಪರಮೇಶ್ವರ್ ಗೆ ಅವರ ಸಾಮರ್ಥ್ಯಕ್ಕೆ ತಕ್ಕ ಖಾತೆ ದೊರೆತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಿ ಎಂದರು.