ತುಮಕೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಗಾರದಲ್ಲಿ ಮಣ್ಣಿನ ಗಣೇಶಮೂರ್ತಿ ತಯಾರಿಸಿ ಖುಷಿಪಟ್ಟ ಮಕ್ಕಳು...
- ಪರಿಸರ ಸ್ನೇಹಿ ಗಣೇಶಮೂರ್ತಿ ತಯಾರಿಕೆ
- ಪ್ರೆಸ್ ಕ್ಲಬ್, ವಣೋರ್ದಯ ಆರ್ಟ್ಸ್ ಸಹಯೋಗ
ತುಮಕೂರು: ಗಣೇಶ ಚತುರ್ಥಿ ಹಬ್ಬ ಎಂದರೆ ಸಂಭ್ರಮ, ಸಡಗರ, ಭಕ್ತಿ. ಆದರೆ ಈ ಸಂಭ್ರಮದ ಜತೆಗೆ ಪರಿಸರ ಸಂರಕ್ಷಣೆಯ ಕಾಳಜಿಯನ್ನೂ ಬೆಳೆಸಬಹುದು ಎಂಬುದನ್ನು ತುಮಕೂರಿನ ಪುಟಾಣಿಗಳು ಕೈಚಳಕದ ಮೂಲಕ ಸಾರಿದರು.
ನಗರದ ಪ್ರೆಸ್ ಕ್ಲಬ್ ಆವರಣದ ಆಲದಮರ ಪಾರ್ಕ್ ನೆರಳಿನಲ್ಲಿ ಮಕ್ಕಳು ಜೇಡಿ ಮಣ್ಣು ಕೈಯಲ್ಲಿ ಹಿಡಿದುಕೊಂಡು ಗಣೇಶ ಮೂರ್ತಿಗಳಿಗೆ ರೂಪ ನೀಡುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು. ಪುಟ್ಟ ಕೈಗಳಲ್ಲಿ ಅರಳಿದ ಗಣೇಶನ ವಿವಿಧ ರೂಪಗಳು ಮಕ್ಕಳ ಸೃಜನಶೀಲತೆಗೆ ಸಾಕ್ಷಿಯಾದವು.
ಪ್ರೆಸ್ ಕ್ಲಬ್ ತುಮಕೂರು ಹಾಗೂ ವಣೋರ್ದಯ ಆರ್ಟ್ ಗ್ರೂಪ್ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರಿಕಾ ಕಾರ್ಯಾಗಾರದಲ್ಲಿ ನೂರಾರು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು. ಕಲ್ಪನೆಗೆ ತಕ್ಕಂತೆ ಜೇಡಿ ಮಣ್ಣಿನಿಂದ ಬಗೆಬಗೆಯ ಗಣೇಶ ಮೂರ್ತಿಗಳನ್ನು ತಯಾರಿಸುವ ಮೂಲಕ ಮಕ್ಕಳ ಪ್ರತಿಭೆ ಅನಾವರಣಗೊಳಿಸಿದರು.
ಮಕ್ಕಳಿಗೆ ಸಾಥ್ ನೀಡಿದ ಪೋಷಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪುಟಾಣಿಗಳ ಉತ್ಸಾಹವನ್ನು ಹೆಚ್ಚಿಸಿದರು. ಮಣ್ಣು ಹದಗೊಳಿಸಿ, ಅದಕ್ಕೆ ಆಕಾರ ನೀಡಿ, ಗಣೇಶನ ವಿವಿಧ ಭಂಗಿಗಳನ್ನು ಮೂಡಿಸುವಲ್ಲಿ ಮಕ್ಕಳು ತಲ್ಲೀನರಾಗಿದ್ದರು. ಸ್ಪರ್ಧೆಯ ವಾತಾವರಣದಲ್ಲಿ ಹಬ್ಬದ ಸಂಭ್ರಮವೂ ಮೇಳೈಸಿತ್ತು.
ಕೇವಲ ಮೂರ್ತಿ ತಯಾರಿಸುವ ಸ್ಪರ್ಧೆಯಾಗಿರದೆ, ಮಕ್ಕಳ ಕಲಾ ಕೌಶಲ್ಯ ಬೆಳೆಸುವುದು, ಸೃಜನಶೀಲತೆ ಉತ್ತೇಜಿಸುವುದು ಹಾಗೂ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆಯ ಕುರಿತು ಅರಿವು ಮೂಡಿಸುವುದು. ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.
ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪಿಒಪಿ ಸೇರಿದಂತೆ ಪರಿಸರಕ್ಕೆ ಹಾನಿಕಾರಕ ವಸ್ತುಗಳಿಂದ ತಯಾರಿಸಿದ ಮೂರ್ತಿಗಳ ಬದಲಿಗೆ ನೈಸರ್ಗಿಕ ಜೇಡಿ ಮಣ್ಣಿನ ಗಣೇಶ ಮೂರ್ತಿಗಳನ್ನು ಬಳಸುವ ಅಗತ್ಯವಿದೆ ಎಂಬ ಸಂದೇಶವೂ ಕಾರ್ಯಕ್ರಮದ ಮೂಲಕ ಮೂಡಿಬಂತು.
ಹಬ್ಬದ ಸಂಭ್ರಮದ ನಡುವೆಯೇ ಪರಿಸರದ ಕಾಳಜಿಯನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಪುಟ್ಟ ಕೈಗಳಿಂದ ರೂಪುಗೊಂಡ ಮಣ್ಣಿನ ಗಣೇಶ ಮೂರ್ತಿಗಳು, "ಹಬ್ಬವೂ ಇರಲಿ... ಪರಿಸರವೂ ಉಳಿಯಲಿ' ಎಂಬ ಸಂದೇಶವನ್ನು ಸಾರಿದವು.
ಕಾರ್ಯಕ್ರಮದಲ್ಲಿ ವಣೋರ್ದಯ ಆರ್ಟ್ಸ್ ಗ್ರೂಪ್ ಟ್ರಸ್ಟ್ ಅಧ್ಯಕ್ಷ -ಕಿಶೋರ್ ಕುಮಾರ್, ಪ್ರೆಸ್ ಕ್ಲಬ್ ಅಧ್ಯಕ್ಷ ಡಿ.ಎಸ್.ಶಶಿಧರ್, ಕಾರ್ಯನಿರತ ಪತ್ರಕರ್ತರ ಸಂದ ಜಿಲ್ಲಾಧ್ಯಕ್ಷ ಎಲ್.ಯೋಗೇಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ -ಎಸ್.ಟಿ.ಶ್ರೀನಿವಾಸ್, ನಿವೃತ್ತ ಶಿಕ್ಷಕ ಆರ್.ವಿ.ಪುಟ್ಟಕಾಮಣ್ಣಚಿತ್ರಕಲಾವಿದರಾದ ಅಶೋಕ್, ಹರ್ಷ ಹರಿಯಬ್ಬೇ, ತಾರಕೇಶ್, ಅರುಣ್ ಮತ್ತಿತರರಿದ್ದರು.